29 ನಿಮಿಷ ವೃಷ್ಚಿಕಾಸನ: ಭಾರತದ ಯೋಗ ಶಿಕ್ಷಕನಿಂದ ವಿಶ್ವದಾಖಲೆ

Update: 2022-06-22 16:30 GMT

ದುಬೈ, ಜೂ.22: ದುಬೈನಲ್ಲಿ ವಾಸಿಸುವ ಭಾರತದ ಯೋಗ ತರಬೇತುದಾರ ಯಶ್ ಮನ್ಸುಖ್‌ ಭಾಯ್ ಮೊರಾಡಿಯಾ 29 ನಿಮಿಷ ವೃಷ್ಚಿಕಾಶನ(ಚೇಳಿನ ಆಕಾರದ ಆಸನ) ಮಾಡುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

‌21 ವರ್ಷದ ಯಶ್ 29 ನಿಮಿಷ 4 ಸೆಕೆಂಡ್ ಈ ಭಂಗಿಯಲ್ಲಿಯೇ ಇರುವ ಮೂಲಕ ಈ ಹಿಂದಿನ ವಿಶ್ವದಾಖಲೆ 4 ನಿಮಿಷ ಮತ್ತು 47 ಸೆಕೆಂಡ್ ಅನ್ನು ಮೀರಿಸಿದ್ದಾರೆ. ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನದಂದು ಗಿನ್ನೆಸ್ ವಿಶ್ವದಾಖಲೆ ಈ ಕುರಿತ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೃಷ್ಚಿಕಾಸನ ಭಂಗಿಯು ಕಠಿಣ ಆಸನವಾಗಿದ್ದು ಯೋಗ ಮಾಡುವವರ ಕಾಲುಗಳನ್ನು ತಲೆಯ ಮೇಲೆ ಬಗ್ಗಿಸಲು ಮತ್ತೊಬ್ಬ ಸಹಾಯಕನ ಅಗತ್ಯವಿದೆ.

ವೃಷ್ಚಿಕಾಸನವು ಸ್ಥಿರತೆಗೆ ಸಂಬಂಧಿಸಿದೆ. ದೀರ್ಘಾವಧಿಗೆ ಈ ಆಸನದಲ್ಲಿದ್ದಷ್ಟು ಮಾನಸಿಕ ಸ್ಥಿರತೆ, ಏಕಾಗ್ರತೆಗೆ ನೆರವಾಗಲಿದೆ. ಈ ಹಿಂದೆ ನನ್ನ ಕಾಲ್ಬೆರಳು, ಸೊಂಟ, ಬೆನ್ನುನೋವು ತುಂಬಾ ಕಾಡುತ್ತಿತ್ತು. ಆದರೆ ಈ ಆಸನದ ಮೂಲಕ ಅದಕ್ಕೆ ಪರಿಹಾರ ಕಂಡುಕೊಂಡಿದ್ದೇನೆ ಎಂದು ಯಶ್ ಹೇಳಿದ್ದಾರೆ.ಈ ವರ್ಷದ ಫೆಬ್ರವರಿ 22ರಂದು ಯಶ್ ಈ ಸಾಧನೆ ತೋರಿದ್ದಾರೆ. ಈ ಮೂಲಕ ಇದು 2/22/22ರ ವಿಶ್ವದಾಖಲೆ ಎಂಬ ಅನನ್ಯತೆಗೆ ಪಾತ್ರವಾಗಿದೆ ಎಂದು ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News