ಕತರ್ ಇಂಡಿಯನ್ ಸೋಷಿಯಲ್ ಫೋರಂನಿಂದ ರಕ್ತದಾನ ಶಿಬಿರ

Update: 2022-08-19 18:38 GMT

ದೋಹ; ಅನಿವಾಸಿ ಭಾರತೀಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಯಾದ ಕತರ್ ಇಂಡಿಯನ್ ಸೋಷಿಯಲ್ ಫೋರಂ (QISF) ವತಿಯಿಂದ ಬೃಹತ್ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು.

ಭಾರತದ ಸ್ವಾತಂತ್ರ್ಯ ದಿನದ ಸುವರ್ಣ ಮಹೋತ್ಸವ “ಆಝಾದಿ ಕಾ ಅಮೃತ್ ಮಹೋತ್ಸವ್” ಮತ್ತು ಕತರ್ ನಲ್ಲಿ 100 ದಿನಗಳ ನಂತರ ನಡೆಯಲಿರುವ ಫಿಫಾ ವಿಶ್ವಕಪ್-2020 ರ ಅಂಗವಾಗಿ, ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಸಹಯೋಗದೊಂದಿಗೆ, ಹಮದ್ ಮೆಡಿಕಲ್ ಸಿಟಿಯಲ್ಲಿರುವ “ಅಲ್ ಬೈತ್ ದಿಯಾಫ” ರಕ್ತದಾನ ಕೇಂದ್ರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 229 ಮಂದಿ ರಕ್ತದಾನ ಮಾಡಿದರು.

ಸ್ವಾಗತ ಭಾಷಣ ಮಾಡಿದ ಕತರ್ ಇಂಡಿಯನ್ ಸೋಷಿಯಲ್ ಫೋರಂ ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ರಕ್ತದ ಅವಧಿಯನ್ನು ಪರಿಗಣಿಸಿ, ನಿಯಮಿತ ಸಮಯದಲ್ಲಿ, ಇಂತಹ ವಿವಿಧ ರಕ್ತದಾನ ಶಿಬಿರಗಳನ್ನು ಎರ್ಪಡಿಸಿ, ರಕ್ತದಾನ ಮಾಡುವ ಮುಖಾಂತರ, ಹಮದ್ ಮೆಡಿಕಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಗೆ ಬೆಂಬಲ ನೀಡಲು ನಮ್ಮ ವೇದಿಕೆ ಸದಾ ಸಿದ್ಧವಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕತರ್ ಇಂಡಿಯನ್ ಸೋಷಿಯಲ್ ಫೋರಂ ನ ಅಧ್ಯಕ್ಷರಾದ ಅಯೂಬ್ ಉಳ್ಳಾಲ್ ರಕ್ತದಾನದ ಮಹತ್ವವನ್ನು ಪುನರುಚ್ಚರಿಸಿ, “ರಕ್ತದಾನವು ಒಗ್ಗಟ್ಟಿನ ಕ್ರಿಯೆಯಾಗಿದೆ, ಈ ಪ್ರಯತ್ನಕ್ಕೆ ಕೈ ಜೋಡಿಸಿ ಮತ್ತು ಜೀವ ಉಳಿಸಿ” ಎಂಬ ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಘೋಷಣೆಯನ್ನು ನೆನಪಿಸಿದರು. ಫಿಫಾ ವಿಶ್ವಕಪ್ 2020 ಗಾಗಿ ಕತರ್ 1.5 ಮಿಲಿಯನ್ ಪ್ರವಾಸಿಗರನ್ನು ನಿರೀಕ್ಷಿಸುವ ಮೂಲಕ ಈ ಅಭಿಯಾನವನ್ನು ನಡೆಸುತ್ತಿದೆ. ಅಭಿಯಾನಕ್ಕೆ ಸಿಕ್ಕ ಪ್ರತಿಕ್ರಿಯೆಗಾಗಿ ಅವರು ಭಾರತೀಯ ಸಮುದಾಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಪೀಡಿಯಾಟ್ರಿಕ್ ವಿಭಾಗದ ವೈದ್ಯಕೀಯ ವ್ಯವಸ್ಥಾಪಕರಾದ ಡಾ. ತ‌ಬ್ರೇಝ್ ಪಾಷ ಮಾತನಾಡಿ, ರಕ್ತದಾನದ ಪ್ರಯೋಜನಗಳ ಬಗ್ಗೆ ಮತ್ತು ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಒಬ್ಬ ವ್ಯಕ್ತಿಯ ರಕ್ತವನ್ನು ಪ್ರತ್ಯೇಕವಾಗಿ ಬಳಸಿ ಕನಿಷ್ಟ ಮೂರು ರೋಗಿಗಳು ಪ್ರಯೋಜನ ಪಡೆಯಬಹುದು. ಆದುದ್ದರಿಂದ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ರಕ್ತದಾನ ವೆಂಬ ಉದಾತ್ತ ಕಾರ್ಯದಲ್ಲಿ ಪಾಲ್ಗೊಂಡು ಇತರರನ್ನು ಸಹ ರಕ್ತದಾನ ಮಾಡಲು ಮನವೊಲಿಸಬೇಕೆಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಮಾತನಾಡುತ್ತಾ ರಕ್ತದಾನದ ಅಗತ್ಯತೆ ಮತ್ತು ಅವಶ್ಯಕತೆಗಳ ಬಗ್ಗೆ ಹೇಳುತ್ತಾ, ರಕ್ತದಾನದ ಬಗ್ಗೆ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

ಹಿದಾಯ ಫೌಂಡೇಷನ್ ನ ಅಧ್ಯಕ್ಷರಾದ ಸಾಖಿಬ್ ರಝಾ ಖಾನ್ ತಮ್ಮ ಭಾಷಣದಲ್ಲಿ ಕತರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯವೈಖರಿಗಳ ಬಗ್ಗೆ ಪ್ರಶಂಸಿಸುತ್ತಾ, QISF ಸಮಾಜ ಸೇವೆ ಹಾಗೂ ಉದಾತ್ತ ಕಾರ್ಯಗಳಿಗಾಗಿ ಯಾವಾಗಲೂ ಮುಂಚೂಣಿಯಲ್ಲಿರುವ ವೇದಿಕೆಯಾಗಿದೆ. ಇದರ ಕಾರ್ಯವೈಖರಿ ಹೀಗೆಯೇ ಮುನ್ನಡೆಯಲಿ ಎಂದು ಹಾರೈಸಿದರು.

ICBF ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಸಮೀರ್ ವಾಣಿ, ICBF ವ್ಯವಸ್ಥಾಪಕ ಸಮಿತಿ ಸದಸ್ಯರಾದ ದಿನೇಶ್ ಗೌಡ, KMCA ಅಧ್ಯಕ್ಷರಾದ ಫಯಾಝ್ ಅಹಮದ್, SKMWA ಅಧ್ಯಕ್ಷರಾದ ಅಬ್ದುಲ್ ರಝಾಕ್, Highland Islamic Forum ನ ಅಧ್ಯಕ್ಷರಾದ ಶಫಕ್ಕತ್ ಹಾಗೂ ಭಾರತದ ವಿವಿಧ ರಾಜ್ಯಗಳ ಸಮುದಾಯದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ ನ ಅಧ್ಯಕ್ಷರಾದ ಡಾ. ಮೋಹನ್ ಥಾಮಸ್ ಮತ್ತು ಪಂಜಾಬ್ ಸೇವಾ ದಳದ ಮುಖಂಡರಾದ ಅಂಗರೇಜ್ ಸಿಂಗ್ ಶಿಬಿರಕ್ಕೆ ಭೇಟಿ ನೀಡಿ ರಕ್ತದಾನಿಗಳನ್ನು ಪ್ರೋತ್ಸಾಹಿಸಿದರು.

ಕತರ್ ಇಂಡಿಯನ್ ಸೋಷಿಯಲ್ ಫೋರಂ ನ ಅಧ್ಯಕ್ಷರಾದ ಅಯೂಬ್ ಉಳ್ಳಾಲ್, ಬಾರತೀಯ ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ನ ಅಧ್ಯಕ್ಷರಾದ ಶಫಕ್ಕತ್ ರಕ್ತದಾನ ಮಾಡಿದರು. QISF ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಹೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News