BMKC ವತಿಯಿಂದ ಖ್ಯಾತ ಅನಿವಾಸಿ ಭಾರತೀಯ ಸೈಯದ್ ಖಲೀಲ್ ಉರ್ ರಹಮಾನ್ ಗೆ ದುಬೈನಲ್ಲಿ ಸನ್ಮಾನ

"ಇಫ್ತಿಖಾರ್ ಎ ಕೌಮ್" ಬಿರುದು ಪ್ರದಾನ

Update: 2022-12-11 16:01 GMT

ದುಬೈ: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಸೈಯದ್ ಖಲೀಲ್ ಉರ್ ರಹಮಾನ್ ಅವರನ್ನು 'ಬಿಎಂಕೆಸಿ' ವತಿಯಿಂದ ದುಬೈನಲ್ಲಿ ಸನ್ಮಾನಿಸಿದ್ದು, ಅವರಿಗೆ ‘ಇಫ್ತಿಖಾರ್ ಎ ಕೌಮ್’ ಎಂಬ ಬಿರುದು ಪ್ರದಾನ ಮಾಡಿದೆ.

ಶನಿವಾರ ದುಬೈನ ಗ್ರ್ಯಾಂಡ್ ಮರ್ಕ್ಯೂರ್ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮುದಾಯದ ನಾಯಕ ಸೈಯದ್ ಖಲೀಲ್ ಉರ್ ರಹಮಾನ್ ಅವರನ್ನು 'ಭಟ್ಕಳ ಮುಸ್ಲಿಮ್ ಖಲೀಜ್ ಕೌನ್ಸಿಲ್' (ಬಿಎಂಕೆಸಿ) ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ‘ಇಫ್ತಿಖಾರ್ ಎ ಕೌಮ್’ (ಸಮುದಾಯದ ಹೆಮ್ಮೆ) ಎಂಬ ಬಿರುದನ್ನು ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಅವರು 'ಕೈದ ಎ ಕೌಮ್’ (ಸಮುದಾಯದ ನಾಯಕ) ಎಂಬ ಬಿರುದು ಹೊಂದಿದ್ದರು.

ಮಧ್ಯಪ್ರಾಚ್ಯದಲ್ಲಿನ ಮುಸ್ಲಿಮ್ ಸಮುದಾಯದ ಹಲವಾರು ಸಂಘಟನೆಗಳ ಮಂಡಳಿಯಾಗಿರುವ ಬಿಎಂಕೆಸಿ, ಈ ಸಮಾರಂಭಕ್ಕೆ ಖಾಝೀ ಜಮಾತುಲ್ ಮುಸ್ಲಿಮೀನ್ ಭಟ್ಕಳ್ ಮೌಲಾನಾ ಅಬ್ದುರ್ ರಬ್, ಖಾಝೀ ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಭಟ್ಕಳ್ ಮೌಲಾನಾ ಖಾಜಾ ಅಕ್ರಮಿ ಮದನಿಯಂತಹ ಭಟ್ಕಳ ಮೂಲದ ಹಲವಾರು ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿತ್ತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಖಲೀಲ್ ಉರ್ ರಹಮಾನ್, ತಾನು ಈಗಿನ ಸಾಧನೆಗಾಗಿ ಕೈಗೊಂಡ ಪಯಣ ಹಾಗೂ ನಡೆಸಿದ ಹೋರಾಟವನ್ನು ವಿವರಿಸಿದರು.

“ಹೋರಾಟವಿಲ್ಲದೇ ಯಾವುದೇ ಯಶಸ್ಸು ಸಾಧ‍್ಯವಿಲ್ಲ. ಯಾವುದೇ ವ್ಯಕ್ತಿ ಯಶಸ್ವಿಯಾಗಬೇಕಾದರೆ ಗಡಿಯಾರದ ನೋಡುವುದನ್ನು ಬಿಟ್ಟು ಅವಿಶ್ರಾಂತವಾಗಿ ದುಡಿಯಬೇಕು. ಯಶಸ್ಸು ಎನ್ನುವುದು ನೀವು ಗಳಿಸಿದ ಐಷಾರಾಮಿ ಬದುಕು ಅಥವಾ ನಿಮ್ಮ ಕುಟುಂಬ‍ಕ್ಕೆ ಬಿಟ್ಟು ಹೋಗುವ ಭಾರಿ ಪ್ರಮಾಣದ ಸಂಪತ್ತಲ್ಲ. ಬದಲಿಗೆ, ನೀವು ಸಮಾಜ ಹಾಗೂ ನಿಮ್ಮ ಸಮುದಾಯಕ್ಕೆ ಏನು ಮರಳಿ ನೀಡಿದಿರಿ ಎಂಬುದರ ಅದನ್ನು ಮೇಲೆ ಅಳೆಯಲಾಗುತ್ತದೆ” ಎಂದು ತಮ್ಮ ಬದುಕನ್ನು ವಿವರಿಸುತ್ತಾ ತಿಳಿಸಿದರು.

“ಯಾವುದೇ ಜಾಗತಿಕ ಗಳಿಕೆ ಅಥವಾ ಸಂತಸವನ್ನು ನಿರೀಕ್ಷಿಸುವಾಗ ನಾನು ನನ್ನ ಜೀವನದುದ್ದಕ್ಕೂ ಏನೂ ಮಾಡಲೇ ಇಲ್ಲ. ನಾನು ನನ್ನ ಜೀವನವನ್ನು ಸುಧಾರಿಸಿಕೊಳ್ಳಲೆಂದೇ ಅವೆಲ್ಲವನ್ನೂ ಮಾಡಿದೆ. ನನ್ನ ಮಟ್ಟಿಗೆ ಅದೇ ಯಶಸ್ಸಿನ ನಿಜ ಪರಿಮಳವಾಗಿದೆ” ಎಂದರು.

“ನನ್ನನ್ನು ಜನರು ಯಶಸ್ವಿ ವೃತ್ತಿಪರ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ನನ್ನನ್ನು ನಾನು ಯಶಸ್ವಿ ವೃತ್ತಿಪರ ವ್ಯಕ್ತಿ ಎಂದು ಎಂದೂ ಪರಿಗಣಿಸಿಲ್ಲ. ನನ್ನ ಮಟ್ಟಿಗೆ ನಾನೊಬ್ಬ ವಿಫಲ ವ್ಯಕ್ತಿ. ನಾನು ನನ್ನ ಕನಸಿನ ಶೇ. 10ರಷ್ಟು ಭಾಗವನ್ನೂ ಸಾಧಿಸಿಲ್ಲ. ನನ್ನ ಕನಸು ಅಷ್ಟು ಹಿರಿದಾಗಿದೆ. ಉತ್ತಮ ಧ‍್ಯೇಯದೊಂದಿಗೆ ಆದಷ್ಟೂ ಶೀಘ್ರ ಆ ಕನಸುಗಳನ್ನು ಈಡೇರಿಸಿಕೊಳ್ಳುವ ಪಯಣ ಕೈಗೊಳ್ಳುವ ಯೋಜನೆಯಲ್ಲಿದ್ದೇನೆ. ಅದಕ್ಕನುಗುಣವಾಗಿ ನಮ್ಮ ಸಮುದಾಯದ ಏಳಿಗೆಗಾಗಿ ನನ್ನ ಬಳಿ ಯೋಜನೆಯೊಂದಿದೆ” ಎಂದೂ ತಿಳಿಸಿದರು.

ಯುವ ಪೀಳಿಗೆಯ ನಾಯಕತ್ವವು ಸಮುದಾಯದ ಹಿರಿಯರು ಮತ್ತು ಅನುಭವ ಹೊಂದಿರುವ ಸದಸ್ಯರ ಮೇಲ್ವಿಚಾರಣೆಯಲ್ಲಿ ದುಡಿಯಬೇಕೇ ಹೊರತು ಅವರಿಂದ ದೂರ ಸರಿಯಬಾರದು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಸೈಯದ್ ಖಲೀಲ್ ಉರ್ ರಹಮಾನ್ ಅವರ ಜೀವನಗಾಥೆ ಕುರಿತು ಬಿಎಂಕೆಸಿ ಒಂದು ಸಾಕ್ಷ್ಯಚಿತ್ರವನ್ನೂ ಬಿಡುಗಡೆ ಮಾಡಿತು.

ಮೌಲಾನಾ ಖಾಜಾ ಅಕ್ರಮಿ, ಮೌಲಾನಾ ಅಬ್ದುರ್ ರಬ್, ಖ್ಯಾತ ಉದ್ಯಮಿ ಯೂನುಸ್ ಖಾಝಿಯಾ, ಮೀರಾನ್ ಮಣೆಗಾರ್ ಮತ್ತಿತರರು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು ಮತ್ತು ಸೈಯದ್ ಖಲೀಲ್ ಉರ್ ರಹಮಾನ್ ಅವರ ಸಮುದಾಯ ಪರವಾದ ಸೇವಾಪರತೆಯನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯ‍ನ್ನು ಅನಿವಾಸಿ ಭಾರತೀಯ ಉದ್ಯಮಿ ಅತೀಕ್ ಉರ್ ರಹಮಾನ್ ಮುನೀರಿ ವಹಿಸಿದ್ದರು. ದುಬೈನಲ್ಲಿನ ಭಟ್ಕಳ ಉದ್ಯಮಿ ರಹಮತುಲ್ಲಾ ರಾಹಿ ಕಾರ್ಯಕ್ರಮ ನಿರೂಪಿಸಿದರು.

Similar News