ಕತರ್ ಜೊತೆಗಿನ ಬಿಕ್ಕಟ್ಟು ಪರಿಹರಿಸಲು ಯತ್ನ: ಸೌದಿ ವಿದೇಶ ಸಚಿವ

Update: 2020-10-16 18:20 GMT

ರಿಯಾದ್ (ಸೌದಿ ಅರೇಬಿಯ), ಅ. 16: ನೆರೆಯ ದೇಶ ಕತರ್‌ನೊಂದಿಗಿನ ಮೂರು ವರ್ಷಗಳ ಹಳೆಯ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ ಎಂದು ಸೌದಿ ಅರೇಬಿಯದ ವಿದೇಶ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಹೇಳಿದ್ದಾರೆ.

ವಾಶಿಂಗ್ಟನ್‌ನಲ್ಲಿ ಅವೆುರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

2017ರಲ್ಲಿ ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕತರ್ ಜೊತೆಗಿನ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಂಡಿದ್ದವು ಹಾಗೂ ಆ ದೇಶದ ಮೇಲೆ ಸಮುದ್ರ, ಭೂಮಿ ಮತ್ತು ವಾಯು ದಿಗ್ಬಂಧನಗಳನ್ನು ವಿಧಿಸಿದ್ದವು. ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಕೊಲ್ಲಿ ದೇಶಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದವು.

 ‘‘ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಹಿಡಿಯಲು ನಾವು ಬದ್ಧರಾಗಿದ್ದೇವೆ’’ ಎಂದು ಫೈಸಲ್ ಬಿನ್ ಫರ್ಹಾನ್ ಗುರುವಾರ ಹೇಳಿದರು. ಅವರು ವಾಶಿಂಗ್ಟನ್ ಇನ್‌ಸ್ಟಿಟ್ಯೂಟ್ ಫಾರ್ ನಿಯರ್ ಈಸ್ಟ್ ಪಾಲಿಸಿ ಎಂಬ ಸಂಘಟನೆ ಏರ್ಪಡಿಸಿದ ಆನ್‌ಲೈನ್ ಸಂವಾದದಲ್ಲಿ ಮಾತನಾಡುತ್ತಿದ್ದರು.

‘‘ನಮ್ಮ ಕತರ್ ಸಹೋದರರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ. ಅವರು ಕೂಡ ಈ ವಿಷಯದಲ್ಲಿ ಉತ್ಸುಕರಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News