ಜಾತಿ ‘ಚಮಚಾ’ಗಳಿಗೆ ಅಪಥ್ಯವಾಗಿರುವ ಸಮೀಕ್ಷೆ!
PC: x.com/the_hindu
ಚಮಚಾಗಳಲ್ಲೂ ವೆಜಿಟೇರಿಯನ್ ಚಮಚಾ, ನಾನ್ ವೆಜಿಟೇರಿಯನ್ ಚಮಚಾಗಳೆಂದು ವಿಭಜಿಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರು ಇದೀಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಬಹಿಷ್ಕರಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಮನೆಗೆ ಸಮೀಕ್ಷೆಗೆಂದು ಬಂದ ಗಣತಿದಾರರಿಗೆ ಮಾಹಿತಿ ನೀಡಲು ನಿರಾಕರಿಸಿರುವ ಸುಧಾಮೂರ್ತಿ ದಂಪತಿ, ‘‘ನಾವು ಹಿಂದುಳಿದ ಯಾವ ಜಾತಿಗೂ ಸೇರಿದವರಲ್ಲ. ಈ ಸಮೀಕ್ಷೆಯಿಂದ ಸರಕಾರಕ್ಕೆ ಯಾವ ಉಪಯೋಗವೂ ಇಲ್ಲ. ಆದುದರಿಂದ ನಾವು ಇದರಲ್ಲಿ ಭಾಗವಹಿಸುವುದಿಲ್ಲ’’ ಎಂದು ಅರ್ಜಿಯ ಹಿಂದೆ ತಮ್ಮ ಟಿಪ್ಪಣಿಯನ್ನು ಬರೆದು ಸಹಿ ಹಾಕಿದ್ದಾರೆ. ಸಮೀಕ್ಷೆಗೆ ಯಾರನ್ನೂ ಬಲವಂತ ಪಡಿಸುವಂತಿಲ್ಲ ಎಂದು ಕೋರ್ಟ್ ಈಗಾಗಲೇ ಸೂಚನೆ ನೀಡಿರುವುದರಿಂದ, ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಎಲ್ಲ ಅಧಿಕಾರ ಸುಧಾಮೂರ್ತಿ ದಂಪತಿಗಿದೆ. ಆದರೆ ಅದಕ್ಕೆ ಅವರು ನೀಡಿರುವ ಕಾರಣ ಮಾತ್ರ ಪ್ರಶ್ನಾರ್ಹವಾಗಿದೆ. ಇಬ್ಬರೂ ಈ ದೇಶದ ಖ್ಯಾತ ಉದ್ಯಮಿಗಳು. ಸುಧಾಮೂರ್ತಿ ಉದ್ಯಮ ಕ್ಷೇತ್ರ ಮಾತ್ರವಲ್ಲದೆ, ಇತರ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು. ಎಲ್ಲಕ್ಕಿಂತ ಮುಖ್ಯವಾಗಿ ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡವರು. ಮೇಲ್ಮನೆಯೆಂದು ಕರೆಯಲ್ಪಡುವ ರಾಜ್ಯಸಭೆಗೆ ಆಯ್ಕೆಯಾಗುವ ಹಿರಿಯರು, ಜ್ಞಾನಿಗಳು, ತಿಳುವಳಿಕೆಯುಳ್ಳವರೆಂದು ನಂಬಲಾಗುತ್ತದೆ. ಲೋಕಸಭೆಗೆ ಮಾರ್ಗದರ್ಶನ ನೀಡಿ, ಅದು ತಪ್ಪು ದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳಬೇಕಾದವರು. ಇದೀಗ ನೋಡಿದರೆ ‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಕುರಿತಂತೆ ಪ್ರಾಥಮಿಕ ಮಾಹಿತಿಯೂ ತನಗಿಲ್ಲ’ ಎನ್ನುವುದನ್ನು ಸುಧಾಮೂರ್ತಿ ಘೋಷಿಸಿಕೊಂಡಿದ್ದಾರೆ. ಈ ನಾಡಿನ ಆಮೂಲಾಗ್ರ ಅಭಿವೃದ್ಧಿಯ ಸದುದ್ದೇಶದಿಂದ ನಾಡಿನ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ಜಾತಿ ಗಣತಿಯಲ್ಲ, ಎಲ್ಲ ಜಾತಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿವೆ, ಅವುಗಳ ಜನಸಂಖ್ಯೆಯೆಷ್ಟು ಇತ್ಯಾದಿ ವಿವರಗಳನ್ನು ಸಂಗ್ರಹಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ. ಈ ಸಮೀಕ್ಷೆಯ ಆಧಾರದಲ್ಲಿ ಭವಿಷ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸರಕಾರಕ್ಕೆ ಸಾಧ್ಯವಾಗುತ್ತದೆ. ಇಷ್ಟು ಮಾಹಿತಿಯೂ ಸುಧಾಮೂರ್ತಿಗೆ ಇಲ್ಲ ಎಂದ ಮೇಲೆ ಅವರು ರಾಜ್ಯಸಭೆಯಲ್ಲಿ ಕುಳಿತು ಈ ನಾಡಿನ ಅಭಿವೃದ್ಧಿಯ ಕುರಿತಂತೆ ಯಾವ ಸಲಹೆ ಸೂಚನೆಗಳನ್ನು ನೀಡಬಲ್ಲರು ಎಂದು ಶ್ರೀಸಾಮಾನ್ಯರು ಪ್ರಶ್ನಿಸುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಧಾಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು ‘‘ಅವರಿಗೆ ಸಮೀಕ್ಷೆಯ ಬಗ್ಗೆ ಸರಿಯಾದ ಮಾಹಿತಿಯಲ್ಲ’’ ಎಂದಿದ್ದಾರೆ. ಮಾಹಿತಿ ತಂತ್ರಜ್ಞಾನಕ್ಕಾಗಿಯೇ ಖ್ಯಾತಿವೆತ್ತ ಈ ದಂಪತಿಗೆ ಮಾಹಿತಿಯಿಲ್ಲ ಎನ್ನುವುದೇ ಒಂದು ವ್ಯಂಗ್ಯ. ನಿದ್ದೆ ಮಾಡುವವರನ್ನು ಎಚ್ಚರಿಸಬಹುದು. ಆದರೆ ಸುಧಾಮೂರ್ತಿ ನಿದ್ದೆಯಲ್ಲಿರುವವರಂತೆ ನಟಿಸುತ್ತಿದ್ದಾರೆ. ಇವರನ್ನು ಎಚ್ಚರಿಸುವುದು ನೂರು ಸಿದ್ದರಾಮಯ್ಯ ಬಂದರೂ ಸುಲಭವಿಲ್ಲ. ‘ನಾವು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ’ ಎನ್ನುವ ಸಾಲಿನಲ್ಲೇ ಪರೋಕ್ಷವಾಗಿ ‘ಜಾತಿಯ ಹೆಸರಿನಲ್ಲಿ ಸರಕಾರದ ಸೌಲಭ್ಯ’ಗಳನ್ನು ಪಡೆಯುವ ಶೋಷಿತ ಸಮುದಾಯದ ಬಗ್ಗೆ ಇವರಲ್ಲಿ ಒಂದು ರೀತಿಯ ತಿರಸ್ಕಾರವಿದೆ. ವಿಮಾನದಲ್ಲಿ ಪ್ರಯಾಣಿಸುವಾಗ ಇತರ ಜಾತಿಯ ಜನರು ಬಳಸಿದ ‘ಚಮಚಾ’ಗಳನ್ನೂ ಬಳಸಲು ಸಿದ್ಧರಿಲ್ಲದ ಜಾತಿ ಚಮಚಾಗಳು ಸಮೀಕ್ಷೆಯನ್ನು ವಿರೋಧಿಸುವುದರ ಹಿಂದೆ ಬೇರೆಯೇ ಹಿತಾಸಕ್ತಿಯಿದೆ. ಈ ಮೂಲಕ ಅವರು ಜಾತಿ ಸಮೀಕ್ಷೆಯ ಬಗ್ಗೆ ಗೊಂದಲದಲ್ಲಿರುವ ಒಂದಿಷ್ಟು ಜನರನ್ನು ಇನ್ನಷ್ಟು ಗೊಂದಲಕ್ಕೆ ದೂಡುವ ಪ್ರಯತ್ನ ನಡೆಸುತ್ತಿದ್ದಾರೆ. ಅಂದರೆ ಸಮೀಕ್ಷೆ ಸರಿಯಾದ ದಿಕ್ಕಿನಲ್ಲಿ ಸಾಗದಂತೆ ನಡೆಯುತ್ತಿರುವ ಪ್ರಯತ್ನಗಳಿಗೆ ಇವರು ನೆರವು ನೀಡಿದ್ದಾರೆ.
ಸಮೀಕ್ಷೆಗಳು ಸರಿಯಾದ ದಿಕ್ಕಿನಲ್ಲಿ ನಡೆದರೆ ಈ ನಾಡಿನ ವಾಸ್ತವ ಬಯಲಾಗುತ್ತದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಯಾವ ಸಮುದಾಯ ದುರ್ಬಲವಾಗಿವೆಯೋ ಅವರನ್ನು ಮೇಲೆತ್ತಲು ಕಾರ್ಯಕ್ರಮಗಳನ್ನು ಸರಕಾರ ರೂಪಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಮೀಸಲಾತಿಯು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಬೇಕಾದರೆ ವಿವಿಧ ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಳ ಇತ್ತೀಚಿನ ಅಂಕಿ ಅಂಶಗಳ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಕೂಡ ಹೇಳುತ್ತಾ ಬಂದಿದೆ. ಇಂದು ತಮ್ಮ ಉದ್ಯಮಗಳನ್ನು ಕಟ್ಟಿ ಬೆಳೆಸುವುದಕ್ಕಾಗಿ ಈ ದಂಪತಿ ನಮ್ಮ ನಾಡಿನ, ನೆಲ, ಜಲವನ್ನು ಬಳಸಿಕೊಂಡಿದ್ದಾರೆ. ಜನಸಾಮಾನ್ಯರಿಗೆ ಅಕ್ಕಿ, ಬೇಳೆಗಳನ್ನು ಸಬ್ಸಿಡಿಯಲ್ಲಿ ಕೊಡುವಾಗ ಅದೇನೋ ಅನಾಹುತವಾದಂತೆ ಆಡುವ ಇವರು, ತಮ್ಮ ಉದ್ಯಮಗಳಿಗಾಗಿ ಸರಕಾರದಿಂದ ಪಡೆದ ಸವಲತ್ತು, ಸಬ್ಸಿಡಿಗಳು ಎಷ್ಟು ಎನ್ನುವುದರ ಮಾಹಿತಿಯನ್ನು ಮೊದಲು ಜನರ ಮುಂದಿಡಬೇಕಾಗಿದೆ. ನಿಜಕ್ಕೂ ಇವರು ಸ್ಥಾಪಿಸಿರುವ ಇನ್‌ಫೋಸಿಸ್‌ನಲ್ಲಿರುವ ಸಿಬ್ಬಂದಿಯ ಜಾತಿಯ ಗಣತಿಯನ್ನು ಮೊದಲು ನಡೆಸಬೇಕಾಗಿದೆ. ಈ ನಾಡಿನ ಎಲ್ಲ ಜನರಿಗೆ ಸೇರಿದ ಸಂಪತ್ತನ್ನು ಬಳಸಿಕೊಂಡು ಕಟ್ಟಿದ ಸಂಸ್ಥೆಯಲ್ಲಿ ಯಾವ ಯಾವ ಜಾತಿಗಳು ಎಷ್ಟು ಅವಕಾಶವನ್ನು ಪಡೆದುಕೊಂಡಿವೆೆ? ಎನ್ನುವುದರ ಸಮೀಕ್ಷೆ ನಡೆಸಿದಾಗ ಈ ದಂಪತಿ ‘ಸಮೀಕ್ಷೆ’ಯನ್ನು ಯಾಕೆ ಬಹಿಷ್ಕರಿಸುತ್ತಿದೆ ಎನ್ನುವುದರ ಅರಿವಾಗಬಹುದು.
ಶೋಷಿತ ಸಮುದಾಯಗಳನ್ನು ಗುರುತಿಸಿ ಅವರನ್ನು ಮೇಲೆತ್ತುವ ಸರಕಾರದ ಕಾರ್ಯಕ್ರಮಗಳಿಗೆ ಹೆಗಲು ಕೊಡಲು ಹಿಂಜರಿಯುವ ಇದೇ ದಂಪತಿ, ಮೇಲ್‌ಜಾತಿಯ ಜನರಿಗೆ ಶೇ. 10 ಮೀಸಲಾತಿಯನ್ನು ಘೋಷಿಸಿದಾಗ ತುಟಿ ಬಿಚ್ಚಿರಲಿಲ್ಲ. ‘ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಉಳಿದೆಲ್ಲ ಜಾತಿಗಳಿಗಿಂತ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುವ ನಾವು ಈ ಶೇ. 10 ಮೀಸಲಾತಿಯನ್ನು ತಿರಸ್ಕರಿಸುತ್ತೇವೆ. ನಾವಿದನ್ನು ಯಾವತ್ತೂ ಸರಕಾರದ ಬಳಿ ಕೇಳಿರಲಿಲ್ಲ’ ಎಂಬ ಟಿಪ್ಪಣಿಯನ್ನು ಬರೆದು ಸರಕಾರಕ್ಕೆ ರವಾನಿಸಿರಲಿಲ್ಲ. ಜಾತಿಯನ್ನು ಯಾವಾಗ ನಿರಾಕರಿಸಬೇಕು, ಯಾವಾಗ ಅದರ ಬಗ್ಗೆ ಮೌನವಾಗಿರಬೇಕು ಎನ್ನುವುದು ಇವರಿಗೆ ಚೆನ್ನಾಗಿದೆ. ಇಂದು ಇನ್‌ಫೋಸಿಸ್ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯ ಅನುಷ್ಠಾನದ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು. ಇದೇ ಸಂದರ್ಭದಲ್ಲಿ ಕನ್ನಡದ ನೆಲ ಜಲವನ್ನು ಬಳಸಿ ಬೆಳೆದು ನಿಂತ ಇನ್‌ಫೋಸಿಸ್‌ನಂತಹ ಸಂಸ್ಥೆಗಳು ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗಗಳನ್ನು ನೀಡಿದೆ ಎನ್ನುವುದ್ದರ ಸಮೀಕ್ಷೆಯೂ ತುರ್ತಾಗಿ ನಡೆಯಬೇಕಾಗಿದೆ. ಆ ಕುರಿತ ಮಾಹಿತಿಗಳನ್ನು ಬಹಿರಂಗಪಡಿಸಲು ಸುಧಾಮೂರ್ತಿ ದಂಪತಿಗೆ ಯಾವ ಅಡ್ಡಿಯೂ ಇರಲಾರದು ಎಂದು ನಾವು ಭಾವಿಸೋಣ.