ದುಬೈ: ಶಾಲೆ ಪುನಾರಂಭಕ್ಕೆ ಮುನ್ನ ಶಿಕ್ಷಕರು, ಸಿಬ್ಬಂದಿಗೆ ಕೋವಿಡ್ ತಪಾಸಣೆ

Update: 2020-08-28 16:43 GMT

ದುಬೈ,ಆ.28: ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಚ್ಚಲ್ಪಟ್ಟಿರುವ ಶಾಲೆಗಳನ್ನುಪುನಾರಂಭಿಸುವ ಮುನ್ನ ಶಾಲಾ ಅಧ್ಯಾಪಕರು ಮತ್ತಿತರ ಶಾಲಾ ಸಿಬ್ಬಂದಿಯನ್ನು ಕೋವಿಡ್-19 ತಪಾಸಣೆಗೆ ಕಡ್ಡಾಯವಾಗಿ ಒಳಪಡಿಸಬೇಕೆಂದು ಆದೇಶಿಸಲಾಗಿದೆ.

ಏಳು ಶಾಲೆಗಳನ್ನು ಕೋವಿಡ್-19 ತಪಾಸಣಾ ಕೇಂದ್ರಗಳಾಗಿ ಆಯ್ಕೆ ಮಾಡಲಾಗಿದ್ದು, ಅಲ್ಲಿ ದುಬೈನ ವಿವಿಧ ಶಾಲೆಗಳ ಅಧ್ಯಾಪಕರು ಹಾಗೂ ಶಾಲಾ ಸಿಬ್ಬಂದಿ ಸೋಂಕು ತಪಾಸಣೆಗೊಳಗಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ಅಧ್ಯಾಪಕರು ಮತ್ತಿತರ ಶಾಲಾ ಸಿಬ್ಬಂದಿ ಕೊರೋನ ಸೋಂಕಿನ ತಪಾಸಣೆಗೊಳಪಟ್ಟಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸುರಕ್ಷಿತವೆಂದು ಪಾಲಕರಿಗೆ ಖಾತರಿಯಾಗುತ್ತದೆ ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ದುಬೈನ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಬ್ದುಲ್ಲಾ ಅಲ್ ಕರಾಮ ಅವರು ತಿಳಿಸಿದ್ದಾರೆ. ಕೊರೋನ ಸೋಂಕು ಹರಡುವಿಕೆ ತಡೆಗೆ ನಿಗದಿಪಡಿಸಲಾದ ಸುರಕ್ಷಾ ಮಾನದಂಡಗಳನ್ನು ಶಾಲೆಗಳು ಅನುಸರಿಸುತ್ತವಿಯೇ ಎಂಬ ಬಗ್ಗೆ ಇಲಾಖೆಯು ಕಟ್ಟುನಿಟ್ಟಾದ ಪರಿಶೀಲನೆಯನ್ನು ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆಯೇ ದುಬೈ ಆಡಳಿತವು ಶಾಲೆ ಮತ್ತಿತರ ಶಿಕ್ಷಣ ಸಂಸ್ಥೆಗಳಲ್ಲಿ ಸೋಂಕಿನ ವಿರುದ್ಧ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News