ಚಿತ್ರಹಿಂಸೆ ಆರೋಪ ಎದುರಿಸುತ್ತಿರುವ ಯುಇಎಯ ಸೇನಾಧಿಕಾರಿ ಇಂಟರ್‌ಪೋಲ್ ಅಧ್ಯಕ್ಷರಾಗಿ ಆಯ್ಕೆ

Update: 2021-11-25 16:52 GMT
 ಜನರಲ್ ಅಹ್ಮದ್ ನಾಸಿರ್ ಅಲ್-ರೈಸಿ(photo:twitter/@INTERPOL_HQ)

ಅಬುಧಾಬಿ, ನ.25: ಚಿತ್ರಹಿಂಸೆ ನೀಡಿದ ಆರೋಪ ಎದುರಿಸುತ್ತಿರುವ ಯುಎಇಯ ಭದ್ರತಾ ಪಡೆಗಳ ಮುಖ್ಯಸ್ಥ ಜನರಲ್ ಅಹ್ಮದ್ ನಾಸಿರ್ ಅಲ್-ರೈಸಿ 4 ವರ್ಷದ ಅವಧಿಗೆ ಇಂಟರ್‌ಪೋಲ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಜಾಗತಿಕ ಪೊಲೀಸ್ ಏಜೆನ್ಸಿ ಇಂಟರ್‌ಪೋಲ್ ಟ್ವೀಟ್ ಮಾಡಿದೆ.

ಜನರಲ್ ಅಹ್ಮದ್ ನಾಸಿರ್ ಅವರನ್ನು ಇಂಟರ್‌ಪೋಲ್ ಅಧ್ಯಕ್ಷರಾಗಿ ನೇಮಿಸುವ ಬಗ್ಗೆ ಮಾನವಹಕ್ಕು ಸಂಘಟನೆಗಳು ಹಾಗೂ ಯುರೋಪಿಯನ್ ಯೂನಿಯನ್‌ನ ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು. ಇಂಟರ್‌ಪೋಲ್‌ನ ಅಧ್ಯಕ್ಷತೆ ಔಪಚಾರಿಕ ಹುದ್ದೆಯಾಗಿದ್ದು ಸಂಸ್ಥೆಯ ದೈನಂದಿನ ಕಾರ್ಯನಿರ್ವಹಣೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯದ್ದಾಗಿರುತ್ತದೆ.

ಹಾಲಿ ಪ್ರಧಾನ ಕಾರ್ಯದರ್ಶಿ ಜುರ್ಗನ್ ಸ್ಟಾಕ್‌ರನ್ನು 2ನೇ ಅವಧಿಗೆ 2019ರಲ್ಲಿ ನೇಮಕಗೊಳಿಸಲಾಗಿದೆ. ಅಹ್ಮದ್ ನಾಸಿರ್ ವಿರುದ್ಧ ಚಿತ್ರಹಿಂಸೆಯ ಆರೋಪ ಟರ್ಕಿ ಮತ್ತು ಫ್ರಾನ್ಸ್‌ನಲ್ಲಿ ಇತ್ತೀಚೆಗೆ ದಾಖಲಿಸಲಾಗಿದೆ. ಅಹ್ಮದ್ ನಾಸಿರ್ ಅವರ ನೇಮಕಾತಿಯಿಂದ ಇಂಟರ್‌ಪೋಲ್ ಮೇಲಾಗುವ ಪರಿಣಾಮಗಳನ್ನು ವಿವರಿಸಿ ಯುರೋಪಿಯನ್ ಸಂಸತ್ತಿನ 3 ಸದಸ್ಯರು ನವೆಂಬರ್ 11ರಂದು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್‌ಡರ್ ಲಿಯೆನ್‌ಗೆ ಪತ್ರ ಬರೆದಿದ್ದರು.

ಜನರಲ್ ಅಹ್ಮದ್ ನಾಸಿರ್ ಅಧ್ಯಕ್ಷರಾಗಿ ಚುನಾಯಿತರಾದರೆ, ಶಾಂತಿಯುತವಾಗಿ ವಿಮರ್ಶಿಸುವವರನ್ನು ವ್ಯವಸ್ಥಿತವಾಗಿ ಗುರಿಯಾಗಿಸುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಮಾನವಹಕ್ಕು ಸಂಘಟನೆ ಸಹಿತ ಹಲವು ಸರಕಾರೇತರ ಸಂಘಟನೆಗಳು 2020ರ ಅಕ್ಟೋಬರ್‌ನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News