ಯುಎಇ: ವಿಮಾನ ದುರಂತ ಸಂತ್ರಸ್ತರಿಗೆ ದೂತಾವಾಸಗಳಲ್ಲಿ ಶ್ರದ್ಧಾಂಜಲಿ

Update: 2020-08-09 18:09 GMT

ದುಬೈ, ಆ. 9: ಶುಕ್ರವಾರ ಕಲ್ಲಿಕೋಟೆಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ದುಬೈ-ಕಲ್ಲಿಕೋಟೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕರಿಗೆ ಯುಎಇಯಲ್ಲಿರುವ ಭಾರತೀಯ ದೂತಾವಾಸಗಳು ರವಿವಾರ ಶ್ರದ್ಧಾಂಜಲಿ ಸಲ್ಲಿಸಿವೆ.

ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಕಚೇರಿಯ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ದುರಂತದಲ್ಲಿ ಮೃತಪಟ್ಟವರಿಗಾಗಿ ಪ್ರಾರ್ಥನೆ ಸಲ್ಲಿಸಿದರು.

‘‘ದುಬೈಯಿಂದ ಪ್ರಯಾಣಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್1344 ಕಲ್ಲಿಕೋಟೆಯಲ್ಲಿ ಅಪಘಾತಕ್ಕೆ ಒಳಗಾದ ಮೃತಪಟ್ಟ ಪ್ರಯಾಣಿಕರಿಗಾಗಿ ರಾಯಭಾರಿ ಪವನ್ ಕಪೂರ್ ನೇತೃತ್ವದಲ್ಲಿ ಭಾರತೀಯ ರಾಯಭಾರ ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾರ್ಥನೆ ಸಲ್ಲಿಸಿದರು. ಎಲ್ಲ ಗಾಯಗೊಂಡವರು ಶೀಘ್ರವಾಗಿ ಚೇತರಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ’’ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ದುಬೈ ಕೌನ್ಸುಲೇಟ್ ಕಚೇರಿಯೂ ರವಿವಾರ ಇದೇ ರೀತಿಯ ಪ್ರಾರ್ಥನಾ ಕೂಟವನ್ನು ಏರ್ಪಡಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಶುಕ್ರವಾರ ವಾಪಸ್ ಕರೆತರುತ್ತಿದ್ದ ವಿಮಾನವು ಕಲ್ಲಿಕೋಟೆ ವಿಮಾನ ನಿಲ್ದಾಣದ ರನ್‌ವೇಯನ್ನು ಮೀರಿ ಹೋಗಿದ್ದು ಬಳಿಕ ಕಣಿವೆಗೆ ಉರುಳಿದೆ. ಅಪಘಾತದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News