ಬುರ್ಜ್ ಖಲೀಫಾ ನಿರ್ಮಿಸಿದ್ದ ಅರಬ್ಟೆಕ್ ಸಂಸ್ಥೆ ಮುಚ್ಚುಗಡೆಗೆ ನಿರ್ಧಾರ

Update: 2020-10-03 09:31 GMT
Photo: burjkhalifa.ae

ದುಬೈ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ನಿರ್ಮಿಸಿದ್ದ ಸಂಯುಕ್ತ ಅರಬ್ ಸಂಸ್ಥಾನದ ಅರಬ್ಟೆಕ್ ಹೋಲ್ಡಿಂಗ್ ಬಾಗಿಲು ಮುಚ್ಚಲು ನಿರ್ಧರಿಸಿದೆ. ಸಾಲ ಬಾಧೆ ಹಾಗೂ ಸತತ ಏರಿಕೆಯಾಗುತ್ತಿರುವ ನಷ್ಟದ ಪ್ರಮಾಣದಿಂದ ಚೇತರಿಸಿಕೊಳ್ಳುವುದು ಅಸಾಧ್ಯವೆಂಬ ಹಂತಕ್ಕೆ ಕಂಪೆನಿ ಬಂದಿರುವುದರಿಂದ ಅದನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕಂಪೆನಿಯ ಶೇರುದಾರರು ಒಪ್ಪಿಗೆ ಸೂಚಿಸಿದ್ದಾರೆ.

ಅರಬ್ಟೆಕ್ ಸಂಸ್ಥೆಯ ಈ ನಿರ್ಧಾರ ಸಂಯುಕ್ತ ಅರಬ್ ಸಂಸ್ಥಾನದಲ್ಲಿನ ನೂರಾರು ಉಪ ಗುತ್ತಿಗೆದಾರರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ  ಸಾವಿರಾರು ಮಂದಿಗೆ ಉದ್ಯೋಗ ನಷ್ಟದ ಭೀತಿಯೂ ಎದುರಾಗಿದೆ.

ಅರಬ್ಟೆಕ್ ಸಂಸ್ಥೆಯಲ್ಲಿ ಸುಮಾರು 40,000 ಉದ್ಯೋಗಿಗಳಿದ್ದಾರೆ. ಬುರ್ಜ್ ಖಲೀಫಾ ಹೊರತಾಗಿ ದೇಶದ ಹಲವು ಅತ್ಯುನ್ನತ ನಿರ್ಮಾಣಗಳಾದ ಲೂವರ್ ಮೂಸಿಯಂ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಲ್-ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಅರಬ್ಟೆಕ್ ಸಂಸ್ಥೆ ನಡೆಸಿತ್ತು.

ಗಲ್ಫ್ ದೇಶಗಳ ಸರಕಾರಗಳು ನಿರ್ಮಾಣ ಕಾಮಗಾರಿಗಳ ಮೇಲೆ ಹೂಡಿಕೆಗಳನ್ನು ಕಡಿಮೆ ಮಾಡಿರುವುದರಿಂದ ಹಲವಾರು ನಿರ್ಮಾಣ ಸಂಸ್ಥೆಗಳು ನಷ್ಟವೆದುರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News