ದುಬೈ: ಅನಿವಾಸಿ ಭಾರತೀಯರಿಗೆ ಕಾನ್ಸುಲೇಟ್ ಜನರಲ್ ಕಚೇರಿಯಿಂದ ತಿಂಗಳಿಗೊಮ್ಮೆ ಉಪಹಾರ ಕೂಟ

Update: 2020-12-29 18:06 GMT

ದುಬೈ,ಡಿ.29: ದುಬೈನಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ಕಾರ್ಯಾಲಯವು, ಜನವರಿ ಒಂದರಿಂದ ತಿಂಗಳಿಗೊಮ್ಮೆ ಅನಿವಾಸಿ ಭಾರತೀಯ ಕಾರ್ಮಿಕರಿಗಾಗಿ ಉಪಹಾರ ಕೂಟವನ್ನು ಅವರ ವಸತಿ ಸ್ಥಳಗಳಲ್ಲಿ ಆಯೋಜಿಸಲಿದೆ. ಅನಿವಾಸಿ ಭಾರತೀಯರಿಗೆ ಸ್ಪಂದಿಸುವ ವಿನೂತನ ಕಾರ್ಯಕ್ರಮದ ಭಾಗ ಇದಾಗಿದೆಯೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಯುಎಇನಲ್ಲಿರುವ ಪ್ರವಾಸಿ ಭಾರತೀಯ ಸಹಾಯತಾ ಕೇಂದ್ರ (ಪಿಬಿಎಸ್‌ಕೆ)ದ ಸಹಯೋಗದೊಂದಿಗೆ ‘ಬ್ರೇಕ್‌ಫಾಸ್ಟ್ ವಿದ್ ಕಾನ್ಸುಲ್ ಜನರಲ್’ ಕಾರ್ಯಕ್ರಮವು ನಡೆಯಲಿದೆಯೆಂದು ಕಾನ್ಸುಲೇಟ್ ಜನರಲ್ ಕಚೇರಿಯ ಮೂಲಗಳು ತಿಳಿಸಿವೆ.

ಅನಿವಾಸಿ ಭಾರತೀಯ ಕಾರ್ಮಿಕರಲ್ಲಿ ಆರ್ಥಿಕ ಸಾಕ್ಷರತೆ ಹಾಗೂ ಯೋಜನೆ, ನೂತನ ಕೌಶಲ್ಯಗಳ ಕಲಿಯುವಿಕೆ, ಆರೋಗ್ಯ ತಪಾಸಣೆ, ಪಿಬಿಎಸ್‌ಕೆ ಸಂಸ್ಥೆಯಿಂದ ಲಭ್ಯವಿರುವ ನೆರವು ಮತ್ತಿತರ ಮಾಹಿತಿಗಳ ಬಗ್ಗೆ ಅರಿವು ಮೂಡಿಸಲು ಉದ್ದೇಶವನ್ನು ಈ ಕಾರ್ಯಕ್ರಮವು ಹೊಂದಿದೆಯೆಂದು ಗಲ್ಫ್ ನ್ಯೂಸ್ ಪತ್ರಿಕೆ ವರದಿ ಮಾಡಿದೆ.

ಕೋವಿಡ್-19 ಶಿಷ್ಟಾಚಾರಗಳೊಂದಿಗೆ ಕಾನ್ಸುಲೇಟ್ ಜನರಲ್ ಸಹಭಾರತೀಯರೊಂದಿಗೆ ಉಪಹಾರವನ್ನು ಕೈಗೊಳ್ಳಲಿದ್ದಾರೆಂದು ಭಾರತೀಯ ರಾಯಭಾರಿ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News