ಫೆಲೆಸ್ತೀನ್ ವಿವಾದಕ್ಕೆ ನ್ಯಾಯೋಚಿತ, ಶಾಶ್ವತ ಪರಿಹಾರಕ್ಕೆ ಸೌದಿ ಉತ್ಸುಕ

Update: 2020-09-07 17:32 GMT

ರಿಯಾದ್ (ಸೌದಿ ಅರೇಬಿಯ), ಸೆ. 7: ಫೆಲೆಸ್ತೀನ್ ವಿವಾದಕ್ಕೆ ನ್ಯಾಯೋಚಿತ ಹಾಗೂ ಶಾಶ್ವತ ಪರಿಹಾರವೊಂದನ್ನು ಪಡೆಯಲು ಸೌದಿ ಅರೇಬಿಯ ಉತ್ಸುಕವಾಗಿದೆ ಎಂದು ಅದರ ದೊರೆ ಸಲ್ಮಾನ್ ರವಿವಾರ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮಾಡಿದ ಫೋನ್ ಕರೆಯ ವೇಳೆ ಹೇಳಿದ್ದಾರೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಇದು ಸೌದಿ ಅರೇಬಿಯದ ಪ್ರಸ್ತಾಪಿತ ಅರಬ್ ಶಾಂತಿ ಯೋಜನೆಯ ಪ್ರಮುಖ ಆರಂಭಿಕ ಅಂಶವಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ತಮ್ಮ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವುದಕ್ಕಾಗಿ ಯುಎಇ ಮತ್ತು ಇಸ್ರೇಲ್‌ಗಳು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕಳೆದ ತಿಂಗಳು ಶಾಂತಿ ಒಪ್ಪಂದವನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯ ತನ್ನ ಈ ನಿಲುವನ್ನು ವ್ಯಕ್ತಪಡಿಸಿದೆ.

ಸಂಘರ್ಷವನ್ನು ಶಾಂತಿಯುವಾಗಿ ಪರಿಹರಿಸಲು ಟ್ರಂಪ್ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿರುವ ಸಲ್ಮಾನ್, 2002ರಲ್ಲಿ ಸೌದಿ ಅರೇಬಿಯ ಮಂಡಿಸಿರುವ ಅರಬ್ ಶಾಂತಿ ಯೋಜನೆಯ ಆಧಾರದಲ್ಲಿ ಫೆಲೆಸ್ತೀನ್ ವಿವಾದಕ್ಕೆ ನ್ಯಾಯೋಚಿತ ಹಾಗೂ ಶಾಶ್ವತ ಪರಿಹಾರವೊಂದನ್ನು ಸೌದಿ ಅರೇಬಿಯ ಬಯಸುತ್ತದೆ ಎಂದು ದೊರೆ ಸಲ್ಮಾನ್ ಟ್ರಂಪ್‌ಗೆ ಹೇಳಿದರು.

ಸೌದಿ ಅರೇಬಿಯವು ಇಸ್ರೇಲನ್ನು ಮಾನ್ಯ ಮಾಡುತ್ತಿಲ್ಲ. ಆದರೆ, ಯುಎಇ ಮತ್ತು ಇಸ್ರೇಲ್ ನಡುವೆ ಹಾರುವ ವಾಣಿಜ್ಯ ವಿಮಾನಗಳಿಗೆ ತನ್ನ ವಾಯು ಪ್ರದೇಶದ ಮೂಲಕ ಹಾದು ಹೋಗಲು ತಾನು ಅವಕಾಶ ನೀಡುವುದಾಗಿ ಕಳೆದ ತಿಂಗಳು ಸೌದಿ ಅರೇಬಿಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News