ಕೋವಿಡ್-19 ಲಸಿಕೆ ಸ್ವೀಕರಿಸಿದ ಸೌದಿ ಯುವರಾಜ ಸಲ್ಮಾನ್

Update: 2020-12-26 17:51 GMT
 ಫೋಟೊ ಕೃಪೆ:twitter.com

ರಿಯಾದ್,ಡಿ.26: ಸೌದಿ ಆರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಶುಕ್ರವಾರ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿದ್ದಾರೆಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಸೌದಿ ಆರೇಬಿಯದ ನಾಗರಿಕರಿಗೆ ಕೊರೋನ ಲಸಿಕೆಗಳನ್ನು ಒದಗಿಸಲು ಆಸಕ್ತಿ ಹಾಗೂ ನಿರಂತರವಾಗಿ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಯುವರಾಜ ಸಲ್ಮಾನ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿ ಆರೋಗ್ಯ ಸಚಿವ ಡಾ. ತೌಫೀಕ್ ಅಲ್-ರಬಿಯಾ ಅವರು ಟ್ವೀಟ್ ಮಾಡಿದ್ದಾರೆ.

ಫೈಝರ್ ಹಾಗೂ ಬಯೋಎನ್‌ಟೆಕ್ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆಗಳ ಸರಕನ್ನು ಸೌದಿ ಆರೇಬಿಯವು ಈ ತಿಂಗಳ ಆರಂಭದಲ್ಲಿ ಸ್ವೀಕರಿಸಿತ್ತು. ಸೌದಿ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಈವರೆಗೆ ಒಟ್ಟು 3,61,903 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 3,52,815 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 6,168 ಮಂದಿ ಕೋವಿಡ್-19ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದಾಗಿ ಸಾವನ್ನಪ್ಪಿದ್ದಾರೆ.

ಕೊರೋನ ಲಸಿಕೆ ಸ್ವೀಕರಿಸಿದ ವಿಶ್ವನಾಯಕರ ಸಾಲಿಗೆ ಈಗ ಯುವರಾಜ ಸಲ್ಮಾನ್ ಕೂಡಾ ಸೇರಿದ್ದಾರೆ. ಕಳೆದ ವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ಲಸಿಕೆ ಚುಚ್ಚಿಸಿಕೊಳ್ಳುತ್ತಿರುವುದನ್ನು ನೇರ ಟಿವಿ ಪ್ರಸಾರದ ಮೂಲಕ ಪ್ರದರ್ಶಿಸಲಾಗಿತ್ತು. ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಕೂಡಾ ಕೊರೋನ ವೈರಸ್ ಲಸಿಕೆಯ ಪ್ರಥಮ ಡೋಸ್ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News