ಅಬುಧಾಬಿ, ದುಬೈಯಲ್ಲಿ ಸ್ಫೋಟ: ಮೂವರು ಮೃತ್ಯು

Update: 2020-08-31 16:03 GMT
ಪೋಟೊ ಕೃಪೆ: twitter.com

ದುಬೈ (ಯುಎಇ), ಆ. 31: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿ ಮತ್ತು ಅದರ ಪ್ರವಾಸಿ ನಗರ ದುಬೈಯಲ್ಲಿ ಸೋಮವಾರ ಎರಡು ಸ್ಫೋಟಗಳು ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಬುಧಾಬಿ ಸರಕಾರದ ಮಾಧ್ಯಮ ಕಚೇರಿ ತಿಳಿಸಿದೆ. ಸ್ಫೋಟದ ಪರಿಣಾಮವು ನಗರದ ರಶೀದ್ ಬಿನ್ ಸಯೀದ್ ರಸ್ತೆಯಲ್ಲಿರುವ ಎರಡು ರೆಸ್ಟೋರೆಂಟ್‌ಗಳ ಮೇಲೆ ಆಗಿದೆ ಎಂದು ‘ದ ನ್ಯಾಶನಲ್’ ವರದಿ ಮಾಡಿದೆ.

ಇದೇ ಸ್ಫೋಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಆ ಕಟ್ಟಡ ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಅನಿಲ ಕಂಟೇನರ್‌ಗಳಿಗೆ ಇಂಧನ ತುಂಬಿಸಿದ ಬಳಿಕ ಅವುಗಳ ಜೋಡಣೆಯಲ್ಲಿ ಆದ ವ್ಯತ್ಯಾಸದಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಮಾಧ್ಯಮ ಕಚೇರಿ ಹೇಳಿದೆ.

ದುಬೈಯಲ್ಲಿ, ಸೋಮವಾರ ಬೆಳಗ್ಗೆ ರೆಸ್ಟೋರೆಂಟ್ ಒಂದರಲ್ಲಿ ಅನಿಲ ಸಿಲಿಂಡರ್ ಸ್ಫೋಟಿಸಿದಾಗ ಓರ್ವ ವ್ಯಕ್ತಿ ಮೃಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ದುಬೈಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ತಳಮಹಡಿ ಹಾನಿಗೊಂಡಿದೆ ಎಂದು ದುಬೈ ಸಿವಿಲ್ ಡಿಫೆನ್ಸ್ ವಕ್ತಾರರನ್ನು ಉಲ್ಲೇಖಿಸಿ ‘ದ ನ್ಯಾಶನಲ್’ ಪತ್ರಿಕೆ ವರದಿ ಮಾಡಿದೆ. ಬೆಂಕಿಯನ್ನು 33 ನಿಮಿಷಗಳಲ್ಲಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News