ಪ್ರಯೋಗ ಹಂತದ ಕೋವಿಡ್ ಲಸಿಕೆ ಪಡೆಯಲು ಕೋವಿಡ್ ಸಿಬ್ಬಂದಿಗೆ ಯುಎಇ ಅನುಮತಿ

Update: 2020-09-15 04:19 GMT

ದುಬೈ, ಸೆ.15: ಕೊರೋನ ಸೋಂಕು ವಿರುದ್ಧದ ಲಸಿಕೆಯನ್ನು ಪರೀಕ್ಷಾರ್ಥವಾಗಿ ಮನುಷ್ಯನ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಆರಂಭವಾದ ಆರು ವಾರಗಳಲ್ಲಿ ದೇಶದ ಆರೋಗ್ಯ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಈ ಲಸಿಕೆಯನ್ನು ಬಳಸಲು ಯುನೈಟೆಡ್ ಅರಬ್ ಎಮಿರೇಟ್ಸ್ ಸರಕಾರ ಅನುಮತಿ ನೀಡಿದೆ.

ಚೀನಾ ಸರಕಾರಿ ಸ್ವಾಮ್ಯದ ಸಿಂಫಾಮ್ ಫಾರ್ಮಸ್ಯೂಟಿಕಲ್ ಕಂಪೆನಿ ಅಭಿವೃದ್ಧಿಪಡಿಸಿದ ಕೋವಿಡ್-19 ನಿಷ್ಕ್ರಿಯ ಲಸಿಕೆಯ ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ಕಳೆದ ಜುಲೈನಲ್ಲಿ ಯುಎಇನಲ್ಲಿ ಆರಂಭವಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ತುರ್ತು ಸಂದರ್ಭಗಳಲ್ಲಿ ಇದರ ಬಳಕೆಗೆ ಅನುಮತಿ ನೀಡಲಾಗಿದೆ.

"ವೈರಸ್ ಸೋಂಕಿನ ಅಪಾಯ ಸಾಧ್ಯತೆ ಅಧಿಕವಿರುವ ಮುಂಚೂಣಿ ಸುರಕ್ಷಾ ಯೋಧರಿಗೆ ಲಸಿಕೆ ಲಭ್ಯವಾಗಲಿದೆ" ಎಂದು ರಾಷ್ಟ್ರೀಯ ತುರ್ತು ಸಂಕಷ್ಟ ಮತ್ತು ವಿಕೋಪ ನಿರ್ವಹಣೆ ಪ್ರಾಧಿಕಾರ ಟ್ವೀಟ್ ಮಾಡಿದೆ.

ಶನಿವಾರ ದೇಶದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1,007 ಪ್ರಕರಣಗಳು ವರದಿಯಾದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ. ಸೋಮವಾರ ಯುಎಇನಲ್ಲಿ 777 ಹೊಸ ಪ್ರಕರಣ ವರದಿಯಾಗಿದೆ.

31 ಸಾವಿರ ಸವಯಂಸೇವಕರ ಮೇಲೆ ಪ್ರಯೋಗಾರ್ಥ ಪರೀಕ್ಷೆ ನಡೆಸಿದ ಬಳಿಕ ಇದರ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಅಲ್ಪಪ್ರಮಾಣದ ಹಾಗೂ ನಿರೀಕ್ಷಿತ ಅಡ್ಡ ಪರಿಣಾಮಗಳ ಸಾಧ್ಯತೆ ಇದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News