ವಿಶ್ವದ ಸಂಪೂರ್ಣ ಕಾಗದ ರಹಿತ, ಡಿಜಿಟಲ್ ನಗರವಾಗಿ ದುಬೈ

Update: 2021-12-13 03:16 GMT

ದುಬೈ: ವಿಶ್ವದ ಪ್ರಥಮ ಕಾಗದ ರಹಿತ ನಗರವಾಗಿ ದುಬೈ ಹೊರಹೊಮ್ಮಿದೆ. ದುಬೈ ನಗರವನ್ನು ಶೇಕಡ 100ರಷ್ಟು ಕಾಗದ ರಹಿತ ನಗರವಾಗಿ ಸರ್ಕಾರ ಅಭಿವೃದ್ಧಿಪಡಿಸಿದೆ ಎಂದು ಎಮಿರೇಟ್‌ನ ದೊರೆ ಶೇಖ್ ಹಮೀದ್ ಬಿನ್ ಮೊಹ್ಮದ್ ಬಿನ್ ರಶೀದ್ ಅಲ್ ಮಕ್ಟೂನ್ ಪ್ರಕಟಿಸಿದ್ದಾರೆ. ಇದರಿಂದ 1.3 ಶತಕೋಟಿ ದಿರ್ಹಮ್ (350 ದಶಲಕ್ಷ ಡಾಲರ್) ಉಳಿತಾಯವಾಗಲಿದ್ದು, 14 ದಶಲಕ್ಷ ಮಾನವ ಗಂಟೆಗಳು ಉಳಿಯಲಿವೆ ಎಂದು ಅವರು ಹೇಳಿದ್ದಾರೆ.

ದುಬೈ ನಗರದ ಎಲ್ಲ ಆಂತರಿಕ ಮತ್ತು ಬಾಹ್ಯ ವಹಿವಾಟುಗಳು ಮತ್ತು ಸರ್ಕಾರಿ ಪ್ರಕ್ರಿಯೆಗಳು ಇದೀಗ ಶೇಕಡ 100ರಷ್ಟು ಡಿಜಿಟಲ್ ಆಗಿರುತ್ತವೆ ಹಾಗೂ ಸಮಗ್ರ ಡಿಜಿಟಲ್ ಸರ್ಕಾರಿ ಸೇವೆಗಳ ಪ್ಲಾಟ್‌ಫಾರಂ ಮೂಲಕ ಇದನ್ನು ನಿರ್ವಹಿಸಲಾಗುತ್ತಿದೆ.

"ಈ ಗುರಿಯನ್ನು ಸಾಧಿಸಿರುವುದು ತನ್ನ ಎಲ್ಲ ಆಯಾಮಗಳಲ್ಲಿ ಡಿಜಿಟಲೀಕೃತ ಜೀವನವನ್ನು ಸಾಧಿಸುವ ದುಬೈ ಪಯಣದಲ್ಲಿ ಮೈಲುಗಲ್ಲಾಗಿದೆ. ಈ ಪಯಣ ಅನುಶೋಧನೆ, ಸೃಜನಶೀಲತೆ ಮತ್ತು ಭವಿಷ್ಯದ ಗುರಿಯ ಮೂಲವನ್ನು ಹೊಂದಿದ ಪಯಣವಾಗಿತ್ತು" ಎಂದು ಶೇಕ್ ಹಮ್ದನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಸಾಧನೆಯು ವಿಶ್ವದ ಅಗ್ರಗಣ್ಯ ಡಿಜಿಟಲ್ ರಾಜಧಾನಿಯಾಗಿ ದುಬೈ ಸ್ಥಾನಮಾನವನ್ನು ದೃಢಪಡಿಸಿದೆ ಮತ್ತು ಗ್ರಾಹಕರ ಸಂತೋಷ ವಿಸ್ತತಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಕಾರ್ಯಾಚಣೆಗಳನ್ನು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸುವಲ್ಲಿ ದುಬೈ ಮಾದರಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಅಮೆರಿಕ, ಬ್ರಿಟನ್, ಯೂರೋಪ್ ಹಾಗೂ ಕೆನಡಾ, ಸರ್ಕಾರಿ ಪ್ರಕ್ರಿಯೆ ಹಾಗೂ ನಾಗರಿಕರ ಗುರುತಿಸುವಿಕೆ ಸೇರಿದಂತೆ ಸರ್ಕಾರಿ ಸೇವೆಗಳನ್ನು ದೊಡ್ಡಪ್ರಮಾಣದಲ್ಲಿ ಡಿಜಿಟಲೀಕರಿಸುವ ಯೋಜನೆಯನ್ನು ಪ್ರಕಟಿಸಿವೆ. ಆದರೆ ಇವು ಸೈಬರ್ ದಾಳಿಗೆ ತುತ್ತಾಗುವ ಅಪಾಯವಿದೆ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಮುಂದಿನ ಐದು ದಶಕಗಳಲ್ಲಿ ದುಬೈ, ಡಿಜಿಟಲ್ ಜೀವನದ ಸೃಷ್ಟಿ ಮತ್ತು ವಿಸ್ತರಣೆಗಾಗಿ ಅತ್ಯಾಧುನಿಕ ಕಾರ್ಯತಂತ್ರಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಉದ್ದೇಶಿಸಿದೆ ಎಂದು ದುಬೈ ದೊರೆ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News