ಇರಾಕ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ದಾಳಿ: ಅಪಾಯದಿಂದ ಪಾರು

Update: 2021-11-07 03:41 GMT
ಇರಾಕ್ ಪ್ರಧಾನಿ ಮುಸ್ತಫಾ ಅಲ್ ಖದೀಮಿ (Photo credit: Twitter@MAKadhimi)

ಬಾಗ್ದಾದ್, ನ.7: ಇರಾಕ್ ಪ್ರಧಾನಿ ಮುಸ್ತಫಾ ಅಲ್ ಖದೀಮಿಯವರ ನಿವಾಸವನ್ನು ಗುರಿ ಮಾಡಿ ರವಿವಾರ ಮುಂಜಾನೆ ಸ್ಫೋಟಕ ತುಂಬಿದ ಡ್ರೋನ್ ದಾಳಿ ನಡೆಸಲಾಗಿದ್ದು, ಪ್ರಧಾನಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ಸಂಪೂರ್ಣ ಆವರಣವಿರುವ ಹಸಿರು ವಲಯವಾಗಿರುವ ಬಾಗ್ದಾದ್‌ನಲ್ಲಿರುವ ಖದೀಮಿ ಅವರ ನಿವಾಸವನ್ನು ಗುರಿ ಮಾಡಿ ದಾಳಿ ನಡೆದಿತ್ತು ಎಂದು ಇರಾಕಿ ಮಿಲಿಟರಿ ಪ್ರಕಟನೆ ಹೇಳಿದೆ. ಆದರೆ ಯಾವುದೇ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಪ್ರಧಾನಿ ಸುರಕ್ಷಿತವಾಗಿದ್ದು, ಜನರು ಶಾಂತಿಯಿಂದ ಇರುವಂತೆ ಖದೀಮಿ ಅವರ ಟ್ವಿಟರ್ ಖಾತೆಯಿಂದ ಮನವಿ ಮಾಡಲಾಗಿದೆ. ಖದೀಮಿ ನಿವಾಸದಲ್ಲಿ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ ಎಂದು ಇಬ್ಬರು ಉನ್ನತ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪ್ರಧಾನಿ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಸಂಘಟನೆಗಳು ದಾಳಿಯ ಹೊಣೆ ವಹಿಸಿಕೊಂಡಿಲ್ಲ.

ಈ ಪ್ರದೇಶದಲ್ಲಿ ಸ್ಫೋಟಗಳು ಮತ್ತು ಬಂದೂಕಿನಿಂದ ಗುಂಡು ಸಿಡಿದ ಸದ್ದು ಕೇಳಿಬಂದಿದೆ ಎಂದು ಸರಕಾರಿ ಕಟ್ಟಡಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳನ್ನು ಹೊಂದಿರುವ ಹಸಿರು ವಲಯದಲ್ಲಿರುವ ಪಾಶ್ಚಿಮಾತ್ಯ ರಾಜತಾಂತ್ರಿಕರು ಹೇಳಿದ್ದಾರೆ.

ಸಂಸದೀಯ ಅಧಿಕಾರಕ್ಕೆ ಹೊಡೆತ ನೀಡಲಾಗಿದೆ ಎನ್ನಲಾದ ಸಾರ್ವತ್ರಿಕ ಚುನಾವಣೆಯನ್ನು ವಿರೋಧಿಸಿ ಇತ್ತೀಚೆಗೆ ಇರಾನ್ ಪರವಾಗಿರುವ ಸಶಸ್ತ್ರ ಗುಂಪುಗಳು ಹಸಿರು ವಲಯದಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News