ಭಾರತಕ್ಕೆ ಹೋಗುವ, ಬರುವ ವಿಮಾನವನ್ನು ನಿಷೇಧಿಸಿದ ಸೌದಿ ಅರೇಬಿಯಾ

Update: 2020-09-23 14:27 GMT

ಹೊಸದಿಲ್ಲಿ,ಸೆ.23: ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಎಲ್ಲ ವಿಮಾನಯಾನಗಳನ್ನು ನಿಷೇಧಿಸಿ ಸೌದಿ ಅರೇಬಿಯಾ ಮಂಗಳವಾರ ಆದೇಶವನ್ನು ಹೊರಡಿಸಿದೆ.

ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಭಾರತ, ಬ್ರೆಝಿಲ್ ಮತ್ತು ಅರ್ಜೆಂಟೀನಾಗಳಿಂದ ಬರುವ ಮತ್ತು ಅಲ್ಲಿಗೆ ತೆರಳುವ ವಿಮಾನಯಾನಗಳನ್ನು ಅಮಾನತುಗೊಳಿಸಲಾಗಿದೆ. ಸೌದಿ ಅರೇಬಿಯಾಕ್ಕೆ ಆಗಮಿಸುವ ಉದ್ದೇಶಿತ ದಿನಾಂಕಕ್ಕೆ ಮೊದಲಿನ 14 ದಿನಗಳಲ್ಲಿ ಈ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ವ್ಯಕ್ತಿಗಳಿಗೂ ಇಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆ ದೇಶದ ಸಾಮಾನ್ಯ ನಾಗರಿಕ ವಾಯುಯಾನ ಪ್ರಾಧಿಕಾರವು ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ ಸರಕಾರದ ಅಧಿಕೃತ ಆಹ್ವಾನದ ಮೇರೆಗೆ ಆಗಮಿಸುವವರಿಗೆ ಅದು ವಿನಾಯಿತಿಯನ್ನು ನೀಡಿದೆ.

 ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಭಾರತೀಯ ವಲಸಿಗರಿದ್ದಾರೆ.

ಆ.28 ಮತ್ತು ಸೆ.4ರಂದು ಕೋವಿಡ್‌ಗೆ ಪಾಸಿಟಿವ್ ಆಗಿದ್ದ ಇಬ್ಬರು ಪ್ರಯಾಣಿಕರನ್ನು ಕರೆತಂದಿದ್ದಕ್ಕಾಗಿ ದುಬೈ ನಾಗರಿಕ ವಾಯುಯಾನ ಪ್ರಾಧಿಕಾರವು ತನ್ನ ವಿಮಾನಗಳನ್ನು 24 ಗಂಟೆಗಳ ಅವಧಿಗೆ ನಿಷೇಧಿಸಿತ್ತು ಎಂದು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಐದು ದಿನಗಳ ಹಿಂದೆ ತಿಳಿಸಿತ್ತು.

ಕೊರೋನ ವೈರಸ್‌ನಿಂದಾಗಿ ನಿಗದಿತ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಯಾನಗಳನ್ನು ಭಾರತವು ಮಾ.23ರಿಂದ ಅಮಾನತುಗೊಳಿಸಿದೆ. ಆದರೆ ವಂದೇ ಭಾರತ ಅಭಿಯಾನದಡಿ ಮೇ 6ರಿಂದ ಭಾರತ ಮತ್ತು ಸೌದಿ ಅರೇಬಿಯಾಗಳ ನಡುವೆ ವಿಶೇಷ ಅಂತರ್ ರಾಷ್ಟ್ರೀಯ ಯಾನಗಳನ್ನು ನಿರ್ವಹಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News