ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರಕಾರಕ್ಕೆ ಮುಖಭಂಗ
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ವಿಧಾನಸಭಾ ನಾವಣೆಯಲ್ಲಿ ರಾಜ್ಯದಲ್ಲಿ ಶೋಚನೀಯ ಪರಾಭವವನ್ನು ಅನುಭವಿಸಿದ ಪಕ್ಷ ಯಾವುದೆಂದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಮತದಾರರು ಅಧಿಕಾರಕ್ಕೆ ತಂದರು. ಈ ಸೋಲಿನಿಂದ ಬಿಜೆಪಿ ಪಾಠ ಕಲಿಯಲಿಲ್ಲ. ಕೇಂದ್ರದಲ್ಲಿ ತೆಲುಗು ದೇಶಂ ಮತ್ತು ಸಂಯುಕ್ತ ಜನತಾ ದಳಗಳ ನೆರವಿನಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಎದುರಿಸಲಾಗದೆ ಮುಡಾ ಪ್ರಕರಣದ ನೆಪದಿಂದ ಜಾರಿ ನಿರ್ದೇಶನಾಲಯ(ಈ.ಡಿ.)ವನ್ನು ಬಳಸಿಕೊಳ್ಳುವ ಹತಾಶೆಯ ಸ್ಥಿತಿಗೆ ತಲುಪಿತು. ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಮೇಲೆ ಈ.ಡಿ.ಯನ್ನು ಭೂ ಬಿಟ್ಟು ಪ್ರಕರಣ ದಾಖಲಿಸಿತು. ರಾಜ್ಯದ ಹೈಕೋರ್ಟ್ ಅದನ್ನು ತಳ್ಳಿ ಹಾಕಿತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಆದರೆ ಸೋಮವಾರ ಸುಪ್ರೀಂ ಕೋರ್ಟ್ ಈ.ಡಿ.ಯ ಮೇಲ್ಮನವಿಯನ್ನು ತಳ್ಳಿಹಾಕಿದೆ. ರಾಜಕೀಯ ಉದ್ದೇಶಗಳಿಗಾಗಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ವಿನೋದ ಚಂದ್ರ ಅವರ ವಿಶೇಷ ಪೀಠ ಸದರಿ ಪ್ರಕರಣದ ವಿಚಾರಣೆ ನಡೆಸಿ ಈ.ಡಿ. ಜಾರಿ ಮಾಡಿದ್ದ ಸಮನ್ಸನ್ನು ರದ್ದುಗೊಳಿಸಿತು. "ರಾಜಕೀಯ ಉದ್ದೇಶಗಳಿಗಾಗಿ ನಿಮ್ಮನ್ನೇಕೆ ಬಳಸಿಕೊಳ್ಳಲಾಗುತ್ತಿದೆ?'' ಎಂದು ಜಾರಿ ನಿರ್ದೇಶನಾಲಯದ ಮುಖ್ಯಸ್ಥರನ್ನು ಪ್ರಶ್ನಿಸಿತು. ಜಾರಿ ನಿರ್ದೇಶನಾಲಯದ ದುರ್ಬಳಕೆ ಬಗ್ಗೆ ಈ ಹಿಂದೆಯೂ 2-3 ಸಲ ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು ಮಾತ್ರವಲ್ಲ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಮುಂತಾದ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತ್ತು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣವನ್ನು ಈ.ಡಿ. ಕೈಗೆತ್ತಿಕೊಂಡಾಗ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಇದನ್ನೇ ನೆಪ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದರು. ಕೆಲವು ನಾಯಕರು ಸಿದ್ದರಾಮಯ್ಯನವರ ಬಂಧನವಾಗುತ್ತದೆ ಎಂದು ಹಗಲು ಕನಸು ಕಾಣತೊಡಗಿದರು. ಅಲ್ಲಲ್ಲಿ ಪ್ರತಿಭಟನೆಯನ್ನು ನಡೆಸಿದರು. ಅವರು ಈಗೇನು ಹೇಳುತ್ತಾರೆ?
ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷ ನಾಯಕರನ್ನು ಹಣಿಯಲು ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಲೇ ಬಂದಿದೆ. ಈ ಬಗ್ಗೆ ಪ್ರತಿಪಕ್ಷಗಳು ಆಗಾಗ ಆಕ್ಷೇಪಿಸುತ್ತಲೇ ಬಂದವು. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಿಲಾಂಜಲಿ ಇಡಲಾಗುತ್ತಿದೆ. ಭಾರತ ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ ಎಂಬುದು ಬರೀ ಆರೋಪವಲ್ಲ.
ಕಳೆದ ಹನ್ನೊಂದು ವರ್ಷಗಳ ವಿದ್ಯಮಾನಗಳನ್ನು ಗಮನಿಸಿದರೆ ಭಾರತದ ಜನತಂತ್ರ ಅಪಾಯದಲ್ಲಿ ಇರುವುದು ಸ್ಪಷ್ಟವಾಗುತ್ತದೆ. ಪ್ರತಿಪಕ್ಷ ನಾಯಕರನ್ನು ಮಾತ್ರವಲ್ಲ ಅಸಮಾನತೆ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಚಿಂತಕರನ್ನು, ಬುದ್ದಿಜೀವಿಗಳನ್ನು ಮೋದಿ ಸರಕಾರ ಶತ್ರುಗಳಂತೆ ಕಾಣುತ್ತಾ ಬಂದಿದೆ. ಹೆಸರಾಂತ ಕವಿ ವರವರರಾವ್, ಅಂತರ್‌ರಾಷ್ಟ್ರೀಯ ಮಟ್ಟದ ಲೇಖಕ ಆನಂದ್ ತೇಲ್ತುಂಬೈ, ಪತ್ರಕರ್ತ ಗೌತಮ್ ನವಾಖಾ ಸೇರಿದಂತೆ ಸಾಂಸ್ಕೃತಿಕ ಲೋಕದ ಅನೇಕ ಬುದ್ದಿಜೀವಿಗಳನ್ನು ಜೈಲಿಗೆ ಹಾಕಿ ಕಿರುಕುಳ ಕೊಟ್ಟಿದ್ದನ್ನು ಹಾಗೂ ಈಗಲೂ ಕೆಲವೆಡೆ ಕಿರುಕುಳ ಕೊಡುತ್ತಿರುವುದನ್ನು ತಳ್ಳಿ ಹಾಕಲಾಗುವುದಿಲ್ಲ.
ಬಿಜೆಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ದುರ್ವಾಸನೆ ಬರುತ್ತಿದ್ದರೂ, ಅದನ್ನು ಮುಚ್ಚಿ ಹಾಕಿ ಪ್ರತಿಪಕ್ಷಗಳ ನಾಯಕರ ಸಣ್ಣಪುಟ್ಟ ಪ್ರಕರಣಗಳನ್ನು ಬಳಸಿಕೊಂಡು ಸಿಬಿಐ, ಈ.ಡಿ., ಎನ್‌ಐಎ ಮುಂತಾದ ತನಿಖಾ ಸಂಸ್ಥೆಗಳ ಮೂಲಕ ಅವರ ಮೇಲೆ ದಾಳಿ ಮಾಡುತ್ತಿರುವುದು ಈಗ ಹೊಸದೇನಲ್ಲ.
ದಿಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಬಂಧನದ ಪ್ರಕರಣ ಅಬಕಾರಿ ನೀತಿ ಜಾರಿಯ ಸಂಬಂಧದಲ್ಲಿ ಸಿಬಿಐ ಇತ್ತೀಚೆಗೆ ಅವರನ್ನು ಬಂಧಿಸಿ ರಾಜೀನಾಮೆ ಕೊಡುವಂತೆ ಮಾಡಿತು. ಇದು ಮಾತ್ರವಲ್ಲ 2014ರಿಂದ ಹಲವು ಪ್ರತಿಪಕ್ಷ ನಾಯಕರನ್ನು ಪಟ್ಟಿ ಮಾಡಿ ಬಲಿಪಶು ಮಾಡಲಾಗುತ್ತಿದೆ. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಶಿವಸೇನೆಯ ಧುರೀಣ ಸಂಜಯ್ ರಾವುತ್, ಸಮಾಜವಾದಿ ಪಕ್ಷದ ಆಝಂ ಖಾನ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ದ ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಕಿರುಕುಳ ನೀಡಿದ್ದು ಗುಟ್ಟಿನ ಸಂಗತಿಯಲ್ಲ. ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ತನಿಖಾ ಸಂಸ್ಥೆಗಳು ಆಳುವ ಪಕ್ಷಗಳ ಆಜ್ಞಾಧಾರಕ ಪಡೆಗಳಂತೆ ಕೆಲಸ ಮಾಡುತ್ತಾ ಬಂದಿವೆ.
ಒಂದು ವೇಳೆ ತನಿಖಾ ಸಂಸ್ಥೆಗಳ ಕಿರಿಕಿರಿಗೆ ಹೆದರಿ ಪ್ರತಿಪಕ್ಷ ನಾಯಕರು ಬಿಜೆಪಿ ಸೇರಿದರೆ ಅಂಥವರಿಗೆ ತನಿಖೆಯಿಂದ ವಿನಾಯಿತಿ ನೀಡಲಾಗುತ್ತದೆ. ಬಿಜೆಪಿ ಸೇರಿರುವ ಮುಕುಲ್‌ರಾಯ್, ನಾರಾಯಣ ರಾಣೆ, ಹಿಮಂತ್ ಶರ್ಮಾ, ಸುವೇಂದು ಅಧಿಕಾರಿ ಅವರ ವಿರುದ್ಧ ಸಿಬಿಐ ತನಿಖೆ ವಿನಾಯಿತಿಗೆ ಏನು ಕಾರಣ?
ಒಂದೆಡೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷ ನಾಯಕರಿಗೆ ಕಿರುಕುಳ ಕೊಡುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಸಂವಿಧಾನ ಬಾಹಿರವಾಗಿ ಬಳಸಿಕೊಂಡು ಅಲ್ಲಿನ ಸರಕಾರಗಳ ದೈನಂದಿನ ಆಡಳಿತದಲ್ಲಿ ತೊಂದರೆ ನೀಡಲಾಗುತ್ತದೆ.
ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸರಕಾರಗಳನ್ನು ರಾಜ್ಯಪಾಲರ ಮೂಲಕ ದುರ್ಬಲಗೊಳಿಸಲಾಗುತ್ತಿದೆ. ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಪಾಲರುಗಳು ಮತ್ತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ಗಗಳು ಕೇಂದ್ರ ಸರಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಇದರಿಂದ ಒಕ್ಕೂಟ ವ್ಯವಸ್ಥೆಯ ಮೂಲಭೂತ ಆಶಯಗಳಿಗೆ ಧಕ್ಕೆ ಆಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ಚುನಾವಣಾ ಆಯೋಗದಂಥ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರಕಾರ ತನ್ನ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಬಳಸಿಕೊಳ್ಳುತ್ತಿರುವುದು, ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆತಂಕ ವ್ಯಕ್ತಪಡಿಸಿರುವುದು ಇದೇ ಮೊದಲ ಸಲವಲ್ಲ.