ಸೌದಿ: 3 ವರ್ಷದ ಜೈಲು ಶಿಕ್ಷೆಯ ಬಳಿಕ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬಿಡುಗಡೆ

Update: 2021-02-12 04:43 GMT
photo: twitter(Al Jazeera English)

ರಿಯಾದ್ (ಸೌದಿ ಅರೇಬಿಯ), ಫೆ. 11: ಸೌದಿ ಅರೇಬಿಯದ ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲುಜೈನ್ ಅಲ್ ಹಜ್ಲೂಲ್‌ರನ್ನು ಅಧಿಕಾರಿಗಳು ಬುಧವಾರ ಬಿಡುಗಡೆಗೊಳಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

31 ವರ್ಷದ ಹೋರಾಟಗಾರ್ತಿ ಸುಮಾರು 3 ವರ್ಷ ಜೈಲಿನಲ್ಲಿದ್ದರು. ತನ್ನ ಮಾನವಹಕ್ಕುಗಳ ದಾಖಲೆಯ ವಿಷಯದಲ್ಲಿ ಸೌದಿ ಅರೇಬಿಯವು ಹೊಸದಾಗಿ ಅಮೆರಿಕದ ಒತ್ತಡಕ್ಕೆ ಒಳಗಾದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸುವ ಕಾನೂನು ರದ್ದುಗೊಳ್ಳುವ ವಾರಗಳ ಮೊದಲು, 2018 ಮೇ ತಿಂಗಳಲ್ಲಿ ಹಜ್ಲೂಲ್ ಮತ್ತು ಇತರ ಸುಮಾರು 10 ಹೋರಾಟಗಾರ್ತಿಯರನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದರು. ಸೌದಿ ಅರೇಬಿಯದ ಈ ನಡೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಹಜ್ಲೂಲ್ ಜೈಲಿನಿಂದ ಬಿಡುಗಡೆಗೊಂಡರೂ ಅವರನ್ನು ನಿಗಾದಲ್ಲಿ ಇಡಲಾಗಿದೆ ಹಾಗೂ ಅವರು ದೇಶ ತೊರೆಯುವುದನ್ನು ನಿಷೇಧಿಸಲಾಗಿದೆ. ಅವರ ಬಿಡುಗಡೆಗಾಗಿ ಅವರ ಕುಟುಂಬ ಸದಸ್ಯರು ವಿದೇಶಗಳಲ್ಲಿ ಬೃಹತ್ ಆಂದೋಲನ ನಡೆಸಿದ್ದರು. ಇದು ಸೌದಿ ಆಡಳಿತಗಾರರಿಗೆ ತಲೆನೋವಾಗಿತ್ತು.

ಸರಿಯಾದ ನಿರ್ಧಾರ: ಜೋ ಬೈಡನ್

ವಾಶಿಂಗ್ಟನ್, ಫೆ. 11: ಸೌದಿ ಅರೇಬಿಯದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲುಜೈನ್ ಅಲ್ ಹಜ್ಲೂಲ್‌ರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಸೌದಿ ಅರೇಬಿಯದ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದ್ದಾರೆ.

‘‘ಅವರ ಬಿಡುಗಡೆ ಸರಿಯಾದ ನಿರ್ಧಾರವಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಮಾನವಹಕ್ಕುಗಳ ದಾಖಲೆಯ ಪರಿಶೀಲನೆಯನ್ನು ತೀವ್ರಗೊಳಿಸುವುದಾಗಿ ಬೈಡನ್ ಪಣತೊಟ್ಟಿದ್ದರು.

ಮಹಿಳಾ ಹಕ್ಕುಗಳ ಹೋರಾಟಗಾರ್ತಿಯನ್ನು ಜೈಲಿಗೆ ಹಾಕಲೇಬಾರದಾಗಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

‘‘ಮಹಿಳಾ ಹಕ್ಕುಗಳು ಮತ್ತು ಇತರ ಮಾನವಹಕ್ಕುಗಳ ಪರವಾಗಿ ಮಾತನಾಡುವುದನ್ನು ಯಾವತ್ತೂ ಅಪರಾಧ ಎಂಬುದಾಗಿ ಪರಿಗಣಿಸಬಾರದು’’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News