ಬಹರೈನ್ : ಗಾಂಧಿ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

Update: 2020-10-07 14:32 GMT

ಬಹರೈನ್ :  ಭಾರತೀಯ ಸಾಗರೋತ್ತರ ಕಾಂಗ್ರೆಸ್ ಬಹರೈನ್ ಘಟಕವು ಗಾಂಧಿ ಜಯಂತಿ ಅಂಗವಾಗಿ ಬಹರೈನ್ ನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ 12 ರಿಂದ 16 ವಯಸ್ಸಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಫರ್ಧೆಯನ್ನು ಇತ್ತೀಚೆಗೆ ಏರ್ಪಡಿಸಿತ್ತು. 

ಸಾಮಾಜಿಕ ಜಾಲತಾಣದ ಮೂಲಕ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಬಹರೈನ್ ನ ವಿವಿಧ ಶಿಕ್ಷಣ ಸಂಸ್ಥೆಗಳ ಹಾಗೂ ಇತರ ಅನಿವಾಸಿ ಭಾರತೀಯ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಮನ್ಸೂರ್ ಸಾಗರೋತ್ತರ ಕಾಂಗ್ರೆಸ್ ನ ವಿವಿಧ ದೇಶಗಳ ಪ್ರತಿನಿಧಿಗಳನ್ನು ಸ್ವಾಗತಿಸಿ ಮಾತನಾಡಿ, ಬಹರೈನ್ ನಲ್ಲಿ ಗಾಂಧಿ ಜಯಂತಿಯನ್ನು ಭಾರತೀಯ ವಿದ್ಯಾರ್ಥಿಗಳು ಒಟ್ಟುಗೂಡಿ ಹಮ್ಮಿಕೊಂಡಿದ್ದಾರೆ. ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿಯೇ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿಂತನೆಗಳ ಬಗ್ಗೆ ಹೆಚ್ಚು ತಿಳಿಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ವೇದಿಕೆಯ ಮಾಜಿ ಉಪಾಧ್ಯಕ್ಷರೂ , ಭಾರತೀಯ ಸಾಗರೋತ್ತರ ಕಾಂಗ್ರೆಸ್ ನ ಕಾರ್ಯದರ್ಶಿಯೂ ಆಗಿರುವ ಡಾ. ಆರತಿ ಕೃಷ್ಣ ಅವರು ಗಾಂಧಿ ಜಯಂತಿಯ ಸಂದರ್ಭದಲ್ಲಿ ಇಂತಹಾ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ಬಹರೈನ್ ಐ.ಒ.ಸಿ ಘಟಕವನ್ನು ಅಭಿನಂದಿಸಿದರು.

ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ 'ಸಲಾಂ ಬಹರೈನ್' ಸಂಸ್ಥೆಯ ಮುಖ್ಯ ಸಂಪಾದಕರೂ ಆಡಳಿತ ನಿರ್ದೇಶಕರೂ ಆಗಿರುವ ಮೀರಾ ರವಿ ಈ ಸಂದರ್ಭ ಮಾತನಾಡಿದರು.

ಡಾ. ಆರತಿ ಕೃಷ್ಣ, ಮೀರಾ ರವಿ, ಬಹರೇನ್ ನ ಪ್ರಮುಖ ಸುದ್ದಿ ಮಾಧ್ಯಮ ಅಲ್ ಹಿಲಾಲ್ ಸಂಸ್ಥೆಯ ಸಂಪಾದಕ -ನಿರ್ದೇಶಕ ಕೃಷ್ಣ ಭಟ್ , ಬಹರೈನ್ ಟೊಸ್ಟ್ ಮಾಸ್ಟರ್ಸ್ ಸಂಸ್ಥೆಯ ಉಪಾಧ್ಯಕ್ಷ (ಶಿಕ್ಷಣ ವಿಭಾಗ) ಎಸ್.ಎ. ಜಾವೇದ್ ಸ್ಪರ್ಧೆಯ ತೀಪುಗಾರರಾಗಿದ್ದಾರು.

ಅತಿಥಿಗಳನ್ನು ಹಾಗೂ ತೀರ್ಪುಗಾರರನ್ನು ಆಸ್ಟಿನ್ ಸಂತೋಷ್ ಪರಿಚಯಿಸಿದರು. ಬಹರೈನ್ ನ ಭಾರತೀಯ ವಿದ್ಯಾಸಂಸ್ಥೆಗಳ ಹಾಗೂ ಇತರ ಸಂಘಟನೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ "ಪ್ರಸ್ತುತ ಜಗತ್ತಿನಲ್ಲಿ ಗಾಂಧಿ ಚಿಂತನೆಗಳ ಮಹತ್ವ" ವಿಷಯದ ಬಗ್ಗೆ ಮಾತನಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಾಮಾಜಿಕ ಜಾಲತಾಣಗಳಲ್ಲಿ 2500ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ್ದರು. ಕಾರ್ಯಕ್ರಮದ ಮುಖ್ಯ ಸಂಘಟಕರಾಗಿ ಆಸ್ಟಿನ್ ಸಂತೋಷ್ ಕಾರ್ಯ ನಿರ್ವಹಿಸಿದರು.

ಸ್ಪರ್ಧೆಯಲ್ಲಿ ಬಹರೈನ್ ನ " ನ್ಯೂ ಮಿಲೇನಿಯಂ ಸ್ಕೂಲ್ ನ ವಿದ್ಯಾರ್ಥಿನಿ ನಂದಿತಾ ದಿಲೀಪ್, 'ದಿ ಏಷಿಯನ್ ಸ್ಕೂಲ್' ವಿದ್ಯಾರ್ಥಿನಿ ಆನ್ ಮರಿಯಾ ಥಾಮ್ಸನ್  ಹಾಗೂ ಯಂಗ್ ಲೀಡರ್ಸ್ ಕ್ಲಬ್ ನ ಅಂಶರಾ ಸಮೀನ್ ಅವರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು.

ತೌಫೀಕ್ ಎ. ಖಾದರ್ ಕಾರ್ಯಕ್ರಮಕ್ಕೆ, ತಾಂತ್ರಿಕ ಸಹಕಾರ ನೀಡಿ, ಸ್ಪರ್ಧೆಯ ನಿರೂಪಕರಾಗಿ ಕಾರ್ಯ ನಿರ್ವಹಿಸಿದರು. ಜೈಫರ್ ಮೈದಾನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News