ಯುಎಇ: ಬರಾಖಾ ಅಣುಸ್ಥಾವರದ 2ನೇ ಘಟಕ ಕಾರ್ಯಾರಂಭ

Update: 2021-08-27 17:21 GMT

 ರಿಯಾದ್, ಆ.27: ಅಬುಧಾಬಿಯ ಅಲ್ ಧಪ್ರಾ ವಲಯದಲ್ಲಿರುವ ಬರಾಖಾ ಅಣುಸ್ಥಾವರದ 2ನೇ ಘಟಕದ ಕಾರ್ಯಾರಂಭದ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಯುಎಇಯ ಪರಮಾಣು ಶಕ್ತಿ ಸ್ಥಾವರ ನಿಗಮದ ಅಧಿಕಾರಿಗಳು ಹೇಳಿರುವುದಾಗಿ ಅಬುಧಾಬಿ ಮಾಧ್ಯಮ ಕಚೇರಿಯ ಹೇಳಿಕೆ ತಿಳಿಸಿದೆ. ಮುಂದಿನ ದಿನಗಳಲ್ಲಿ 2ನೇ ಘಟಕವನ್ನು ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಸಂಪರ್ಕಿಸಲಾಗುವುದು ಮತ್ತು ವಿದ್ಯುತ್ ಆರೋಹಣ ಪರೀಕ್ಷೆ ಎಂದು ಕರೆಯಲಾಗುವ ಪ್ರಕ್ರಿಯೆಯ ಮೂಲಕ ಇಂಧನದ ಮಟ್ಟವನ್ನು ಕ್ರಮೇಣ ಹೆಚ್ಚಿಸಲಾಗುವುದು. ಸಂಪೂರ್ಣ ಕಾರ್ಯಾಚರಣೆ ಆರಂಭವಾದಾಗ, ಸ್ಥಾವರದ 4 ಘಟಕಗಳಿಂದ 5.6 ಜಿಡಬ್ಯೂ ವಿದ್ಯುತ್ ಉತ್ಪಾದನೆಯಾಗಲಿದೆ ಮತ್ತು ಈ ಮೂಲಕ ಪ್ರತೀ ವರ್ಷ 21 ಮಿಲಿಯನ್ ಟನ್‌ಗೂ ಅಧಿಕ ಇಂಗಾಲ ಹೊರಸೂಸುವಿಕೆಯನ್ನು ತಡೆಯಲಾಗುವುದು. ಗರಿಷ್ಟ ವಿದ್ಯುತ್ ಉತ್ಪಾದನೆ ಹಂತ ತಲುಪುವವರೆಗೆ ವಿದ್ಯುತ್ ಆರೋಹಣ ಪರೀಕ್ಷೆ ಪ್ರಕ್ರಿಯೆಯ ಮೇಲೆ ನಿರಂತರ ನಿಗಾ ಇರಿಸಲಾಗುವುದು. ಈ ಸಂದರ್ಭ ಎಲ್ಲಾ ಅಗತ್ಯದ ನಿಬಂಧನೆಗಳ ಮತ್ತು ಸುರಕ್ಷೆ, ಗುಣಮಟ್ಟ ಮತ್ತು ಭದ್ರತೆಯ ಕುರಿತ ಅಂತರಾಷ್ಟ್ರೀಯ ಗುಣಮಟ್ಟ ನಿಯಮವನ್ನು ಪಾಲಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

   ಮೊದಲ ಘಟಕ ಆರಂಭಿಸಿದ 12 ತಿಂಗಳೊಳಗೆ ಮತ್ತು ಈ ಘಟಕದ ವಾಣಿಜ್ಯ ಉತ್ಪಾದನೆ ಆರಂಭಿಸಿದ 4 ತಿಂಗಳೊಳಗೆ 2ನೇ ಘಟಕದ ಮೈಲುಗಲ್ಲು ಸ್ಥಾಪಿಸಲಾಗಿದೆ. ಈ ಮೂಲಕ ಯುಎಇಗೆ ನಿರಂತರ ಶುದ್ಧ ಮತ್ತು ಸಾಕಷ್ಟು ವಿದ್ಯುತ್ ಪೂರೈಸುವ ನಮ್ಮ ಯಾತ್ರೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. 2ನೇ ಘಟಕದ ಕಾರ್ಯಾರಂಭದೊಂದಿಗೆ ದೇಶದ ವಿದ್ಯುತ್ ಬೇಡಿಕೆಯ 25%ದಷ್ಟು ವಿದ್ಯುತ್ ಅನ್ನು ಪೂರೈಸಲು ಸಾಧ್ಯವಾಗಲಿದೆ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತ ಯುಎಇಯ ಗುರಿ ತಲುಪಲು ನೆರವಾಗಲಿದೆ ಎಂದು ಯುಎಇಯ ಪರಮಾಣು ಶಕ್ತಿ ಸ್ಥಾವರ ನಿಗಮದ ಸಿಇಒ ಮುಹಮ್ಮದ್ ಇಬ್ರಾಹಿಂ ಅಲ್ ಹಮ್ಮದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News