ಸೌದಿ ಮೂಲಕ ಯುಎಇಯಿಂದ ಎಲ್ಲ ದೇಶಗಳಿಗೆ ವಿಮಾನ ಯಾನಕ್ಕೆ ಒಪ್ಪಿಗೆ

Update: 2020-09-02 16:28 GMT

ರಿಯಾದ್ (ಸೌದಿ ಅರೇಬಿಯ), ಸೆ. 2: ತನ್ನ ವಾಯು ಪ್ರದೇಶದ ಮೂಲಕ ಯುಎಇಯಿಂದ ಎಲ್ಲ ದೇಶಗಳಿಗೆ ಹೋಗುವ ವಿಮಾನಗಳಿಗೆ ಅನುಮೋದನೆ ನೀಡಲು ಸೌದಿ ಅರೇಬಿಯ ಒಪ್ಪಿಕೊಂಡಿದೆ ಎಂದು ಆ ದೇಶದ ಸರಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.

ಅಬುಧಾಬಿಗೆ ಹೋಗುವ ಇಸ್ರೇಲ್ ವಿಮಾನವೊಂದಕ್ಕೆ ತನ್ನ ವಾಯುಪ್ರದೇಶದ ಮೂಲಕ ಹಾದು ಹೋಗಲು ಅವಕಾಶ ನೀಡಿದ ಕೆಲವೇ ದಿನಗಳ ಬಳಿಕ ಸೌದಿ ಅರೇಬಿಯ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಯುಎಇಗೆ ಎಲ್ಲ ದೇಶಗಳಿಂದ ಬರುವ ಹಾಗೂ ಅಲ್ಲಿಂದ ಎಲ್ಲ ದೇಶಗಳಿಗೆ ಹೋಗುವ ವಿಮಾನಗಳ ಸಂಚಾರಕ್ಕೆ ಸೌದಿ ಅರೇಬಿಯದ ವಾಯು ಪ್ರದೇಶದಲ್ಲಿ ಅವಕಾಶ ನೀಡುವಂತೆ ಯುಎಇಯ ಮನವಿಯನ್ನು ಸೌದಿ ಅರೇಬಿಯ ಅಂಗೀಕರಿಸಿದೆ ಎಂದು ನಾಗರಿಕ ವಾಯುಯಾನ ಪ್ರಾಧಿಕಾರದ ಮೂಲವೊಂದನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಈ ನಡುವೆ, ಸೋಮವಾರ ಸೌದಿ ಅರೇಬಿಯದ ಮೂಲಕ ಯುಎಇಗೆ ಹಾರಿದ ಇಸ್ರೇಲ್‌ನ ಮೊದಲ ನೇರ ವಾಣಿಜ್ಯ ವಿಮಾನವು ಕೊನೆಯದಾಗಿರುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

‘‘ಇಸ್ರೇಲ್‌ನ ವಿಮಾನಗಳು ಹಾಗೂ ಎಲ್ಲ ದೇಶಗಳ ವಿಮಾನಗಳು ಇಸ್ರೇಲ್‌ನಿಂದ ಅಬುಧಾಬಿ ಮತ್ತು ದುಬೈಗೆ ನೇರವಾಗಿ ಹಾರುತ್ತವೆ ಹಾಗೂ ಅಲ್ಲಿಂದ ವಾಪಸ್ ಬರುತ್ತವೆ’’ ಎಂದು ನೆತನ್ಯಾಹು ಹೇಳಿದ್ದಾರೆ.

ಸೋಮವಾರ ಇಸ್ರೇಲ್‌ನಿಂದ ಯುಎಇಗೆ ನೇರವಾಗಿ ಹಾರಿದ ವಿಮಾನದಲ್ಲಿ ಅಮೆರಿಕ-ಇಸ್ರೇಲ್ ನಿಯೋಗವೊಂದು ಪ್ರಯಾಣಿಸಿತ್ತು. ಯುಎಇ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧವು ಸಾಮಾನ್ಯ ಸ್ಥಿತಿಗೆ ಮರಳಿದೆ ಎನ್ನುವುದನ್ನು ಸಾಂಕೇತಿಸುವುದಕ್ಕಾಗಿ ನಿಯೋಗವು ಇಸ್ರೇಲ್‌ನಿಂದ ಯುಎಇಗೆ ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News