ಮಕ್ಕಾದ ಮಸ್ಜಿದುಲ್‌ ಹರಾಂನಲ್ಲಿ ತರಾವೀಹ್‌ ನೇತೃತ್ವದಿಂದ ಹಿಂದೆ ಸರಿದ ಶೈಖ್ ಡಾ. ಸೌದ್‌ ಅಶ್ಶುರೈಮ್

ಇಮಾಮ್‌ಗಳ ಪಟ್ಟಿ ಬಿಡುಗಡೆ

Update: 2023-03-16 16:32 GMT

ಜಿದ್ದಾ (ಸೌದಿ ಅರೇಬಿಯಾ): ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮಸ್ಜಿದ್ ಅಲ್ ಹರಾಮ್‌ನ ಅತ್ಯಂತ ಬೇಡಿಕೆಯ ಇಮಾಮ್‌ಗಳಲ್ಲಿ ಒಬ್ಬರಾದ ಡಾ. ಸೌದ್ ಅಶ್ ಶುರೈಮ್ ಅವರು ಈ ಬಾರಿಯ ರಂಝಾನ್‌ನಲ್ಲಿ ಮಸ್ಜಿದ್ ಅಲ್ ಹರಾಮ್‌ನಲ್ಲಿ ತರಾವೀಹ್ ನಮಾಝ್ ಗೆ ಇಮಾಮ್ ಆಗಿ ನಿಲ್ಲುವುದಿಲ್ಲ ಎಂದು ವರದಿಯಾಗಿದೆ. 

 ವರದಿಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ಮಸ್ಜಿದ್ ಅಲ್ ಹರಾಮ್‌ನ ಇಮಾಮ್ ಸ್ಥಾನದಿಂದ  ನಿವೃತ್ತರಾಗಿರುವ ಸೌದ್ ಅಶ್ ಶುರೈಮ್ ಅವರು ಈ ಬಾರಿಯ ರಂಝಾನ್‌ನಲ್ಲಿ ತರಾವೀಹ್ ನಮಾಝ್ ಗೆ ಇಮಾಮ್ ನಿಲ್ಲುವುದರಿಂದ ಹಿಂದೆ ಸರಿದಿದ್ದಾರೆ.

1991 ರಿಂದ ಮಕ್ಕಾದ ತರಾವೀಹ್ ನಮಾಝ್ ಗೆ ಇಮಾಮ್ ಆಗಿ ಮುನ್ನಡೆಸುತ್ತಿದ್ದರು. ಡಿಸೆಂಬರ್ 2022 ರಲ್ಲಿ ಅವರು ಮಸೀದಿ ಅಲ್ ಹರಾಮ್‌ನ ಇಮಾಮ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸುಶ್ರಾವ್ವಾದ ಕುರ್‌ಆನ್‌ ಪಠಣವನ್ನು ಕೇಳುತ್ತಾ ನಮಾಝ್‌ ನಿರ್ವಹಿಸುವುದು ಅನುಭೂತಿ ನೀಡುತ್ತಿತ್ತು. ಮಕ್ಕಾದ ಮಸ್ಜಿದುಲ್‌ ಹರಾಮ್‌ ನ ಕುರಿತ ಎಲ್ಲಾ ವಿವರಗಳನ್ನು ಪ್ರಕಟಿಸುವ ಟ್ವಿಟರ್‌ ಖಾತೆಯು ಶುರೈಂ ರ ಈ ನಿರ್ಧಾರವನ್ನು ದೃಢಪಡಿಸಿದೆ.

ಈ ಬಾರಿಯ ರಂಝಾನ್‌ ದಿನಗಳಲ್ಲಿ ತರಾವೀಹ್‌ ಮತ್ತು ತಹಜ್ಜುದ್‌ ನಮಾಝ್‌ ಗಳನ್ನು ಶೈಖ್‌ ಅಬ್ದುರ್ರಹ್ಮಾನ್‌ ಸುದೈಸ್‌, ಶೈಖ್‌ ಬಂದರ್‌ ಬಲೀಲಾ, ಶೈಖ್‌ ಮಾಹಿರ್‌ ಅಲ್‌ ಮುಐಖಲಿ, ಶೈಖ್‌ ಅಬ್ದುಲ್ಲಾ ಜುಹಾನಿ ಹಾಗೂ ಶೈಖ್‌ ಯಾಸಿರ್‌ ದೊಸಾರಿ ನಿರ್ವಹಿಸಲಿದ್ದಾರೆ. 

Similar News