ಮುಂದಿನ ವರ್ಷದಿಂದ ಸ್ಪಾನ್ಸರ್‌ಶಿಪ್ ವ್ಯವಸ್ಥೆ ರದ್ದು?

Update: 2020-10-28 13:09 GMT

ರಿಯಾದ್ (ಸೌದಿ ಅರೇಬಿಯ), ಅ. 28: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ, ಸೌದಿ ಅರೇಬಿಯವು ಮುಂದಿನ ವರ್ಷದಿಂದ ಸ್ಪಾನ್ಸರ್‌ಶಿಪ್ ವ್ಯವಸ್ಥೆಯನ್ನು ರದ್ದುಪಡಿಸಲು ನಿರ್ಧರಿಸಿದೆ.

‘ಕಫಾಲ’ ಎಂಬುದಾಗಿ ಕರೆಯಲ್ಪಡುವ ಸ್ಪಾನ್ಸರ್‌ಶಿಪ್ ವ್ಯವಸ್ಥೆಯಲ್ಲಿ, ವಿದೇಶಿ ಕೆಲಸಗಾರರ ನಿಯಂತ್ರಣವು ಅವರ ಉದ್ಯೋಗದಾತರು ಅಥವಾ ಪ್ರಾಯೋಜಕ (ಸ್ಪಾನ್ಸರ್)ರಲ್ಲಿರುತ್ತದೆ. ಉದ್ಯೋಗಿಗಳ ವೀಸಾ ಮತ್ತು ಕಾನೂನು ಸ್ಥಾನಮಾನವನ್ನು ಸ್ಪಾನ್ಸರ್‌ಗಳು ತೀರ್ಮಾನಿಸುತ್ತಾರೆ.

ಸ್ಪಾನ್ಸರ್‌ಶಿಪ್ ರದ್ದತಿಯ ಪ್ರಯೋಜನವನ್ನು 10 ಲಕ್ಷಕ್ಕೂ ಅಧಿಕ ವಿದೇಶಿ ಕಾರ್ಮಿಕರು ಪಡೆಯಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ವಿಷಯದಲ್ಲಿ ಸೌದಿ ಅರೇಬಿಯದ ಮಾನವ ಸಂಪನ್ಮೂಲಗಳು ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಮುಂದಿನ ವಾರ ಅಧಿಕೃತ ಘೋಷಣೆಯನ್ನು ಮಾಡುವ ನಿರೀಕ್ಷೆಯಿದೆ.

ವಸತಿ ಮತ್ತು ಮನರಂಜನೆ ಸೇರಿದಂತೆ, ವಿದೇಶಿ ಕಾರ್ಮಿಕರ ಜೀವನ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿರುವ ಹಲವು ಕ್ರಮಗಳ ಪೈಕಿ ಇದೂ ಒಂದು ಎಂದು ವರದಿಗಳು ಹೇಳಿವೆ.

 ಏಳು ದಶಕಗಳಿಂದ ಜಾರಿಯಲ್ಲಿರುವ ಸ್ಪಾನ್ಸರ್‌ಶಿಪ್ ವ್ಯವಸ್ಥೆಯ ಜಾಗದಲ್ಲಿ ಇನ್ನು ಕೆಲಸದ ಗುತ್ತಿಗೆ ಬರಲಿದೆ. ಇದು ಉದ್ಯೋಗದಾತರು ಮತ್ತು ವಿದೇಶಿ ಕಾರ್ಮಿಕರ ನಡುವಿನ ಸಂಬಂಧವನ್ನು ನಿಭಾಯಿಸುತ್ತದೆ.

ವಿದೇಶಿ ಕಾರ್ಮಿಕರಿಗೆ ಸಿಗುವ ಲಾಭಗಳು

ಸ್ಪಾನ್ಸರ್‌ಶಿಪ್ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ವಿದೇಶಿ ಕಾರ್ಮಿಕರು ಸ್ಪಾನ್ಸರ್ (ಉದ್ಯೋಗದಾತರ ಅನುಮತಿ) ಇಲ್ಲದೆ ನಿರ್ಗಮನ ಮತ್ತು ಮರುಪ್ರವೇಶ ವೀಸಾಗಳನ್ನು ಪಡೆಯಬಹುದಾಗಿದೆ.

ವಿದೇಶಿ ಕೆಲಸಗಾರರು ತಮ್ಮ ಪಾಸ್‌ಪೋರ್ಟ್‌ಗಳಿಗೆ ಅಂತಿಮ ನಿರ್ಗಮನ ಮುದ್ರೆ (ಫೈನಲ್ ಪಾಸ್‌ಪೋರ್ಟ್ ಎಕ್ಸಿಟ್ ಸ್ಟ್ಯಾಂಪ್)ಯನ್ನು ಸ್ಪಾನ್ಸರ್ ಇಲ್ಲದೆ ಪಡೆಯಬಹುದಾಗಿದೆ,  ಹಾಗೂ ಸ್ಪಾನ್ಸರ್ (ಉದ್ಯೋಗದಾತ) ಅನುಮೋದನೆ ಇಲ್ಲದೆ ಬೇರೆ ಕಡೆ ಕೆಲಸ ಮಾಡಬಹುದಾಗಿದೆ.

ಸ್ಪಾನ್ಸರ್‌ಶಿಪ್ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ವಿದೇಶಿ ಕಾರ್ಮಿಕರು ತಮ್ಮ ಕೆಲಸದ ಗುತ್ತಿಗೆಯಲ್ಲಿ ನಿಗದಿಪಡಿಸಿರುವುದಕ್ಕೆ ಅನುಗುಣವಾಗಿ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News