ಮಕ್ಕಾ: ಪ್ರಧಾನ ಮಸೀದಿಯಲ್ಲಿ ಪೌರರಿಗೆ, ನಿವಾಸಿಗಳಿಗೆ ದೈನಂದಿನ ಪ್ರಾರ್ಥನೆಗೆ ಅವಕಾಶ

Update: 2020-10-18 17:28 GMT

 ರಿಯಾದ್,ಅ.18: ಇಸ್ಲಾಂ ಧರ್ಮದ ಪವಿತ್ರ ತಾಣಗಳಲ್ಲೊಂದಾದ ಮಕ್ಕಾದ ಪ್ರಧಾನ ಮಸೀದಿಯಲ್ಲಿ ರವಿವಾರದಿಂದ ತನ್ನ ಪೌರರು ಹಾಗೂ ನಿವಾಸಿಗಳು ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಲು ಸೌದಿ ಆರೇಬಿಯ ಆಡಳಿತವು ಅವಕಾಶ ನೀಡಿದೆ. ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳುಗಳಿಂದ ಮಕ್ಕಾದ ಪ್ರಧಾನ ಮಸೀದಿಯಲ್ಲಿ ಸಾರ್ವಜನಿಕರು ದೈನಂದಿನ ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿತ್ತು.

ಈ ಮಧ್ಯೆ ಪೌರರು ಹಾಗೂ ನಿವಾಸಿಗಳಿಗಾಗಿ ಪುನಾರಂಭಿಸಲಾದ ಉಮ್ರಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಿಕರ ಸಂಖ್ಯೆಯನ್ನು ನಿಗದಿತ ಮಿತಿಯ ಶೇ.75ರಷ್ಟು ವಿಸ್ತರಿಸಲಾಗಿದೆ.

ಅಕ್ಟೋಬರ್ 4ರಿಂದ ಸೌದಿ ಆಡಳಿತವು ತನ್ನ ದೇಶದ ಪ್ರಜೆಗಳು ಹಾಗೂ ನಿವಾಸಿಗಳಿಗಾಗಿ ಮಕ್ಕಾ ಮದೀನಾಗಳಿಗೆ ಉಮ್ರಾ ಯಾತ್ರೆಯನ್ನು ಪುನಾರಂಭಿಸಿತ್ತು. ಆಗ ಉಮ್ರಾ ಯಾತ್ರೆಯಲ್ಲಿ ದಿನಂಪ್ರತಿ 6 ಸಾವಿರ ಪೌರರು ಹಾಗೂ ನಿವಾಸಿಗಳು ಮಾತ್ರ ಪಾಲ್ಗೊಳ್ಳುವುದಕ್ಕೆ ಸೌದಿ ಆಡಳಿತ ಅವಕಾಶ ನೀಡಿತ್ತು. ಇದು ದೈನಂದಿನ ಯಾತ್ರಿಕರ ಒಟ್ಟು ಸಾಮರ್ಥ್ಯದ ಶೇ.30ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News