ಹೂಡಿಕೆದಾರರು, ವೈದ್ಯರು, ಲೇಖಕರು ವಿಜ್ಞಾನಿಗಳಿಗೆ ಯುಎಇ ಪೌರತ್ವ

Update: 2021-01-30 15:13 GMT
photo:twitter

ದುಬೈ (ಯುಎಇ), ಜ. 30: ಬಂಡವಾಳ ಹೂಡಿಕೆದಾರರು ಹಾಗೂ ವಿಜ್ಞಾನಿಗಳು ಮತ್ತು ವೈದ್ಯರು ಸೇರಿದಂತೆ ವೃತ್ತಿಪರರು ಮತ್ತು ಅವರ ಕುಟುಂಬ ಸದಸ್ಯರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಂಗೀಕರಿಸಿದೆ.

‘‘ಪ್ರತಿ ವಿಭಾಗಕ್ಕೆ ನಿಗದಿಪಡಿಸಲಾದ ಮಾನದಂಡಗಳಿಗೆ ಹೊಂದಿಕೆಯಾಗುವ ವಿದೇಶೀಯರನ್ನು ಯುಎಇ ಸಚಿವ ಸಂಪುಟ, ಸ್ಥಳೀಯ ಅಮೀರಿ ನ್ಯಾಯಾಲಯಗಳು ಮತ್ತು ಕಾರ್ಯಕಾರಿ ಮಂಡಳಿಗಳು ಪೌರತ್ವಕ್ಕೆ ಶಿಫಾರಸು ಮಾಡುತ್ತವೆ’’ ಎಂದು ದುಬೈ ಆಡಳಿತಗಾರ ಹಾಗೂ ಯುಇಎ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಶನಿವಾರ ಟ್ವಿಟರ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.

‘‘ಅದೇ ವೇಳೆ, ಈಗಾಗಲೇ ಯುಎಇ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರ ಪೌರತ್ವ ಮುಂದುವರಿಯುತ್ತದೆ’’ ಎಂದು ಅವರು ಹೇಳಿದ್ದಾರೆ.

ಯುಎಇಯಲ್ಲಿ ವಾಸಿಸುತ್ತಿರುವ ವಿದೇಶೀಯರು ನವೀಕರಿಸಬಹುದಾದ ವೀಸಾಗಳನ್ನು ಸಾಮಾನ್ಯವಾಗಿ ಹೊಂದಿರುತ್ತಾರೆ. ಆ ವೀಸಾಗಳ ವಾಯಿದೆ ಅವರ ಉದ್ಯೋಗಗಳನ್ನು ಹೊಂದಿಕೊಂಡು ಕೆಲವೇ ವರ್ಷಗಳ ಅವಧಿಯದ್ದಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಯುಎಇ ಸರಕಾರವು ತನ್ನ ವೀಸಾ ನೀತಿಗಳನ್ನು ಹೆಚ್ಚೆಚ್ಚು ಸರಳಗೊಳಿಸುತ್ತಿದೆ. ಕೆಲವು ವಿಧಗಳ ಹೂಡಿಕೆದಾರರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ದೀರ್ಘಾವಧಿಯ ವಾಸ್ತವ್ಯಗಳನ್ನು ನೀಡುತ್ತಿದೆ.

ಸರಕಾರದ ನೂತನ ಕಾನೂನಿನ ಪ್ರಕಾರ, ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ಕಲಾವಿದರು, ಲೇಖಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಪೌರತ್ವ ನೀಡಬಹುದಾಗಿದೆ.

‘‘ನಮ್ಮ ಅಭಿವೃದ್ಧಿ ಯಾನಕ್ಕೆ ದೇಣಿಗೆ ನೀಡಬಲ್ಲ ಪ್ರತಿಭೆಗಳನ್ನು ಆಕರ್ಷಿಸುವುದಕ್ಕಾಗಿ ನೂತನ ಕಾನೂನುಗಳನ್ನು ತರಲಾಗುತ್ತಿದೆ’’ ಎಂದು ದುಬೈ ಆಡಳಿತಗಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News