ಸೌದಿಯ ನಿರುದ್ಯೋಗ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಕೆ

Update: 2021-07-03 17:16 GMT
ಸಾಂದರ್ಭಿಕ ಚಿತ್ರ

ರಿಯಾದ್, ಜು.3: ಸೌದಿ ಅರೆಬಿಯಾದಲ್ಲಿ ನಿರುದ್ಯೋಗ ದರ ಕಳೆದ 5 ವರ್ಷಗಳಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದ್ದು ಇದಕ್ಕೆ ಕೊರೋನ ವೈರಸ್ ಸೋಂಕಿನ ವಿರುದ್ಧ ಸರಕಾರದ ತ್ವರಿತ ಕ್ರಮ, ಉದ್ಯೋಗರಂಗದಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು 2030ರ ದೂರದೃಷ್ಟಿಯ ಆರ್ಥಿಕ ಸುಧಾರಣೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಸೌದಿ ಅರೆಬಿಯಾದಲ್ಲಿ ಆರ್ಥಿಕ ಚಟುವಟಿಕೆಗಳು ಪುಟಿದೆದ್ದಿರುವುದು ಮತ್ತು ಉದ್ಯೋಗರಂಗದಲ್ಲಿ ದಾಖಲೆ ಪ್ರಮಾಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ನಿರುದ್ಯೋಗ ದರ ನಿರಂತರ ಇಳಿಮುಖವಾಗುತ್ತಿದೆ. 2021ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ದೇಶದ ನಿರುದ್ಯೋಗ ದರ 11.7% ಇದ್ದರೆ ಕಳೆದ ವರ್ಷದ ಇದೇ ಅವಧಿಯಲ್ಲಿ 12.6%ವಿತ್ತು ಎಂದು ‘ದಿ ಜನರಲ್ ಅಥಾರಿಟಿ ಫಾರ್ ಸ್ಟಾಟಿಸ್ಟಿಕ್ಸ್(ಜಿಎಎಸ್ಟಿಎಟಿ) ವರದಿ ಹೇಳಿದೆ. 2016ರ ದ್ವಿತೀಯ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ 11.6%ಕ್ಕೆ ಇಳಿದಿದ್ದು ಆ ಬಳಿಕದ ಕನಿಷ್ಟ ದರ ಇದಾಗಿದೆ. 

ಉದ್ಯೋಗಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಳೆದ ತ್ರೈಮಾಸಿಕದಲ್ಲಿ 32.1% ಇದ್ದುದು ಈ ವರ್ಷದ ತ್ರೈಮಾಸಿಕದಲ್ಲಿ 33.6%ಕ್ಕೇರಿದೆ.  ದೇಶದ ಆರ್ಥಿಕ ಚಟುವಟಿಕೆಗಳನ್ನು ವೈವಿಧ್ಯಗೊಳಿಸುವ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಮಹಾತ್ವಾಕಾಂಕ್ಷೆಯ ವಿಷನ್ 2030 ಎಂಬ ಪರಿಕಲ್ಪನೆಯು ದೇಶದಲ್ಲಿ 2016ರಿಂದ ಮಿಲಿಯನ್ ಉದ್ಯೋಗ ಸೃಷ್ಟಿಸಿದ್ದು 2030ರ ವೇಳೆ ನಿರುದ್ಯೋಗ ಪ್ರಮಾಣವನ್ನು 7%ಕ್ಕೆ ಇಳಿಸುವ ಗುರಿ ಹೊಂದಲಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News