ಭಾರತ ಸೇರಿದಂತೆ ಕೆಲವು ದೇಶಗಳಿಂದ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದ ದುಬೈ

Update: 2021-06-20 06:11 GMT
ಸಾಂದರ್ಭಿಕ ಚಿತ್ರ

ದುಬೈ: ಯುಎಇ ಅನುಮೋದಿತ ಕೋವಿಡ್ -19 ಲಸಿಕೆಯ ಎರಡು ಡೋಸ್ ಗಳನ್ನು ಸ್ವೀಕರಿಸಿರುವ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿರುವ ತಮ್ಮ ನಿವಾಸಿಗಳಿಗೆ ಪ್ರಯಾಣ ನಿರ್ಬಂಧವನ್ನು ದುಬೈನ ಅಧಿಕಾರಿಗಳು ಸಡಿಲಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜೂನ್ 23 ರಿಂದ ಜಾರಿಗೆ ಬರುವಂತೆ ದಕ್ಷಿಣ ಆಫ್ರಿಕಾ, ನೈಜೀರಿಯಾ ಹಾಗೂ ಭಾರತದ ಒಳಬರುವ ಪ್ರಯಾಣಿಕರಿಗಾಗಿ ದುಬೈನ ಪ್ರಯಾಣ ಶಿಷ್ಟಾಚಾರದ ಅಪ್ ಡೇಟ್ ಅನ್ನು ಶೇಖ್ ಮನ್ಸೂರ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಂ ನೇತೃತ್ವದ ದುಬೈನಲ್ಲಿನ ಬಿಕ್ಕಟ್ಟು ಹಾಗೂ  ವಿಪತ್ತು ನಿರ್ವಹಣೆಯ ಸುಪ್ರೀಂ ಸಮಿತಿಯು ಪ್ರಕಟಿಸಿದೆ  ಎಂದು 'ಗಲ್ಫ್ ನ್ಯೂಸ್' ವರದಿ ಮಾಡಿದೆ.

ಭಾರತದಿಂದ ಪ್ರಯಾಣಕ್ಕೆ ಸಂಬಂಧಿಸಿದಂತೆ, ಯುಎಇ ಅನುಮೋದಿತ ಲಸಿಕೆಯ ಎರಡು ಡೋಸ್ ಪಡೆದಿರುವ ಮಾನ್ಯತೆ ಪಡೆದ ನಿವಾಸಿ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅವಕಾಶವಿದೆ. ಯುಎಇ ಸರಕಾರವು ನಾಲ್ಕು ಲಸಿಕೆಗಳಾಗಿರುವ ಸಿನೊಫಾರ್ಮ್, ಫೈಝರ್-ಬಯೋಟೆಕ್, ಸ್ಪುಟ್ನಿಕ್ ವಿ ಹಾಗೂ ಆಕ್ಸ್ಫರ್ಡ್-ಆಸ್ಟ್ರಝೆನೆಕಾ ಅನ್ನು ಅನುಮೋದಿಸಿದೆ ಎಂದು ವರದಿ ತಿಳಿಸಿದೆ.

ಇದಲ್ಲದೆ, ದುಬೈಗೆ ಹೊರಡುವ ನಾಲ್ಕು ಗಂಟೆಗಳ ಮೊದಲು ಭಾರತದಿಂದ ನಿರ್ಗಮಿಸುವ ಪ್ರಯಾಣಿಕರು ರ್ಯಾಪಿಡ್  ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅವರು ದುಬೈಗೆ ಆಗಮಿಸಿದ ಬಳಿಕ ಮತ್ತೊಂದು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಇದಲ್ಲದೆ, ಆಗಮನದ ನಂತರ, ಭಾರತದಿಂದ ಬರುವ ಪ್ರಯಾಣಿಕರು ತಮ್ಮ ಪಿಸಿಆರ್ ಪರೀಕ್ಷಾ ಫಲಿತಾಂಶವನ್ನು ಪಡೆಯುವವರೆಗೆ ಸಾಂಸ್ಥಿಕ ಸಂಪರ್ಕತಡೆಯನ್ನು ಮಾಡಬೇಕಾಗುತ್ತದೆ, ಫಲಿತಾಂಶವನ್ನು 24 ಗಂಟೆಗಳ ಒಳಗೆ ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News