×
Ad

ವಿದೇಶಾಂಗ ನೀತಿಯ ವೈಫಲ್ಯ

Update: 2025-10-07 09:33 IST

PC: x.com/Amockx

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಯಾವುದೇ ದೇಶ ಅಂತರ್‌ರಾಷ್ಟ್ರೀಯವಾಗಿ ತನ್ನ ಪ್ರಭಾವವನ್ನು ಕಳೆದುಕೊಂಡರೆ ಕ್ರಮೇಣ ಒಂಟಿಯಾಗುವುದು ಅನಿವಾರ್ಯವಾಗುತ್ತದೆ. ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗುತ್ತದೆ. ಇದಕ್ಕೆ ಭಾರತದ ಇಂದಿನ ಪರಿಸ್ಥಿತಿಯೇ ಜ್ವಲಂತ ಉದಾಹರಣೆಯಾಗಿದೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿ ಜಾಗತಿಕವಾಗಿ ಭಾರತ ಏಕಾಂಗಿಯಾಗಿದೆ. ನೆರೆಯ ದೇಶಗಳೊಂದಿಗೂ ಕೂಡ ಸಂಬಂಧ ಸರಿಯಿಲ್ಲ. ಇದಕ್ಕೆ ಬಹು ಮುಖ್ಯ ಕಾರಣವೆಂದರೆ ಸದ್ಯದ ದೋಷಪೂರಿತ ವಿದೇಶಾಂಗ ನೀತಿಯಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ವಿದೇಶಾಂಗ ನೀತಿ ದುರ್ಬಲವಾಗುತ್ತಲೇ ಬಂದಿದೆ.

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಕಾಲದಿಂದಲೂ ಅನುಸರಿಸುತ್ತ ಬಂದ ನಮ್ಮ ವಿದೇಶಾಂಗ ನೀತಿ ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗುತ್ತ ಬಂದಿತ್ತು. ಒಂದು ರಾಷ್ಟ್ರ ಬಲಿಷ್ಠ ರಾಷ್ಟ್ರ ಎಂದು ಹೆಸರಿಸಲ್ಪಡಬೇಕೆಂದರೆ ಬರೀ ಸೇನಾ ಸಾಮರ್ಥ್ಯವಿದ್ದರೆ ಸಾಲದು, ಜಗತ್ತಿನ ಎಲ್ಲ ದೇಶಗಳ ಜೊತೆಗೆ ಸೌಹಾರ್ದ ಸಂಬಂಧ ಹೊಂದಿರಬೇಕು. ಸಂಕಷ್ಟದ ಸಂದರ್ಭಗಳಲ್ಲಿ ಅಂತರ್‌ರಾಷ್ಟ್ರೀಯ ಬೆಂಬಲ ತಾನಾಗಿ ಬರಬೇಕು. ಭಾರತ ಅಲಿಪ್ತ ಆಂದೋಲನದ ನಾಯಕತ್ವ ವಹಿಸಿದ್ದ ದೇಶಗಳಲ್ಲಿ ಒಂದು.ಅಲಿಪ್ತ ತಳಹದಿಯ ಮೇಲೆ ರೂಪುಗೊಂಡ ಭಾರತದ ವಿದೇಶಾಂಗ ನೀತಿಗೆ ನೆಹರೂ ಕಾಲದಿಂದ ಹಿಡಿದು ವಾಜಪೇಯಿ ಮತ್ತು ಮನಮೋಹನ್ ಸಿಂಗ್‌ವರೆಗೆ ಬಹುತೇಕ ಎಲ್ಲ ಪ್ರಧಾನ ಮಂತ್ರಿಗಳು ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ನೆಹರೂ ಕಾಲದ ಎಲ್ಲ ನೀತಿ, ಧೋರಣೆಗಳಿಗೆ ತಿಲಾಂಜಲಿ ನೀಡಿ ತನಗೆ ತಿಳಿದಂತೆ ಹೊಸದನ್ನು ಮಾಡ ಹೋದ ಪ್ರಧಾನಿ ಮೋದಿಯವರು ವಿದೇಶಾಂಗ ನೀತಿಯ ವೈಫಲ್ಯಕ್ಕೆ ಕಾರಣರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ನಿಜ, ಜಾಗತಿಕ ಪರಿಸ್ಥಿತಿಯಲ್ಲಿ ಅಂದಿಗೂ, ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ. ಎರಡು ವಿಶ್ವ ಮಹಾಯುದ್ಧಗಳ ನಂತರ ಜಗತ್ತು ಸೋವಿಯತ್ ರಶ್ಯ ಹಾಗೂ ಅಮೆರಿಕ ಎಂಬ ಎರಡು ದೇಶಗಳ ನಾಯಕತ್ವದಲ್ಲಿ ಇಬ್ಬಣಗೊಂಡಾಗ ನಾವು ಯಾವ ಬಣದಲ್ಲೂ ಇಲ್ಲ ಎಂದು ಹೊಸದಾಗಿ ಸ್ವಾತಂತ್ರ್ಯ ಪಡೆದ ಭಾರತದಂಥ ದೇಶಗಳು ಅನುಸರಿಸುತ್ತಾ ಬಂದ ಅಲಿಪ್ತ ನೀತಿ ಜಾಗತಿಕ ಮನ್ನಣೆ ಪಡೆಯಿತು. ಇದರಿಂದ ಜಾಗತಿಕ ಮಟ್ಟದಲ್ಲಿ ಗೌರವದ ಸ್ಥಾನ ಪಡೆಯಿತು. ಹಲವಾರು ದೇಶಗಳು ಭಾರತದ ಜೊತೆಗೆ ಸೌಹಾರ್ದ ಸಂಬಂಧಕ್ಕೆ ಒಲವು ತೋರಿಸಿದವು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿದೇಶಾಂಗ ನೀತಿ ಸಾಕಷ್ಟು ಬದಲಾವಣೆಯನ್ನು ಕಂಡಿತು. ದೇಶದ ಹಿತಾಸಕ್ತಿಗಳಿಗೆ ಮಾರಕವಾದ ಈ ನೀತಿಯ ಪರಿಣಾಮವಾಗಿ ಸ್ನೇಹ ಸಂಬಂಧ ಹೊಂದಿದ್ದ ಹಲವಾರು ದೇಶಗಳು ದೂರವಾದವು. ಕ್ರಮೇಣ ಅಂತರ್‌ರಾಷ್ಟ್ರೀಯವಾಗಿ ಭಾರತ ಒಂಟಿಯಾಗುತ್ತಾ ಬಂತು.

ಜಾಗತಿಕವಾಗಿ ಭಾರತ ಏಕಾಂಗಿಯಾಗಿರುವುದಕ್ಕೆ ಹಲವಾರು ಕಾರಣಗಳಿದ್ದರೂ ‘ಆಪರೇಷನ್ ಸಿಂಧೂರ’ ನಂತರದ ವಿದ್ಯಮಾನಗಳು ಮುಖ್ಯ ಕಾರಣಗಳಾಗಿವೆ. ಪಹಲ್ಗಾಮ್ ದಾಳಿ ಹಾಗೂ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತ ಸೇನಾ ಕಾರ್ಯಾಚರಣೆ ನಡೆಸಿದಾಗ ಅಂತರ್‌ರಾಷ್ಟ್ರೀಯವಾಗಿ ಭಾರತಕ್ಕೆ ನಿರೀಕ್ಷಿಸಿದ ಬೆಂಬಲ ಲಭಿಸಲಿಲ್ಲ. ಇದು ಮಾತ್ರವಲ್ಲ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಡೆಗಟ್ಟಿ ಕದನ ವಿರಾಮ ಮಾಡಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಬಹಿರಂಗವಾಗಿ ಹೇಳಿದ್ದು ಭಾರತದ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಿತು. ಹಿಂದೆಲ್ಲಾ ಭಾರತವನ್ನು ಬೆಂಬಲಿಸುತ್ತಾ ಬಂದಿದ್ದ ಮಿತ್ರ ದೇಶಗಳೂ ಕೂಡ ಈ ಬಾರಿ ಭಾರತದ ಬೆಂಬಲಕ್ಕೆ ಬರಲಿಲ್ಲ. ಪಾಕಿಸ್ತಾನದ ಜೊತೆಗಿನ ವೈಷಮ್ಯಕ್ಕೆ ಸಂಬಂಧಿಸಿದಂತೆ ಮೂರನೇ ದೇಶದ ಮಧ್ಯಸ್ಥಿಕೆಯನ್ನು ವಿರೋಧಿಸುತ್ತಾ ಬಂದ ಭಾರತಕ್ಕೆ ಟ್ರಂಪ್ ಹೇಳಿಕೆ ಜಾಗತಿಕವಾಗಿ ಅದರ ಘನತೆಗೆ ಪೆಟ್ಟು ನೀಡಿತು.

ಭಾರತ ಮತ್ತು ಪಾಕಿಸ್ತಾನದ ನಡುವಿನ ವೈಷಮ್ಯದ ಬಗ್ಗೆ ಮಾತ್ರವಲ್ಲ, ಭಾರತದ ವಿರುದ್ಧ ಟ್ರಂಪ್ ಸಾರಿದ ಸುಂಕ ಸಮರ ತೀವ್ರ ಆಘಾತವನ್ನು ಮಾಡಿತು. ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಮಾಡಿಕೊಂಡ ಕೆಲವು ಬದಲಾವಣೆಗಳೇ ಇದಕ್ಕೆ ಕಾರಣ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ ಫೆಲೆಸ್ತೀನ್‌ಗೆ ಸಂಬಂಧಿಸಿದಂತೆ ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ನೀತಿಯನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ಕೈ ಬಿಟ್ಟಿದ್ದು. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಸಾವಿರಾರು ಮಕ್ಕಳು, ಮಹಿಳೆಯರು ಸೇರಿದಂತೆ ಐವತ್ತು ಸಾವಿರಕ್ಕೂ ಮಿಕ್ಕಿ ಫೆಲೆಸ್ತೀನ್ ನಾಗರಿಕರು ಸಾವು, ನೋವು ಅನುಭವಿಸುತ್ತಿರುವ ಬಗ್ಗೆ ಸ್ಪಷ್ಟವಾಗಿ ಖಂಡಿಸಲೂ ಭಾರತ, ಅಂದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಹಿಂದೆ ಮುಂದೆ ನೋಡಿತು. ಭಾರತ ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಫೆಲೆಸ್ತೀನ್ ಪರ ಧೋರಣೆಯಿಂದ ಹಿಂದೆ ಸರಿದುದು ಅಂತರ್‌ರಾಷ್ಟ್ರೀಯವಾಗಿ ದೇಶದ ಪ್ರತಿಷ್ಠೆಯನ್ನು ಕುಗ್ಗಿಸಿತು.

ನೆಹರೂ ಕಾಲದಿಂದಲೂ ಜಾಗತಿಕವಾಗಿ ಭಾರತ ಹಲವಾರು ದೇಶಗಳ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿತ್ತು. ಪಾಕಿಸ್ತಾನದ ಜೊತೆಗೆ ಸಂಘರ್ಷದ ಸಂದರ್ಭಗಳಲ್ಲಿ ಕೂಡ ಅಂದಿನ ಸೋವಿಯತ್ ರಶ್ಯ, ಪೂರ್ವ ಜರ್ಮನಿ, ಪೋಲ್ಯಾಂಡ್ ಮೊದಲಾದ ದೇಶಗಳು ಭಾರತದ ಪರವಾದ ನಿಲುವನ್ನು ಬಹಿರಂಗವಾಗಿ ತೆಗೆದುಕೊಂಡಿದ್ದವು. ಈಗ ಭಾರತ ಜಗತ್ತಿನಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದರೆ ಅದಕ್ಕೆ ನಮ್ಮ ಅಲಿಪ್ತ ವಿದೇಶಾಂಗ ನೀತಿಯೇ ಕಾರಣ. ಆದರೆ ಮೋದಿ ಸರಕಾರ ವಿದೇಶಾಂಗ ನೀತಿಯಲ್ಲೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡ ಪರಿಣಾಮವಾಗಿ ಭಾರತ ಇಂದು ಜಾಗತಿಕವಾಗಿ ಒಂಟಿತನವನ್ನು ಅನುಭವಿಸುತ್ತಿದೆ.

ಹಿಂದೆಲ್ಲ ಭಾರತದ ಸೇನಾ ಮತ್ತು ಆರ್ಥಿಕ ಸಾಮರ್ಥ್ಯ ಈಗಿನಷ್ಟು ಇರಲಿಲ್ಲ. ಆದರೆ ಜಾಗತಿಕವಾಗಿ ಭಾರತ ತುಂಬಾ ಗೌರವಕ್ಕೆ ಪಾತ್ರವಾಗಿತ್ತು. ಆದರೆ ಈಗ ಬಲಿಷ್ಠ ರಾಷ್ಟ್ರವೆಂದು ಹೆಸರಾಗಿದ್ದರೂ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಅಂತರ್‌ರಾಷ್ಟ್ರೀಯ ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಯಾರು ಹೊಣೆ? ದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಕೇಂದ್ರ ಬಿಜೆಪಿ ಸರಕಾರವಿದೆ. ಇದರಿಂದಾಗಿ ಕಲಿಯಬೇಕಾದ ಪಾಠವೆಂದರೆ ವಿದೇಶಾಂಗ ನೀತಿಯನ್ನು ಒಮ್ಮಿಂದೊಮ್ಮೆಲೆ ಬದಲಿಸಲು ಹೋಗಬಾರದು. ಭಾರತ ಹಿಂದಿನಿಂದಲೂ ಒಪ್ಪಿಕೊಂಡ ವಿದೇಶಾಂಗ ನೀತಿಯನ್ನು ಅನುಸರಿಸುವುದು ಏಕೈಕ ಪರಿಹಾರ ಮಾರ್ಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News