ವಿದೇಶಿ ಕಾರ್ಮಿಕರ ಸ್ಪಾನ್ಸರ್‌ಶಿಪ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಸೌದಿ ಘೋಷಣೆ

Update: 2020-11-04 13:19 GMT

ರಿಯಾದ್ (ಸೌದಿ ಅರೇಬಿಯ), ನ. 4: ಸೌದಿ ಅರೇಬಿಯದಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳ ಸ್ಪಾನ್ಸರ್‌ಶಿಪ್ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಸೌದಿ ಅರೇಬಿಯ ಬುಧವಾರ ಘೋಷಿಸಿದೆ.

ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ಅವರ ಉದ್ಯೋಗದಾತರ ಬಳಿಯೇ ಹಿಡಿದಿಡುವ ಹಲವು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಮಾನವ ಸಂಪನ್ಮೂಲಗಳು ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಈ ನಿರ್ಬಂಧಗಳನ್ನು ಬಳಸಿಕೊಂಡು ವಿದೇಶಿ ವಲಸೆ ಕಾರ್ಮಿಕರನ್ನು ಅವರ ಉದ್ಯೋಗದಾತರು ಶೋಷಿಸುತ್ತಿದ್ದರು ಎಂಬ ವ್ಯಾಪಕ ಆರೋಪಗಳಿವೆ.

 ಸೌದಿ ಅರೇಬಿಯ ಘೋಷಿಸಿರುವ ಸುಧಾರಣೆಗಳ ಪ್ರಕಾರ, ವಿದೇಶಿ ವಲಸೆ ಕಾರ್ಮಿಕರು ತಮ್ಮ ಸ್ಪಾನ್ಸರ್‌ಶಿಪ್ಪನ್ನು ಓರ್ವ ಉದ್ಯೋಗದಾತನಿಂದ ಇನ್ನೋರ್ವ ಉದ್ಯೋಗದಾತನಿಗೆ ವರ್ಗಾಯಿಸುವ ಮೂಲಕ ಬೇರೆ ಕಡೆ ಕೆಲಸ ಮಾಡಬಹುದಾಗಿದೆ. ಅದೂ ಅಲ್ಲದೆ, ತಮ್ಮ ಉದ್ಯೋಗದಾತರ ಅನುಮತಿಯಿಲ್ಲದೆ ಸೌದಿ ಅರೇಬಿಯವನ್ನು ತೊರೆಯಬಹುದಾಗಿದೆ ಹಾಗೂ ಅಲ್ಲಿಗೆ ಮತ್ತೆ ಪ್ರವೇಶ ಮಾಡಬಹುದಾಗಿದೆ ಹಾಗೂ ಅಂತಿಮ ನಿರ್ಗಮನ ವೀಸಾಗಳನ್ನು ಪಡೆಯಬಹುದಾಗಿದೆ.

ನೂತನ ಕಾರ್ಮಿಕ ಸುಧಾರಣೆಗಳು 2021 ಮಾರ್ಚ್‌ನಲ್ಲಿ ಜಾರಿಗೆ ಬರಲಿದೆ ಎಂದು ಮಾನವ ಸಂಪನ್ಮೂಲಗಳು ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಉಪ ಸಚಿವ ಅಬ್ದುಲ್ಲಾ ಬಿನ್ ನಾಸಿರ್ ಅಬುತ್ನಯನ್ ತಿಳಿಸಿದರು. ಸುಧಾರಣೆಗಳ ಲಾಭವನ್ನು ಸೌದಿ ಅರೇಬಿಯದಲ್ಲಿರುವ ಸುಮಾರು ಒಂದು ಕೋಟಿ ವಿದೇಶಿ ಉದ್ಯೋಗಿಗಳು ಪಡೆಯಲಿದ್ದಾರೆ.

ಈವರೆಗೆ ಲಭ್ಯವಾಗಿರುವ ವಿವರಗಳ ಪ್ರಕಾರ, ಸೌದಿ ಅರೇಬಿಯವು ‘ಕಫಾಲ’ ಸ್ಪಾನ್ಸರ್‌ಶಿಪ್ ವ್ಯವಸ್ಥೆಯ ಕೆಲವು ಕಠಿಣ ಅಂಶಗಳನ್ನು ತೆಗೆದುಹಾಕಲು ಹೊರಟಿರುವಂತೆ ಅನಿಸುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ರೋತ್ನಾ ಬೇಗಮ್ ಹೇಳುತ್ತಾರೆ. ಹಲವು ಕೊಲ್ಲಿ ಅರಬ್ ದೇಶಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ಅವರ ಉದ್ಯೋಗದಾತರ ನಿಯಂತ್ರಣಕ್ಕೆ ಒಳಪಡಿಸುವ ‘ಕಫಾಲ’ ವ್ಯವಸ್ಥೆ ಜಾರಿಯಲ್ಲಿದೆ.

2022ರ ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸಲಿರುವ ಖತರ್ ಇತ್ತೀಚೆಗೆ ತನ್ನ ಕಾರ್ಮಿಕ ಕಾನೂನುಗಳಲ್ಲಿ ಇಂಥದೇ ಬದಲಾವಣೆಗಳನ್ನು ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News