ಜಗತ್ತು ಸೂಕ್ಷ್ಮ ಪ್ರಪಾತದ ಅಂಚಿನಲ್ಲಿದೆ: ಪೋಪ್ ಎಚ್ಚರಿಕೆ

Update: 2022-11-04 18:14 GMT

ಮನಾಮ, ನ.4: ಕೆಲವು ಪ್ರಬಲರು ನಡೆಸುತ್ತಿರುವ ಸ್ವಹಿತಾಸಕ್ತಿಯ ಯುದ್ಧದ ಬಿರುಗಾಳಿಯು ಜಗತ್ತನ್ನು ಸೂಕ್ಷ್ಮವಾದ ಪ್ರಪಾತದ ಅಂಚಿಗೆ ತಂದಿರಿಸಿದೆ. ಮಾನವೀಯತೆಯ ಉದ್ಯಾನವನದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳೆಸುವ ಬದಲು ನಾವು ಬೆಂಕಿ, ಬಾಂಬ್ ಮತ್ತು ಕ್ಷಿಪಣಿಯೊಂದಿಗೆ ಆಟವಾಡುತ್ತಿದ್ದೇವೆ ಎಂದು ಪೋಪ್ ಫ್ರಾನ್ಸಿಸ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ನಂಬಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಪ್ರವಾಸದ ಅಂಗವಾಗಿ ಬಹ್ರೇನ್ ತಲುಪಿರುವ ಪೋಪ್, ಬಹ್ರೇನ್‌ನ ಅವಾಲಿ ನಗರದಲ್ಲಿ ‘ಬಹ್ರೇನ್ ಫಾರಂ ಫಾರ್ ಡಯಲಾಗ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

 ನಾವು ಬೀಳಲು ಬಯಸದ ಸೂಕ್ಷ್ಮವಾದ ಪ್ರಪಾತದ ಅಂಚಿನಲ್ಲಿ ಬಂದು ನಿಂತಿದ್ದೇವೆ. ವಿರೋಧಿ ಬಣಗಳ ನಡುವಿನ ವಾಕ್ಚಾತುರ್ಯ, ಪ್ರಭಾವ ಬಳಸಿ ಮೇಲುಗೈ ಸಾಧಿಸುವ ಪೈಪೋಟಿಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ರಶ್ಯ- ಪಾಶ್ಚಿಮಾತ್ಯ ದೇಶಗಳ ನಡುವಿನ ಬಿಕ್ಕಟ್ಟನ್ನು ಪರೋಕ್ಷವಾಗಿ ಉಲ್ಲೇಖಿಸಿ ಪೋಪ್ ಹೇಳಿದರು.

ಬಹ್ರೇನ್‌ನ ದೊರೆ ಶೇಖ್ ಅಹ್ಮದ್ ಅಲ್-ತಯೆಬ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಇದಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ವೆಟಿಕನ್‌ನ ಕಾರ್ಯದರ್ಶಿ ಕಾರ್ಡಿನಲ್ ಪೆಟ್ರೊ ಪರೊಲಿನ್ ‘ಸೆಪ್ಟಂಬರ್‌ನಲ್ಲಿ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್‌ರನ್ನು ಭೇಟಿಯಾಗಿದ್ದು, ಆ ಸಂದರ್ಭ ಶಾಂತಿ ಮಾತುಕತೆಯಲ್ಲಿ ಸ್ವಲ್ಪ ಪ್ರಗತಿ ಸಾಧ್ಯವಾಗಿದೆ’ ಎಂದು ಹೇಳಿದರು.

Similar News