ಯುಎಇ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಆಯ್ಕೆ

Update: 2022-05-14 10:10 GMT
ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ (Photo:Twitter/@MohamedBinZayed)

ದುಬೈ: ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಂಯುಕ್ತ ಅರಬ್ ಸಂಸ್ಥಾನದ ಮಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ದೇಶದ ಸುಪ್ರೀಂ ಕೌನ್ಸಿಲ್ ಇಂದು ಘೋಷಿಸಿದೆ.

ಶುಕ್ರವಾರ ನಿಧನರಾದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್(73) ಅವರ ಸ್ಥಾನವನ್ನು ತುಂಬಲಿರುವ 61 ವರ್ಷದ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ದೇಶದ ಮೂರನೇ ಅಧ್ಯಕ್ಷರಾಗಲಿದ್ದಾರೆ.

ನವೆಂಬರ್ 2004ರಿಂದ ಅಬುಧಾಬಿಯ ರಾಜಕುಮಾರನಾಗಿರುವ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರು ಅಬುಧಾಬಿಯ  17ನೇ ದೊರೆಯಾಗಿಯೂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಫೆಡರಲ್ ಸುಪ್ರೀಂ ಕೌನ್ಸಿಲ್ ಇಂದು ಸಭೆ ಸೇರಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದು ಹೊಸ ಅಧ್ಯಕ್ಷರು ಫೆಡರಲ್ ಸುಪ್ರೀಂ ಕೌನ್ಸಿಲ್‍ನ ಸದಸ್ಯರಿಂದ ಆಯ್ಕೆಯಾಗಿದ್ದಾರೆ ಹಾಗೂ ಐದು ವರ್ಷ ಅಧಿಕಾರಾವಧಿ ಹೊಂದಲಿದ್ದಾರೆ.

ಶೇಖ್ ಮುಹಮ್ಮದ್ ಅವರು ಯುಎಇ ಸೇನಾ ಪಡೆಗಳ ಉಪ ಮುಖ್ಯ ಕಮಾಂಡರ್ ಆಗಿ ಜನವರಿ 2005ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂಯುಕ್ತ ಅರಬ್ ಸಂಸ್ಥಾನದ ಸೇನಾ ಪಡೆಗಳ ತಂತ್ರಗಾರಿಕೆ, ತರಬೇತಿ  ಮತ್ತು ಸಂಘಟನಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಗುರುವಾರ ಮೃತಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ 40 ದಿನಗಳ ಶೋಕಾಚರಣೆಯನ್ನು ಸಂಯುಕ್ತ ಅರಬ್ ಸಂಸ್ಥಾನ ಮಾಡಲಿದೆ. ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಶನಿವಾರದಿಂದ ಮೂರು ದಿನಗಳ ಕಾಲ ಮುಚ್ಚಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News