×
Ad

2ನೇ ಪಂದ್ಯದ ಟಿಕೆಟ್ ಖರೀದಿಗಾಗಿ ನೂಕುನುಗ್ಗಲು | ಕಟಕ್ ಸ್ಟೇಡಿಯಮ್ ನಲ್ಲಿ ಕಾಲ್ತುಳಿತದಂತ ಪರಿಸ್ಥಿತಿ; 5 ಮಂದಿಗೆ ಗಾಯ

Update: 2025-02-05 21:19 IST

PC : PTI 

ಕಟಕ್: ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದ ಟಿಕೆಟ್ ಖರೀದಿಸುವುದಕ್ಕಾಗಿ ಜನರು ಬುಧವಾರ ಕಟಕ್ ನ ಬಾರಾಬತಿ ಸ್ಟೇಡಿಯಮ್ ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಏಕಾಏಕಿ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಂಥ ಪರಿಸ್ಥಿತಿ ಏರ್ಪಟ್ಟಿತು.

ಪಂದ್ಯವು ಫೆಬ್ರವರಿ 9 ರವಿವಾರ ಕಟಕ್ ನ ಬಾರಾಬತಿ ಸ್ಟೇಡಿಯಮ್ ನಲ್ಲಿ ನಡೆಯಲಿದೆ.

ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಟಿಕೆಟ್ಗಾಗಿ ಮುಗಿಬಿದ್ದಾಗ, ಜನರನ್ನು ಚದುರಿಸುವುದಕ್ಕಾಗಿ ಪೊಲೀಸರು ಜಲಫಿರಂಗಿಯನ್ನು ಬಳಸಬೇಕಾಯಿತು.

ಟಿಕೆಟ್ ಖರೀದಿಸುವುದಕ್ಕಾಗಿ ಭಾರೀ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಮಂಗಳವಾರ ರಾತ್ರಿಯಿಂದಲೇ ಮೈದಾನದಲ್ಲಿ ಸೇರಿದ್ದರು. ಬುಧವಾರ ಬೆಳಗ್ಗೆ 9 ಗಂಟೆಗೆ ಆಫ್ಲೈನ್ ಟಿಕೆಟ್ಗಳ ಮಾರಾಟ ಪ್ರಾರಂಭವಾದಾಗ ಭಾರೀ ನೂಕುನುಗ್ಗಲು ಆರಂಭವಾಯಿತು.

ಈ ಪಂದ್ಯದ ಆನ್ಲೈನ್ ಟಿಕೆಟ್ ಮಾರಾಟವು ಫೆಬ್ರವರಿ 2ರಂದು ಆರಂಭವಾಗಿತ್ತು. ಆದರೆ, ಆನ್ಲೈನ್ನಲ್ಲಿ ಗಂಟೆಗಳ ಕಾಲ ಕಾದ ನಂತರವೂ ಟಿಕೆಟ್ ಸಿಗದವರಿಗೆ ಬುಧವಾರ ಮತ್ತು ಗುರುವಾರ ಮೂರ್ತರೂಪದ (ಆಫ್ಲೈನ್) ಟಿಕೆಟ್ ಪಡೆಯುವ ಅವಕಾಶವೊಂದನ್ನು ನೀಡಲಾಗಿತ್ತು.

ಈ ಸುದ್ದಿ ಹರಡುತ್ತಿದ್ದಂತೆಯೇ, ಕ್ರಿಕೆಟ್ ಹುಚ್ಚಿನ ಅಭಿಮಾನಿಗಳು ಮಂಗಳವಾರ ರಾತ್ರಿಯಿಂದಲೇ ಕಟಕ್ ನ ಬಾರಾಬತಿ ಸ್ಟೇಡಿಯಮ್ ನಲ್ಲಿ ಜಮಾಯಿಸಲು ಆರಂಭಿಸಿದರು. ಅವರು ರಾತ್ರಿ ಅಲ್ಲೇ ಮಲಗಿದರು. ಐದು ವರ್ಷಗಳ ಬಳಿಕ ಈ ಮೈದಾನದಲ್ಲಿ ಆಡಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಇತರ ಕ್ರಿಕೆಟಿಗರನ್ನು ನೋಡಲು ಅವರು ಕಾತರರಾಗಿದ್ದರು. ಕೊಹ್ಲಿ ಮತ್ತು ರೋಹಿತ್ ಕೊನೆಯ ಬಾರಿ ಈ ಮೈದಾನದಲ್ಲಿ ಆಡಿದ್ದು 2019ರಲ್ಲಿ. ಅದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯವಾಗಿತ್ತು. ಆ ಪಂದ್ಯವನ್ನು ಭಾರತ ಗೆದ್ದಿತ್ತು ಮತ್ತು ಕೊಹ್ಲಿ ಪಂದ್ಯಶ್ರೇಷ್ಠರಾಗಿದ್ದರು.

ಟಿಕೆಟ್ ಆಕಾಂಕ್ಷಿಗಳನ್ನು ನಿಭಾಯಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ ಎಂದು ‘ಒಡಿಶಾ ಟಿವಿ’ ಹೇಳಿದೆ. ಟಿಕೆಟ್ ಖರೀದಿಸಿದ ಬಳಿಕ ಹೊರಹೋಗುವ ವ್ಯವಸ್ಥೆ ಸರಿಯಾಗಿರಲಿಲ್ಲ ಎನ್ನಲಾಗಿದೆ. ಹಾಗಾಗಿ, ಅಲ್ಲಿ ಜನಸಂದಣಿ ಏರ್ಪಟ್ಟಿತು. ಬಳಿಕ ಪೊಲೀಸರು ತುರ್ತು ನಿರ್ಗಮನಕ್ಕಾಗಿ ಬಿದಿರಿನ ತಡೆಬೇಲಿಗಳನ್ನು ತೆಗೆದುಹಾಕಿದರು.

ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News