ಸೌದಿ ಅರೇಬಿಯಾ: ಹಜ್ ಯಾತ್ರೆಗೆ ಪ್ರಥಮ ಸ್ಮಾರ್ಟ್‌ ಕಾರ್ಡ್ ಬಿಡುಗಡೆ

Update: 2021-07-13 17:57 GMT
photo: twitter/@lifeinmadinah

ಜಿದ್ದಾ, ಜು.13: ಈ ವರ್ಷದ ಪವಿತ್ರ ಹಜ್‌ ಯಾತ್ರೆ ಹಿನ್ನೆಲೆಯಲ್ಲಿ ಪ್ರಥಮ ಸ್ಮಾರ್ಟ್ ಕಾರ್ಡ್ ಅನ್ನು ಮಕ್ಕಾದ ಗವರ್ನರ್, ಸೆಂಟ್ರಲ್ ಹಜ್ ಸಮಿತಿ ಅಧ್ಯಕ್ಷ ರಾಜಕುಮಾರ ಖಲೀದ್ ಅಲ್‌ ಫೈಸಲ್ ಮತ್ತು ಅವರ ಸಹಾಯಕ ರಾಜಕುಮಾರ ಬದ್ರ್ ಬಿನ್ ಸುಲ್ತಾನ್ ಉಪಸ್ಥಿತಿಯಲ್ಲಿ ಸೋಮವಾರ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ‌

ಹಜ್ ಯಾತ್ರೆಯ ಪೂರ್ವಸಿದ್ಥತೆಯನ್ನು ಪರಿಶೀಲಿಸಲು ಅವರು ಸೋಮವಾರ ಪವಿತ್ರ ನಗರಕ್ಕೆ ಆಗಮಿಸಿದಾಗ ಸ್ಮಾರ್ಟ್ ಕಾರ್ಡ್ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಇದೇ ಮೊದಲ ಬಾರಿಗೆ ಯಾತ್ರಿಗಳು ತಮ್ಮ ಪ್ರವಾಸದುದ್ದಕ್ಕೂ ತಂತ್ರಜ್ಞಾನದ ನೆರವು ಪಡೆಯುವಂತಾಗಿದೆ. ಇದೇ ಸಂದರ್ಭ ಅಲ್ ಶುಮೈಸಿ ಭದ್ರತಾ ನಿಯಂತ್ರಣ ಕೇಂದ್ರದ ಕಾಮಗಾರಿಗೂ ರಾಜಕುಮಾರ ಖಲೀದ್ ಚಾಲನೆ ನೀಡಿದ್ದಾರೆ. 1.6 ಮಿಲಿಯನ್ ಚದರ ಮೀಟರ್ ವ್ಯಾಪ್ತಿಯ ಪ್ರದೇಶ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದು ಸ್ಕ್ರೀನಿಂಗ್ ಮತ್ತು ಏಕೀಕೃತ ಡಿಜಿಟಲ್ ಮಹಾದ್ವಾರದ ವ್ಯವಸ್ಥೆ ರೂಪಿಸಲಾಗುವುದು. ಇದರಿಂದ ಮಕ್ಕಾ ನಗರ ಪ್ರವೇಶಕ್ಕೆ ಯಾತ್ರಿಗಳು ಕಾಯುವ ಅವಧಿ 45 ನಿಮಿಷದಿಂದ 7 ನಿಮಿಷಕ್ಕೆ ಇಳಿಯಲಿದೆ ಮತ್ತು ಸುಗಮ ಸಂಚಾರ ಸಾಧ್ಯವಾಗಲಿದೆ . 

ಜೊತೆಗೆ, ವಾಹನಗಳು ಸಾಗುವ ರಸ್ತೆಗಳ ಸಂಖ್ಯೆಯನ್ನು 6ರಿಂದ 16ಕ್ಕೇರಿಸಲಾಗಿದೆ, ಬಸ್ಸು, ಸಾರಿಗೆ ವಾಹನ, ಟ್ರಕ್ ಹಾಗೂ ತುರ್ತು ವಾಹನಗಳಿಗೆ ವಿಶೇಷ ರಸ್ತೆಯ ವ್ಯವಸ್ಥೆಯಿದೆ. ಕೇಂದ್ರ ಕಚೇರಿ ಯೋಜನೆಯಲ್ಲಿ ಆಡಳಿತ ಕಚೇರಿ, ಒಂದು ಮಸೀದಿ, ನಾಗರಿಕ ರಕ್ಷಣಾ ವಿಭಾಗದ ಕಚೇರಿ, ರೆಡ್ಕ್ರಾಸ್ ಸಂಸ್ಥೆಯ ಕಚೇರಿ, ಭದ್ರತೆ ಮತ್ತು ಸರಕಾರಿ ಪ್ರಾಧಿಕಾರದ ಕಚೇರಿಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News