ಯುಎಇ: ಉದ್ಯೋಗ, ಪಾಸ್ ಪೋರ್ಟ್ ಗಳಿಲ್ಲದೆ ಅತಂತ್ರರಾಗಿರುವ ಭಾರತೀಯ ಕಾರ್ಮಿಕರು

Update: 2021-06-16 14:48 GMT

ದುಬೈ,ಜೂ.16: ಏಜೆಂಟ್ ನಿಂದ ವಂಚನೆಗೊಳಗಾಗಿರುವ ಎಂಟು ಭಾರತೀಯ ಕಾರ್ಮಿಕರ ಗುಂಪೊಂದು ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ದಲ್ಲಿ ಉದ್ಯೋಗಗಳಿಲ್ಲದೆ ಅತಂತ್ರವಾಗಿದೆ. ಈ ಕಾರ್ಮಿಕರ ಬಳಿ ಪಾಸ್ಪೋರ್ಟ್ ಗಳೂ ಇಲ್ಲ, ಹೀಗಾಗಿ ಹೊಸ ಕೆಲಸಗಳನ್ನು ಹುಡುಕಿಕೊಳ್ಳಲು ಅಥವಾ ಭಾರತಕ್ಕೆ ಮರಳಲೂ ಅವರಿಗೆ ಸಾಧ್ಯವಾಗುತ್ತಿಲ್ಲ.

ಈ ಗುಂಪು ಸದ್ಯಕ್ಕೆ ಕಾರ್ಮಿಕರ ವಸತಿ ತಾಣದಲ್ಲಿ ಉಳಿದುಕೊಂಡಿದೆ.

ಈ ಕಾರ್ಮಿಕರ ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ಬಳಿಕ ದುಬೈನಲ್ಲಿಯ ಭಾರತೀಯ ದೂತಾವಾಸವು ಅವರಿಗೆ ಕೆಲವು ಸಾಮಾಜಿಕ ಕಾರ್ಯಕರ್ತರ ಸೇವೆಯನ್ನು ಲಭ್ಯವಾಗಿಸಿದೆ.
ಏಜೆಂಟ್ ತಮಗೆ ಉದ್ಯೋಗದ ಭರವಸೆ ನೀಡಿ ಯುಎಇಗೆ ಕರೆತಂದಿದ್ದ. ತಾವು ಆತನಿಗೆ ತಲಾ 30,000 ರೂ.ಗಳನ್ನು ನೀಡಿದ್ದೆವು ಎಂದು ಈ ಕಾರ್ಮಿಕರು ತಿಳಿಸಿದರು.
ಆಹಾರ,ಕೆಲಸ ಅಥವಾ ಹಣ ಇಲ್ಲದೆ ನಾವು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಕಾರ್ಮಿಕರ ಪೈಕಿ ರೈಜುಲ್ಲಾ ದಿವಾನ್ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಕಿರಣ ಎನ್ನುವವರು ಈ ಕಾರ್ಮಿಕರು ಬೀದಿಗಳಲ್ಲಿ ಅಂಡಲೆಯುತ್ತಿರುವುದನ್ನು ಮೊದಲು ಗುರುತಿಸಿ,ತಕ್ಷಣ ದೂತಾವಾಸದ ಅಧಿಕಾರಿಗಳ ನೆರವು ಕೋರಿದ್ದರು. ದೂತಾವಾಸವು ಕಾರ್ಮಿಕರಿಗೆ ನೆರವಾಗುವಂತೆ ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಹಿದಾಯತ್ ಅಡೂರು ಎನ್ನುವವರನ್ನು ಕೋರಿತ್ತು. ಹಿದಾಯತ್ ಈ ಕಾರ್ಮಿಕರಿಗೆ ವಸತಿ,ಆಹಾರ ಮತ್ತು ಇತರ ಪ್ರಾಥಮಿಕ ಅಗತ್ಯಗಳನ್ನು ಒದಗಿಸುತ್ತಿದ್ದಾರೆ.

ಮಾ.5ರಂದು ದುಬೈಗೆ ಆಗಮಿಸಿದ್ದ ಈ ಕಾರ್ಮಿಕರು ಒಂದು ತಿಂಗಳು ನಿಗದಿತ ತಾಣದಲ್ಲಿ ಮೊಕ್ಕಾಂ ಹೂಡಿದ್ದರು. ತಮ್ಮನ್ನು ಕೆಲಸಕ್ಕೆ ನೇಮಿಸಿಕೊಳ್ಳಲಿದ್ದ ಕಂಪನಿಗೆ ಏಜೆಂಟ್ ಪಾಸ್ಪೋರ್ಟ್ಗಳನ್ನು ನೀಡಿಲ್ಲ ಎನ್ನುವುದು ನಂತರ ಅವರಿಗೆ ಗೊತ್ತಾಗಿತ್ತು.
ಕೆಲವು ಕಂಪನಿಗಳು ಈ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಯಸಿವೆ, ಹೀಗಾಗಿ ಕಾರ್ಮಿಕರಿಗೆ ಪಾಸ್ಪೋರ್ಟ್ ಗಳ ತೀವ್ರ ಅಗತ್ಯವಿದೆ ಎಂದು ಹಿದಾಯತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News