ವಿದೇಶಿ ಉಮ್ರಾ ಯಾತ್ರಿಕರನ್ನು ಸ್ವಾಗತಿಸಲು ಸೌದಿ ಅರೇಬಿಯದಿಂದ ಸಿದ್ಧತೆ

Update: 2020-10-22 16:26 GMT

ರಿಯಾದ್ (ಸೌದಿ ಅರೇಬಿಯ), ಅ. 22: ವಿದೇಶಿ ಉಮ್ರಾ ಯಾತ್ರಿಕರನ್ನು ಸ್ವಾಗತಿಸಲು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ‘ಸೌದಿ ಗಝೆಟ್’ ಪತ್ರಿಕೆ ವರದಿ ಮಾಡಿದೆ.

ದೇಶದ ನಾಗರಿಕರು ಮತ್ತು ದೇಶದಲ್ಲೇ ವಾಸಿಸುತ್ತಿರುವ ವಲಸಿಗರಿಗಾಗಿ ಯಶಸ್ವಿ ಯಾತ್ರೆಯನ್ನು ಏರ್ಪಡಿಸಿದ ಬಳಿಕ, ವಿದೇಶೀಯರ ಆಗಮನಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪತ್ರಿಕೆ ಹೇಳಿದೆ.

ವಿದೇಶಿ ಯಾತ್ರಿಕರನ್ನು ಸ್ವಾಗತಿಸಲು 700ಕ್ಕೂ ಅಧಿಕ ಉಮ್ರಾ ಕಂಪೆನಿಗಳು ಸಿದ್ಧವಾಗಿವೆ ಎಂದು ಹಜ್ ಮತ್ತು ಉಮ್ರಾ ವ್ಯವಹಾರಗಳ ಸಹಾಯಕ ಸಚಿವ ಅಬ್ದುಲ್ ರಹ್ಮಾನ್ ಶಾಮ್ಸ್ ಹೇಳಿದ್ದಾರೆ ಎಂದು ‘ಅಲ್ ಅಕ್ಬರಿಯ’ ಚಾನೆಲ್ ವರದಿ ಮಾಡಿದೆ.

ಈವರೆಗೆ ಸುಮಾರು 1.20 ಲಕ್ಷ ಯಾತ್ರಿಕರು ಉಮ್ರಾ ಯಾತ್ರೆ ಮಾಡಿದ್ದಾರೆ ಎಂದು ‘ಸೌದಿ ಗಝೆಟ್’ ತಿಳಿಸಿದೆ. ಅದೂ ಅಲ್ಲದೆ, ಅಕ್ಟೋಬರ್ 18ರಿಂದ ಆರಂಭವಾಗಿರುವ ಎರಡನೇ ಹಂತದ ಉಮ್ರಾ ಯಾತ್ರೆಯ ಅವಧಿಯಲ್ಲಿ ಈವರೆಗೆ 45,000 ಮಂದಿ ಮಕ್ಕಾದ ಪ್ರಧಾನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ವಿದೇಶಿ ಯಾತ್ರಿಕರು ಉಮ್ರಾದಲ್ಲಿ ತಮ್ಮ ಸ್ಥಾನವನ್ನು ನೋಂದಾಯಿತ ಕಂಪೆನಿಗಳ ಮೂಲಕ ಕಾದಿರಿಸಬೇಕಾಗಿದೆ. ಅದೂ ಅಲ್ಲದೆ, ವಿದೇಶೀಯರು ಗುಂಪುಗಳಲ್ಲಿ ಬರಬೇಕು ಹಾಗೂ ಒಬ್ಬೊಬ್ಬರಾಗಿ ಬರುವಂತಿಲ್ಲ ಎಂದು ಸಚಿವರು ಹೇಳಿದ್ದಾರೆ.

‘EATMARNA’ ಮೊಬೈಲ್ ಆ್ಯಪ್ ಸೌದಿ ಅರೇಬಿಯದ ಒಳಗಿನ ಯಾತ್ರಿಕರಿಗಾಗಿ ಮೀಸಲಾಗಿದೆ. ವಿದೇಶಿ ಯಾತ್ರಿಕರನ್ನು ನಿರ್ಬಂಧ ನಿವಾರಣೆಯ ಮೂರನೇ ಹಂತದಲ್ಲಿ ಸ್ವಾಗತಿಸಲು ಸಚಿವಾಲಯವು ಉಮ್ರಾ ಕಂಪೆನಿಗಳು ಮತ್ತು ಅವರ ಅನುಮೋದಿತ ವಿದೇಶಿ ಪ್ರತಿನಿಧಿಗಳೊಂದಿಗೆ ಸಿದ್ಧತೆಗಳನ್ನು ಆರಂಭಿಸಿದೆ. ಮೂರನೇ ಹಂತದ ಕೊರೋನ ವೈರಸ್ ನಿರ್ಬಂಧ ನಿವಾರಣೆಯು ನವೆಂಬರ್ 1ರಂದು ಆರಂಭಗೊಳ್ಳಲಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News