ಅತಿಕ್ರಮಿಸಲ್ಪಟ್ಟ ಫೆಲೆಸ್ತೀನ್ ನ ಪ್ರದೇಶಗಳ ಮೇಲಿನ ತನ್ನ ಸಾರ್ವಭೌಮತೆ ಅಮಾನತಿಗೆ ಒಪ್ಪಿದ ಇಸ್ರೇಲ್

Update: 2020-08-13 17:31 GMT

ದುಬೈ,ಆ.13: ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸಂಪೂರ್ಣವಾಗಿ ಸಹಜಗೊಳಿಸಲು ನೆರವಾಗುವಂತಹ ಐತಿಹಾಸಿಕ ಒಪ್ಪಂದವನ್ನು ಇಸ್ರೇಲ್ ಹಾಗೂ ಯುಎಇ ಗುರುವಾರ ಘೋಷಿಸಿವೆ.

   ಈ ಒಪ್ಪಂದದನ್ವಯ ಇಸ್ರೇಲ್, ಪಶ್ಚಿಮ ದಂಡೆ ಪ್ರದೇಶದಲ್ಲಿ ತಾನು ಅತಿಕ್ರಮಿಸಿದ ಫೆಲೆಸ್ತೀನ್ ಪ್ರದೇಶಗಳ ಮೇಲಿನ ತನ್ನ ಸಾರ್ವಭೌಮತೆಯನ್ನು ಅಮಾನತಿನಲ್ಲಿಡಲು ಒಪ್ಪಿಕೊಂಡಿದೆ.

    ಇಸ್ರೇಲ್ ಹಾಗೂ ಯುಎಇ ನಡುವೆ ನಡೆದ ಸುದೀರ್ಘ ಚರ್ಚೆ, ಸಮಾಲೋಚನೆಗಳ ಫಲವಾಗಿ ಶಾಂತಿ ಒಪ್ಪಂದ ಏರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಈ ಶಾಂತಿ ಒಪ್ಪಂದದ ಏರ್ಪಡಿಸಲು ಮಧ್ಯಸ್ಥಿಕೆ ವಹಿಸಿತ್ತು ಎಂದು ಶ್ವೇತಭವನದ ಅಧಿಕಾರಿಗಳು ರಾಯ್ಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ದುಬೈನ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ನಡುವೆ ನಡೆದ ದೂರವಾಣಿ ಸಂಭಾಷಣೆಗಳ ಬಳಿಕ ಈ ಒಪ್ಪಂದವನ್ನು ಘೋಷಿಸಲಾಯಿತೆಂದು ಅವರು ಹೇಳಿದ್ದಾರೆ.

 ಪ್ರಸಕ್ತ ಯುಎಇಯು ಇಸ್ರೇಲ್ ದೇಶದ ಜೊತೆ ಸಕ್ರಿಯವಾದ ನಂಟನ್ನು ಹೊಂದಿರುವ ಮೂರನೆ ಅರಬ್ ರಾಷ್ಟ್ರವಾಗಿದೆ.

  ಈ ಐತಿಹಾಸಿಕ ರಾಜತಾಂತ್ರಿಕ ಬೆಳವಣಿಗೆಯು, ಮಧ್ಯಏಶ್ಯಾ ಪ್ರಾಂತದಲ್ಲಿ ಶಾಂತಿ ಸ್ಥಾಪನೆಯನ್ನು ಮುನ್ನಡೆಸಲಿದೆ ಹಾಗೂ ಈ ಮೂವರು ನಾಯಕರ ದಿಟ್ಟವಾದ ರಾಜತಾಂತ್ರಿಕತೆ ಹಾಗೂ ದೂರದರ್ಶಿತ್ವಕ್ಕೆ ಮತ್ತು ಈ ಪ್ರಾಂತದಲ್ಲಿ ಭಾರೀ ಅವಕಾಶಗಳನ್ನು ತೆರೆಯಲಿರುವ ನೂತನ ಪಥವೊಂದನ್ನು ರೂಪಿಸುವ ಯುಎಇ ಹಾಗೂ ಇಸ್ರೇಲ್‌ನ ಧೈಯವಂತಿಕೆಗೆ ಸಾಕ್ಷಿಯಾಗಿದೆ’’ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

  ಇಸ್ರೇಲ್-ಯುಎಇ ಒಪ್ಪಂದವು, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಇಟ್ಟ ಪ್ರಥಮ ಹೆಜ್ಜೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸಿಸಿದ್ದಾರೆ.

  ‘‘ ಹೆಪ್ಪುಗಟ್ಟಿದ ಹಿಮವು ಈಗ ಒಡೆದಿದೆ. ಯುಎಇಯನ್ನು ಇನ್ನೂ ಹೆಚ್ಚಿನ ಸಂಖ್ಯೆಯ ಅರಬ್ ಹಾಗೂ ಇತರ ಮುಸ್ಲಿಂ ದೇಶಗಳು ಅನುಸರಿಸುವುದನ್ನು ನಾನು ನಿರೀಕ್ಷಿಸುತ್ತೇನೆ’’ ಎಂದವರು ಹೇಳಿದರು.

ಆದರೆ ಈ ಒಪ್ಪಂದಕ್ಕೆ ಫೆಲೆಸ್ತೀನ್ ಅಧಿಕಾರಿ ಹನಾನ್ ವಿರೋಧ ವ್ಯಕ್ತಪಡಿಸಿದ್ದಾರೆ.

‘‘ಅತಿಕ್ರಮಣದ ಆರಂಭದಿಂದ ಹಿಡಿದು ಈವರೆಗೂ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ಅಕ್ರಮವಾಗಿ ನಡೆಸುತ್ತಿರುವ ಕೃತ್ಯಗಳಿಗಾಗಿ ಅದಕ್ಕೆ ಪುರಸ್ಕಾರ ದೊರೆತಿದೆ’’ ಎಂದವರು ಕಟಕಿಯಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News