×
Ad

ಇಸ್ರೇಲ್‌ಗೆ ಹಾರಿದ ಯುಎಇಯ ಮೊದಲ ಪ್ರಯಾಣಿಕ ವಿಮಾನ

Update: 2020-10-19 22:02 IST

ಜೆರುಸಲೇಮ್, ಅ. 19: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ಇಸ್ರೇಲ್‌ಗೆ ಪ್ರಯಾಣಿಸಿದ ಮೊಟ್ಟ ಮೊದಲ ಪ್ರಯಾಣಿಕ ವಿಮಾನವು ಟೆಲ್ ಅವೀವ್‌ನಲ್ಲಿ ಸೋಮವಾರ ಭೂಸ್ಪರ್ಶ ಮಾಡಿದೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಶಾಂತಿ ಒಪ್ಪಂದಕ್ಕೆ ಈ ದೇಶಗಳು ಸಹಿ ಹಾಕಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಅಬುಧಾಬಿಯಿಂದ ಹೊರಟ ಇತ್ತಿಹಾದ್ ಏರ್‌ವೇಸ್ ವಿಮಾನ ಇವೈ9607 ಸೋಮವಾರ ಮುಂಜಾನೆ ಟೆಲ್ ಅವೀವ್ ಸಮೀಪದ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರೆಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಆದರೆ, ವಿಮಾನದಲ್ಲಿ ಸಿಬ್ಬಂದಿ ಮಾತ್ರ ಇದ್ದರು.

ಬಳಿಕ ವಿಮಾನವು ಇಸ್ರೇಲ್‌ನ ಪ್ರವಾಸೋದ್ಯಮ ಅಧಿಕಾರಿಗಳನ್ನು ಹೊತ್ತು ಯುಎಇಗೆ ಮರಳಿತು. ಇಸ್ರೇಲ್‌ನ ಅಧಿಕಾರಿಗಳು ಯುಎಇಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ.

‘‘ಇತ್ತಿಹಾದ್ ಏರ್‌ವೇಸ್ ಇಸ್ರೇಲ್‌ಗೆ ಪ್ರಯಾಣಿಕ ವಿಮಾನವನ್ನು ಹಾರಿಸಿದ ಕೊಲ್ಲಿ ವಲಯದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ’’ ಎಂದು ವಿಮಾನಯಾನ ಕಂಪೆನಿಯು ಟ್ವಿಟರ್‌ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News