ಅಧಿಕಾರಿಗಳಿಗೆ ನೆರವು ನೀಡಲು ಶೀಘ್ರವೇ ಯುಎಇಗೆ ಮರಳುವೆ: ಬಿ.ಆರ್. ಶೆಟ್ಟಿ

Update: 2020-11-14 16:26 GMT
ಬಿ.ಆರ್. ಶೆಟ್ಟಿ

ಅಬುಧಾಬಿ (ಯುಎಇ), ನ. 14: ನನ್ನ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ ಶೀಘ್ರವೇ ಯುಎಇಗೆ ಮರಳುತ್ತೇನೆ ಎಂದು ಎನ್‌ಎಮ್‌ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಹೇಳಿದ್ದಾರೆ.

‘‘ಯುಎಇಯ ನ್ಯಾಯ ವ್ಯವಸ್ಥೆಯ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಹಾಗೂ ವಂಚನೆ ನಡೆಸಿದವರು ಕಾನೂನು ಕ್ರಮಕ್ಕೆ ಗುರಿಯಾಗುವುದನ್ನು ಎದುರು ನೋಡುತ್ತಿದ್ದೇನೆ’’ ಎಂದು ಅವರು ಶನಿವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಕಂಪೆನಿಗಳು, ಅವುಗಳ ಉದ್ಯೋಗಿಗಳು, ಶೇರುದಾರರು ಮತ್ತು ಕಂಪೆನಿಗಳೊಂದಿಗೆ ಸಂಬಂಧ ಹೊಂದಿರುವ ಇತರರಿಗೆ ಆಗಿರಬಹುದಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ಸಂಬಂಧಿತ ಪ್ರಾಧಿಕಾರಗಳಿಗೆ ಬೆಂಬಲ ನೀಡಲು ನಾನು ಯುಎಇಗೆ ಮರಳುತ್ತಿದ್ದೇನೆ’’ ಎಂದು ಶೆಟ್ಟಿ ಹೇಳಿದ್ದಾರೆ.

ಎನ್‌ಎಮ್‌ಸಿ ಹೆಲ್ತ್ ಕಂಪೆನಿಯನ್ನು ಬಿ.ಆರ್. ಶೆಟ್ಟಿ 1975ರಲ್ಲಿ ಸ್ಥಾಪಿಸಿದರು. ಅದು ಒಂದು ಆಸ್ಪತ್ರೆಯಿಂದ ಯುಎಇಯ ಅತಿ ದೊಡ್ಡ ಖಾಸಗಿ ಆರೋಗ್ಯಸೇವೆ ಪೂರೈಕೆದಾರ ಸಂಸ್ಥೆಯಾಗಿ ಬೆಳೆಯಿತು.

ಕಂಪೆನಿಯನ್ನು 2012ರಲ್ಲಿ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಾಯಿಸಲಾಯಿತು. ಕಂಪೆನಿಯು ತನ್ನ ಉಛ್ರಾಯ ಕಾಲದಲ್ಲಿ 11.32 ಬಿಲಿಯ ಡಾಲರ್ (ಸುಮಾರು 84,375 ಕೋಟಿ ರೂಪಾಯಿ) ಮೌಲ್ಯ ಹೊಂದಿತ್ತು. ಆದರೆ, ತನಗೆ 6.6 ಬಿಲಿಯ ಡಾಲರ್ (ಸುಮಾರು 49,200 ಕೋಟಿ ರೂಪಾಯಿ) ಸಾಲವಿದೆ ಎಂದು ಕಂಪೆನಿ ಎಪ್ರಿಲ್‌ನಲ್ಲಿ ಘೋಷಿಸಿದಾಗ ಅದಕ್ಕೆ ಲಂಡನ್ ನ್ಯಾಯಾಲಯವು ಆಡಳಿತಾಧಿಕಾರಿಯನ್ನು ನೇಮಿಸಿತು. ಇದಕ್ಕಿಂತಲೂ ಮೊದಲು ಕಂಪೆನಿಯು ತನ್ನ ಲೆಕ್ಕಪತ್ರಗಳಲ್ಲಿ ಸಾಲದ ಪ್ರಮಾಣವನ್ನು 2.1 ಬಿಲಿಯ ಡಾಲರ್ (ಸುಮಾರು 15,650 ಕೋಟಿ ರೂಪಾಯಿ) ಎಂಬುದಾಗಿ ತೋರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News