ಯೂಸುಫ್‌ ಅಲಿ ಮಧ್ಯಪ್ರವೇಶದಿಂದ ಮರಣದಂಡನೆಯಿಂದ ಪಾರಾಗಿ ಕೇರಳದ ಮನೆಗೆ ತಲುಪಿದ ಕೃಷ್ಣನ್

Update: 2021-06-10 04:22 GMT

photo: twiiter(@Ashoke_Raj)

ಅಬುಧಾಬಿ (ಯುಎಇ), ಜೂ. 9: ಯುಎಇಯಲ್ಲಿ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಮರಣ ದಂಡನೆಗೊಳಗಾಗಿ ಸುಮಾರು 9 ವರ್ಷ ಜೈಲಿನಲ್ಲಿದ್ದ ಭಾರತೀಯರೊಬ್ಬರು ಭಾರತಕ್ಕೆ ಮರಳಿ ತಮ್ಮ ಮನೆಗೆ ತಲುಪಿದ್ದಾರೆಂದು ತಿಳಿದು ಬಂದಿದೆ.

‌2012ರ ಸೆಪ್ಟಂಬರ್ ನಲ್ಲಿ ಕೇರಳದ ನಿವಾಸಿಯಾಗಿರುವ ಬೆಕ್ಸ್ ಕೃಷ್ಣನ್ರನ್ನೊಳಗೊಂಡ ರಸ್ತೆ ಅಪಘಾತದಲ್ಲಿ ಸುಡಾನ್ ದೇಶದ ಬಾಲಕ ಮೃತಪಟ್ಟಿದ್ದರು. ಅದಕ್ಕಾಗಿ ಅವರಿಗೆ ನ್ಯಾಯಾಲಯವೊಂದು ಅವರಿಗೆ ಮರಣ ದಂಡನೆ ವಿಧಿಸಿತ್ತು. ಈ ಪ್ರಕರಣದಲ್ಲಿ ಲುಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಮಧ್ಯಪ್ರವೇಶಿಸಿ 5 ಲಕ್ಷ ದಿರ್ಹಮ್ (ಸುಮಾರು ಒಂದು ಕೋಟಿ ರೂಪಾಯಿ) ಪರಿಹಾರವನ್ನು ನ್ಯಾಯಾಲಯದಲ್ಲಿ ಪಾವತಿಸಿದ್ದರು.
ಕೃಷ್ಣನ್ ಮಂಗಳವಾರ ರಾತ್ರಿ ಅಬುಧಾಬಿಯಿಂದ ಹೊರಟು ಬುಧವಾರ ಮುಂಜಾನೆ ಕೊಚ್ಚಿ ತಲುಪಿದ್ದಾರೆ.

‘‘ಇದು ನನಗೆ ಸಿಕ್ಕಿದ ಎರಡನೇ ಬದುಕು. ನನಗೆ ತುಂಬಾ ಸಂತೋಷವಾಗಿದೆ. ಯೂಸುಫ್ ಅಲಿಯಿಂದಾಗಿ ನಾನಿಲ್ಲಿದ್ದೇನೆ. ನನ್ನ ಪ್ರಕರಣದಲ್ಲಿ ಅವರು ಮಧ್ಯಪ್ರವೇಶಿಸಿದಂದಿನಿಂದ ನನಗೆ ಬದುಕುವ ಭರವಸೆ ಮೂಡಿತು’’ ಎಂದು ತ್ರಿಶೂರ್ ಜಿಲ್ಲೆಯ ನಿವಾಸಿಯಾಗಿರುವ ಕೃಷ್ಣನ್ ಕೊಚ್ಚಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಕೃಷ್ಣನ್ ರ ಪತ್ನಿ ವೀಣಾ ಮತ್ತು ಮಗ ಅದ್ವೈತ್ ವಿಮಾನ ನಿಲ್ದಾಣದಲ್ಲಿ ಕೃಷ್ಣನ್ ರನ್ನು ಸ್ವಾಗತಿಸಿದರು. ‘‘ನಾನು ಯೂಸುಫ್ ಸರ್ ಮತ್ತು ಅವರ ಕುಟುಂಬಕ್ಕೆ ಋಣಿಯಾಗಿದ್ದೇನೆ’’ ಎಂದು ವೀಣಾ ಹೇಳಿದರು.

ಯೂಸುಫ್ ಅಲಿ ಮಧ್ಯಪ್ರವೇಶ: ಮೃತ ಬಾಲಕನ ಕುಟುಂಬ ಸದಸ್ಯರಿಂದ ಕೃಷ್ಣನ್ ಗೆ ಕ್ಷಮೆ

ಕೃಷ್ಣನ್ ರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಅವರ ಬಿಡುಗಡೆಗಾಗಿ 2012ರಿಂದಲೂ ಪ್ರಯತ್ನಿಸುತ್ತಿದ್ದರು. ಆದರೆ, ಯಾವುದೇ ಯಶಸ್ಸು ಸಿಕ್ಕಿರಲಿಲ್ಲ. ಬಳಿಕ ಕುಟುಂಬ ಸದಸ್ಯರು ಯೂಸುಫ್ ಅಲಿಯನ್ನು ಸಂಪರ್ಕಿಸಿದರು. ಪ್ರಕರಣವನ್ನು ಕೈಗೆತ್ತಿಕೊಂಡ ಅವರು ಅಪಘಾತದಲ್ಲಿ ಮೃತಪಟ್ಟ ಬಾಲಕನ ಕುಟುಂಬವನ್ನು ಸುಡಾನ್ ನಿಂದ ಅಬುಧಾಬಿಗೆ ಒಂದು ತಿಂಗಳ ಅವಧಿಗೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ಕೃಷ್ಣನ್ ಗೆ ಕ್ಷಮೆ ನೀಡುವುದು ಹಾಗೂ ಪರಿಹಾರ ಮೊತ್ತದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಅಂತಿಮವಾಗಿ ಪರಿಹಾರ ಪಡೆದು ಕೃಷ್ಣನ್ ಗೆ ಕ್ಷಮೆ ನೀಡಲು ಮೃತ ಬಾಲಕನ ಕುಟುಂಬ ಒಪ್ಪಿಕೊಂಡಿತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News