ಸೌದಿಯ ತೈಲಾಗಾರದ ಮೇಲೆ ಹೌದಿ ಬಂಡುಕೋರರ ಕ್ಷಿಪಣಿ ದಾಳಿ?

Update: 2020-11-23 16:53 GMT
ಸಾಂದರ್ಭಿಕ ಚಿತ್ರ

ದುಬೈ,ನ.23: ಸೌದಿಯ ಬಂದರು ನಗರವಾದ ಜಿದ್ದಾದಲ್ಲಿರುವ ತೈಲಾಗಾರದ ಮೇಲೆ ತಾವು ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್‌ನ ಹೌದಿ ಬಂಡುಕೋರರು ತಿಳಿಸಿದ್ದಾರೆ. ಸೌದಿ ಅರೇಬಿಯದ ಆತಿಥ್ಯದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಜಿ-20 ನಾಯಕರ ಶೃಂಗಸಭೆಯು ಮುಕ್ತಾಯವಾದ ಕೆಲವೇ ತಾಸುಗಳ ಬಳಿಕ ಕ್ರೂಸ್ ಕ್ಷಿಪಣಿ ದಾಳಿ ನಡೆದಿದೆಯನ್ನಲಾಗಿದೆ.

ಆದಾಗ್ಯೂ ತನ್ನ ನೆಲದಲ್ಲಿರುವ ಯಾವುದೇ ತೈಲಾಗಾರದ ಮೇಲೆ ಕ್ಷಿಪಣಿ ದಾಳಿ ನಡೆದಿರುವುದನ್ನು ಸೌದಿ ಅರೇಬಿಯ ತಕ್ಷಣವೇ ಒಪ್ಪಿಕೊಂಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವೀಡಿಯೊಗಳು, ಅರ್ಮಾಕೊ ಸಂಸ್ಥೆಯ ತೈಲಾಗಾರದಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವ ದೃಶ್ಯಗಳನ್ನು ತೋರಿಸಿವೆ.

  ಬಂಡುಕೋರರು ಸೌದಿಯ ತೈಲಾಗಾರದ ಮೇಲೆ ನೂತನ ಕುದ್ಸ್ 2 ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದಾರೆಂದು ಹೌದಿ ಮಿಲಿಟರಿ ವಕ್ತಾರ ಬ್ರಿ.ಜ. ಯೆಹಿಯಾ ಸಾರಿ ತಿಳಿಸಿದ್ದಾರೆ. ಆರ್ಮಾಕೊ ಸಂಸ್ಥೆಯು ಉತ್ತರ ಜಿದ್ದಾದಲ್ಲಿರುವ ತೈಲಾಗಾರವನ್ನು ಹೋಲುವ ಸ್ಥಾವರವೊಂದರ ಉಪಗ್ರಹ ಚಿತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದಾರೆ. ಈ ಸ್ಥಾವರದಲ್ಲಿ ತೈಲ ದಾಸ್ತಾನನ್ನು ಸಂಗ್ರಹಿಸಿಡಲಾಗುತ್ತಿದೆ.

 ಈ ತೈಲಾಗಾರವು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿದೆ.

   ಯೆಮನ್ ರಾಜಧಾನಿ ಸಾನಾವನ್ನು ಇರಾನ್ ಬೆಂಬಲಿತ ಹುದಿ ಬಂಡುಕೋರರು 2015ರ ಮಾರ್ಚ್‌ನಲ್ಲಿ ವಶಪಡಿಸಿಕೊಂಡಿದ್ದರು. ಇದಾದ ಕೆಲವೇ ತಿಂಗಳುಗಳ ಬಳಿಕ ಸೌದಿ ನೇತೃತ್ವದ ಮಿತ್ರಪಡೆಗಳು ಹಾಗೂ ಹುದಿ ಬಂಡುಕೋರರ ನಡುವೆ ಸಂಘರ್ಷ ಭುಗಿಲೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News