ಕಾಲ ಮಿಂಚುವ‌ ಮುನ್ನವೇ ಸರಕಾರಗಳ ಜನವಿರೋಧಿ ನೀತಿಯನ್ನು ಎದುರಿಸಬೇಕಾಗಿದೆ: ಐ.ಎಸ್.ಎಫ್.

Update: 2020-09-11 08:14 GMT

ಸೌದಿ ಅರೇಬಿಯ, ಸೆ.11: ಕೋವಿಡ್-19 ನೆಪವೊಡ್ಡಿ  ಮುಂಬರುವ ಸಂಸತ್ ಅಧಿಶವೇನದಲ್ಲಿ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿರುವ  ಕೇಂದ್ರ ಸರಕಾರದ ಕ್ರಮವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಆಡಳಿತ ವೈಫಲ್ಯಕ್ಕೀಡಾಗಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಈ ಅವಧಿಯಲ್ಲಿ ವ್ಯಾಪಕ‌ ಭ್ರಷ್ಟಾಚಾರ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯುಂಟುಮಾಡುವ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿರುವುದು ಅದರ ಮುಂದುವರಿದ ಭಾಗವಾಗಿದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಪ್ರಶ್ನೆ ಕೇಳುವ ಹಕ್ಕನ್ನು ಮೊಟಕುಗೊಳಿಸುವ ಮೂಲಕ‌ ಸರಕಾರ ಜನರ ಹಕ್ಕನ್ನು ಕಸಿದುಕೊಂಡಿದೆ. ಇದು ಖಂಡನೀಯ ಎಂದು ಇಂಡಿಯನ್ ಸೋಶಿಯಲ್ ಫೋರಂ‌(ಐ.ಎಸ್.ಎಫ್.) ಹೇಳಿದೆ.

 ಕೇಂದ್ರ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ ಜಿ.ಎಸ್.ಟಿ ಯಲ್ಲಿ ರಾಜ್ಯಗಳ‌ ಪಾಲು ನೀಡಲು ಸಾಧ್ಯವಿಲ್ಲ ಎಂದಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ನಡೆದ ಆರಂಭಿಕ ಒಪ್ಪಂದದ ಪ್ರಕಾರ 14% ಆದಾಯ ಬೆಳವಣಿಗೆ ಗುರಿಯನ್ನು ತಲುಪಲು  ಉಂಟಾಗುವ ಕೊರತೆಯ ಮೊತ್ತವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಬೇಕಾಗಿತ್ತು. ಕೋವಿಡ್ ವಿರುದ್ಧ ಹೋರಾಡಲು ರಾಜ್ಯ ಸರಕಾರಗಳು ಈಗಾಗಲೇ ದೊಡ್ಡ ಮೊತ್ತದ ವೆಚ್ಚ ಭರಿಸುತ್ತಿದೆ. ಅಲ್ಲದೆ ಈ ಬಿಕ್ಕಟ್ಟಿನಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆ‌ಯನ್ನೂ ರಾಜ್ಯ ಸರಕಾರಗಳು ಎದುರಿಸಬೇಕಾಗಿದೆ. ನೋಟ್ ನಿಷೇಧದ ಬೆನ್ನಿಗೆ ಜಿ.ಎಸ್.ಟಿ.ಯನ್ನು ಆತುರಾತುರದಿಂದ ಜಾರಿಗೆ ತಂದ ಕೇಂದ್ರ ಸರಕಾರದ ಅವೈಜ್ನಾನಿಕ ನಡೆಯಿಂದ ಜನರಲ್ಲಿ ಕೊಳ್ಳುವ ಸಾಮರ್ಥ್ಯವು ಕುಂಠಿತಗೊಂಡು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು ಕೇಂದ್ರ ಸರಕಾರವು ತನ್ನ ತಪ್ಪನ್ನು ಕೋವಿಡ್ ಮೇಲೆ ಹೊರಿಸುತ್ತಿದೆ. ಅಲ್ಲದೆ ರಾಜ್ಯ ಸರಕಾರಗಳ ಮೇಲೆ ಹೊರೆಯನ್ನು ಹೊರಿಸುತ್ತಿದ್ದು, ಇದರಿಂದ ರಾಜ್ಯಗಳು ತಮ್ಮದಲ್ಲದ ತಪ್ಪಿಗೆ ಸಂಕಷ್ಟವನ್ನು ಎದುರಿಸಬೇಕಾಗಿದೆ. ಕೇಂದ್ರ ಸರಕಾರದ ಇಂತಹ ಜನವಿರೋಧಿ‌ ನೀತಿಗಳನ್ನು ಸಮರ್ಥವಾಗಿ ಎದುರಿಸಬಲ್ಲ ವಿರೋಧ ಪಕ್ಷಗಳು ಇಲ್ಲದೇ ಇರುವುದು ನಮ್ಮ ದೇಶದ ದುರಂತವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆಯ ಕಾರಣಗಳಿಂದ ನೀಟ್ ಮತ್ತು ಜೀ ಪರೀಕ್ಷೆಗಳನ್ನು ಮುಂದೂಡಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಪರಿಗಣಿಸದೆ ಸರಕಾರ ಪರೀಕ್ಷೆಯನ್ನು ಆರಂಭಿಸಿರುವುದು ದುರದೃಷ್ಟ. ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 38 ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕವನ್ನು ಹೊಂದಿದ್ದಾರೆ. ಆದರೆ ಸರಕಾರ ಅವರ ಕಳವಳವನ್ನು ಅರ್ಥ ಮಾಡಿಕೊಳ್ಳದಿರುವುದನ್ನು ಐ.ಎಸ್.ಎಫ್. ಖಂಡಿಸಿದೆ.

ಇನ್ನು ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರಕಾರವು ತನ್ನ  62 ನಾಯಕರ ವಿರುದ್ಧದ ಗಂಭೀರ ಪ್ರಕರಣಗಳನ್ನು ಕೈಬಿಟ್ಟಿದೆ. ಅವುಗಳಲ್ಲಿ ದೊಂಬಿ, ಕಲ್ಲು ತೂರಾಟ, ಸರಕಾರಿ ಅಧಿಕಾರಿಗಳ ಮೇಲೆ ದಾಳಿ ಮುಂತಾದ ಪ್ರಕರಣಗಳು‌ ಒಳಗೊಂಡಿವೆ. ಸರಕಾರದ ಈ ಕ್ರಮವು ಬಿಜೆಪಿ ನಾಯಕರಿಗೆ ಸಮಾಜದಲ್ಲಿ ಇನ್ನೂ ಹೆಚ್ಚು ಅಶಾಂತಿ, ಗಲಭೆಗಳನ್ನು‌ ನಡೆಸಲು ಪ್ರೋತ್ಸಾಹವನ್ನು ಒದಗಿಸಲಿದೆ ಎಂದು ಐ.ಎಸ್.ಎಫ್. ಆರೋಪಿಸಿದೆ. 

ಭಾರತದ ಸಂವಿಧಾನವು ಸಮಾನ ನ್ಯಾಯವನ್ನು ಪ್ರತಿಪಾದಿಸುತ್ತದೆ. ಒಂದೆಡೆ ಅಧಿಕಾರದಲ್ಲಿರುವ ಪಕ್ಷವು ತನ್ನ ನಾಯಕರ ವಿರುದ್ಧದ ಗಂಭೀರ ಪ್ರಕರಣಗಳನ್ನು ಕೈಬಿಟ್ಟಿದೆ ಮತ್ತು ಇನ್ನೊಂದೆಡೆ ಇಂತಹುದೇ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸುತ್ತಿರುವ ಮತ್ತು ಕೋರ್ಟ್ ಕಚೇರಿಗಳಿಗೆ ಅಲೆಯುತ್ತಿರುವ ಅದೆಷ್ಟೊ ಜನಸಾಮಾನ್ಯರಿದ್ದಾರೆ. ಅವರಲ್ಲಿ ಇದು ಹತಾಶೆ ಮತ್ತು ಅಸಮಾನತೆಯ ಭಾವನೆಯನ್ನು ಉಂಟುಮಾಡಲಿದೆ.

ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಪ್ರಜಾಪ್ರಭುತ್ವದ ಹಾದಿಯನ್ನು ಬಳಸಿ ಅಧಿಕಾರಕ್ಕೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದೆ. ದೇಶದ ಜನತೆ ಎಚ್ಚೆತ್ತುಕೊಂಡು ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಲು ಒಗ್ಗಟ್ಟಾಗಿ ಮುಂದೆ ಬರದೆ ಇದ್ದಲ್ಲಿ ಮುಂದೊಂದು ದಿನ ದೇಶವು ಅಶಾಂತಿ ಮತ್ತು ಬರಗಾಲವನ್ನು ಕಾಣಬೇಕಾಗಬಹುದು ಐ.ಎಸ್.ಎಫ್. ಪ್ರಕಟನೆಯಲ್ಲಿ ಆತಂಕ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News