ಬಿ ಆರ್ ಶೆಟ್ಟಿಯ ಯುಎಇ ಎಕ್ಸ್ ಚೇಂಜ್ ‍ನ ಮಾತೃ ಸಂಸ್ಥೆ ಫಿನೇಬ್ಲರ್ 74 ರೂ. ಗೆ ಮಾರಾಟ!

Update: 2020-12-18 18:45 GMT

ಲಂಡನ್, ಡಿ. 18: ಮಂಗಳೂರಿನ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಸ್ಥಾಪಿಸಿರುವ ಹಣಕಾಸು ಕಂಪೆನಿ ಫಿನಬ್ಲರ್ ಪಿಎಲ್‌ಸಿಯು ತನ್ನ ವ್ಯವಹಾರ ನಡೆಸುವ ಅಧಿಕಾರವನ್ನು ಇಸ್ರೇಲ್-ಯುಎಇ ಸಮೂಹ ಸಂಸ್ಥೆಯೊಂದಕ್ಕೆ ಒಂದು ಡಾಲರ್ (ಸುಮಾರು 74 ರೂಪಾಯಿ)ಗೆ ಹಸ್ತಾಂತರಿಸಿದೆ.

ಈ ಸಂಸ್ಥೆಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ 2 ಬಿಲಿಯ ಡಾಲರ್ (ಸುಮಾರು 14,700 ಕೋಟಿ ರೂಪಾಯಿ) ಮಾರುಕಟ್ಟೆ ಮೌಲ್ಯ ಹೊಂದಿತ್ತು.

ಪ್ರಿಸಮ್ ಗ್ರೂಪ್ ಎಜಿ ಮತ್ತು ಅಬುಧಾಬಿಯ ರಾಯಲ್ ಸ್ಟ್ರಾಟಜಿಕ್ ಪಾರ್ಟ್‌ನರ್ಸ್‌ ಸಮೂಹ ಸಂಸ್ಥೆಗೆ ಸೇರಿದ ಘಟಕವೊಂದು ನಾಮಮಾತ್ರದ ಮೊತ್ತವನ್ನು ಪಾವತಿಸಲಿದೆ ಹಾಗೂ ವ್ಯವಹಾರ ನಡೆಸಲು ಅಗತ್ಯವಾದ ಬಂಡವಾಳವನ್ನು ಹೂಡಲಿದೆ.

ಯುಎಇಯ ಅತಿ ದೊಡ್ಡ ವಿದೇಶಿ ಕರೆನ್ಸಿ ವಿನಿಮಯ ಸಂಸ್ಥೆಗಳ ಪೈಕಿ ಒಂದಾಗಿರುವ ಯುಎಇ ಎಕ್ಸ್‌ಚೇಂಜ್, ಫಿನಬ್ಲರ್ ಕಂಪೆನಿಯ ಅತಿ ದೊಡ್ಡ ವಿದೇಶಿ ವಿನಿಮಯ ವ್ಯವಹಾರವಾಗಿದೆ.

ಸುಮಾರು ಒಂದು ಬಿಲಿಯ ಡಾಲರ್ (ಸುಮಾರು 7,350 ಕೋಟಿ ರೂಪಾಯಿ) ಸಾಲವನ್ನು ನಿರ್ದೇಶಕರ ಮಂಡಳಿಯಿಂದ ಮುಚ್ಚಿಡಲಾಗಿದೆ ಎಂಬುದಾಗಿ ಫಿನಬ್ಲರ್ ಎಪ್ರಿಲ್‌ನಲ್ಲಿ ಬಹಿರಂಗಪಡಿಸಿದ ಬಳಿಕ ಕಂಪೆನಿಯ ವ್ಯವಹಾರ ಪಾತಾಳಕ್ಕೆ ಇಳಿದಿತ್ತು. ಈ ಹಣವನ್ನು ಕಂಪೆನಿಯಿಂದ ಹೊರತಾದ ಉದ್ದೇಶಗಳಿಗಾಗಿ ಬಳಸಿರಬಹುದು ಎಂದು ಅದು ಹೇಳಿತ್ತು.

ಯುಎಇಯಲ್ಲಿ ಬಿ.ಆರ್. ಶೆಟ್ಟಿಯವರೇ ಸ್ಥಾಪಿಸಿರುವ ಆರೋಗ್ಯ ಸೇವೆ ಪೂರೈಕೆ ಕಂಪೆನಿ ಎನ್‌ಎಮ್‌ಸಿ ಹೆಲ್ತ್ ಕೂಡ ಬ್ಯಾಂಕ್‌ಗಳಿಗೆ ವಂಚಿಸಿರುವ ಆರೋಪವನ್ನು ಎದುರಿಸುತ್ತಿದೆ. ಹಾಗೂ ಅದಕ್ಕೆ ಲಂಡನ್‌ನ ನ್ಯಾಯಾಲಯವೊಂದು ಆಡಳಿತಾಧಿಕಾರಿಯನ್ನು ನೇಮಿಸಿದೆ.

ಈ ಎರಡೂ ಕಂಪೆನಿಗಳ ಸ್ಥಾಪಕ ಬಿ. ಆರ್. ಶೆಟ್ಟಿ ಈಗ ಭಾರತದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News