ದುಬೈ: ಅಗ್ನಿ ದುರಂತದ ವೇಳೆ ನೆರೆಹೊರೆಯವರಿಗೆ ಇಫ್ತಾರ್‌ ಕೂಟ ಸಿದ್ಧಪಡಿಸುತ್ತಿದ್ದ ಭಾರತೀಯ ಮೂಲದ ದಂಪತಿ

ರಿಜೀಶ್ ಕಲಂಙಾಡನ್‌, ಪತ್ನಿ ಸಹಿತ 16 ಮಂದಿ ಮೃತಪಟ್ಟ ಪ್ರಕರಣ

Update: 2023-04-17 13:15 GMT

ದುಬೈ: ಇಲ್ಲಿನ ಅಲ್‌ ರಸ್‌ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೃತಪಟ್ಟ 16 ಮಂದಿಯಲ್ಲಿ ಸೇರಿದ್ದ ಭಾರತೀಯ ಮೂಲದ ದಂಪತಿ ರಿಜೀಶ್ ಕಲಂಙಾಡನ್‌ (38) ಮತ್ತವರ ಪತ್ನಿ ಜೆಶಿ ಕಂಡಮಂಗಲತ್ (32) ಅವರು ಅವಘಡ ಸಂಭವಿಸುವ ಸಂದರ್ಭ ತಮ್ಮ ನೆರೆಹೊರೆಯವರಿಗಾಗಿ ಇಫ್ತಾರ್‌ ಊಟ ತಯಾರಿಸುತ್ತಿದ್ದರು ಎಂದು ಅವರ ನೆರೆಹೊರೆಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ರಿಜೇಶ್‌ ಅವರು ಟ್ರಾವೆಲ್ಸ್‌ ಮತ್ತು ಪ್ರವಾಸೋದ್ಯಮ ಸಂಸ್ಥೆಯೊಂದರಲ್ಲಿ ಬಿಸಿನೆಸ್‌ ಡೆವಲೆಪ್ಮೆಂಟ್‌ ಮ್ಯಾನೇಜರ್‌ ಆಗಿದ್ದರೆ ಅವರ ಪತ್ನಿ ಜೆಶಿ ಶಾಲಾ ಶಿಕ್ಷಕಿಯಾಗಿದ್ದರು.

ಕೇರಳ ಮೂಲದ ಅವರು ಶನಿವಾರ ಯುಗಾದಿ (ವಿಷು) ಸಂಭ್ರಮದಲ್ಲಿದ್ದರು ಹಾಗೂ ಕೇರಳದ ಸಾಂಪ್ರದಾಯಿಕ 'ವಿಶು ಸಧ್ಯ' ಸಿದ್ಧಪಡಿಸಿ ಕೇರಳದ ತಮ್ಮ ನೆರೆಹೊರೆಯ ಮುಸ್ಲಿಂ ಯುವಕರ ಗುಂಪೊಂದನ್ನು ಇಫ್ತಾರ್‌ ಕೂಟಕ್ಕಾಗಿ ಆಹ್ವಾನಿಸಿದ್ದರು.

ಕಟ್ಟಡದ ಫ್ಲ್ಯಾಟ್ ಸಂಖ್ಯೆ 406 ರಲ್ಲಿ ದಂಪತಿ ವಾಸವಾಗಿದ್ದರೆ ಫ್ಲ್ಯಾಟ್‌ ಸಂಖ್ಯೆ 409 ರಲ್ಲಿದ್ದ ರಿಯಾಸ್‌ ಕೈಕಂಬಂ ಮತ್ತವರ ಏಳು ಮಂದಿ ರೂಮ್‌ಮೇಟ್‌ಗಳನ್ನು ದಂಪತಿ ಇಫ್ತಾರ್‌ ಗೆ ಆಹ್ವಾನಿಸಿದ್ದರು. ಬೆಂಕಿ ಫ್ಲ್ಯಾಟ್‌ ಸಂಖ್ಯೆ 405 ರಲ್ಲಿ ಆರಂಭಗೊಂಡಿತ್ತು.

ಅದೇ ಕಟ್ಟಡದಲ್ಲಿ ರಿಯಾಸ್‌ ಮೊಬೈಲ್‌ ಅಂಗಡಿಯನ್ನು ನಡೆಸುತ್ತಾರೆ. ದಂಪತಿ ಈ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆ ಆಗಮಿಸಿದ್ದರೆಂದು ಅವರು ಹೇಳುತ್ತಾರೆ. ಸ್ನೇಹಮಯಿಗಳಾಗಿದ್ದ ದಂಪತಿ ಎಲ್ಲಾ ಹಬ್ಬಗಳ ಸಂದರ್ಭಗಳಲ್ಲೂ ಊಟಕ್ಕಾಗಿ ಆಹ್ವಾನಿಸುತ್ತಿದ್ದರು. ಈ ಹಿಂದೆ ಕೂಡ ಓಣಂ ಮತ್ತು ವಿಷು ಹಬ್ಬಕ್ಕೆ ಆಹ್ವಾನಿಸಿದ್ದರು. ಈ ಬಾರಿ ರಂಝಾನ್ ಆಗಿದ್ದರಿಂದ ಇಫ್ತಾರ್‌ಗಾಗಿ ಆಹ್ವಾನಿಸಿದ್ದರು‌ ಎಂದು ಅವರು ತಿಳಿಸಿದ್ದಾರೆ.

ರಿಯಾಸ್‌ ಅವರ ಇನ್ನೊಬ್ಬ ರೂಮ್‌ಮೇಟ್‌ ಸುಹೈಲ್‌ ಕೊಪ್ಪ ಕೂಡ ಈ ದುರಂತ ತಮಗೆ ಆಘಾತ ನೀಡಿದೆ ಎಂದು ಹೇಳುತ್ತಾರೆ. ದಂಪತಿ ತಮ್ಮ ಹೊಸ ಮನೆಯ ಗೃಹಪ್ರವೇಶಕ್ಕೆ ಮುಂದಿನ ತಿಂಗಳು ಊರಿಗೆ ಆಗಮಿಸಲಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

Similar News