×
Ad

ಲಡಾಖ್ ಬೆನ್ನಿಗೆ ಚೂರಿ!

Update: 2025-09-27 09:09 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲಡಾಖ್‌ನ ಆತ್ಮಸಾಕ್ಷಿಯನ್ನು ಕೇಂದ್ರ ಸರಕಾರ ಜೈಲಿಗೆ ತಳ್ಳಿದೆ. ಲಡಾಖ್‌ನ ಪರಿಸರ ಮತ್ತು ಜನರ ಭಾವನೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಕಳೆದೆರಡು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ. ಅಷ್ಟೇ ಅಲ್ಲ, ಲಡಾಖ್‌ನಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಕರ್ಫ್ಯೂವನ್ನು ಹೇರಲಾಗಿದೆ. ಪರೋಕ್ಷವಾಗಿ ಇಡೀ ಲಡಾಖ್‌ನ್ನೇ ಜೈಲಾಗಿ ಪರಿವರ್ತಿಸಲಾಗಿದೆ. ಲಡಾಖ್‌ನ ಪರಿಸರದ ಮೇಲೆ, ಅಲ್ಲಿನ ಪ್ರಕೃತಿ ಸಂಪತ್ತಿನ ಮೇಲೆ, ಜನರ ಮೇಲೆ ಪೂರ್ಣ ಪ್ರಮಾಣದಲ್ಲಿ ಹಕ್ಕು ಸಾಧಿಸಲು ಸರಕಾರ ದಮನಕಾರಿ ನೀತಿಯನ್ನು ಇನಷ್ಟು ಕಠೋರಗೊಳಿಸಿದೆ. ಪರಿಣಾಮವಾಗಿ ಅಲ್ಲಿನ ಯುವ ಜನರು ಆಕ್ರೋಶಗೊಂಡು ಬೀದಿಗಿಳಿದಿದ್ದಾರೆ. ಬಿಜೆಪಿ ಕಚೇರಿಗಳಿಗೆ ಬೆಂಕಿ ಬಿದ್ದಿದೆ. ಸರಕಾರ ಇದನ್ನೇ ತನ್ನ ದಮನಕಾರಿ ನೀತಿಗೆ ಪೂರಕವಾಗಿ ಬಳಸಿಕೊಂಡಿತು, ಪೊಲೀಸರ ಗುಂಡಿಗೆ ನಾಲ್ವರು ಬಲಿಯಾದರು. ಹಲವರು ಗಾಯಗೊಂಡರು. ಹಿಂಸಾಚಾರಕ್ಕೆ ಸಂಬಂಧಿಸಿ 60ಕ್ಕೂ ಅಧಿಕ ಜನರನ್ನು ಸರಕಾರ ಬಂಧಿಸಿದೆ.

ಲಡಾಖ್‌ನ ಜನತೆ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ ಮೈನಸ್ 10 ಡಿಗ್ರಿ ವಾತಾವರಣದ ನೀರು ಹೆಪ್ಪುಗಟ್ಟುವ ಚಳಿಯಲ್ಲಿ ವಾಂಗ್ಚುಕ್ ಅವರು ಸುಮಾರು 300 ಲಡಾಖ್ ನಿವಾಸಿಗಳ ಜೊತೆಗೆ 21 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರಿಗೆ ಬೆಂಬಲವಾಗಿ ಸಾವಿರಾರು ಜನರು ಆ ಸಂದರ್ಭದಲ್ಲಿ ನೆರೆದಿದ್ದರು. ಅಲ್ಲಿನ ಜನರ ನೋವು ದುಮ್ಮಾನಗಳಿಗೆ ಸ್ಪಂದಿಸಿ ಒಬ್ಬನೇ ಒಬ್ಬ ಬಿಜೆಪಿ ನಾಯಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಅಂದು ತಾತ್ಕಾಲಿಕವಾಗಿ ಉಪವಾಸ ಅಂತ್ಯಗೊಳಿಸಿದ ವಾಂಗ್ಚುಕ್, ಭರವಸೆ ಈಡೇರದಿದ್ದರೆ ಮತ್ತೆ ಉಪವಾಸ ಕೂರಲಿದ್ದೇನೆ ಎಂದು ಎಚ್ಚರಿಸಿದ್ದರು. ಇದಾದ ಬಳಿಕ ಲಡಾಖ್‌ನ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟಂಬರ್‌ನಲ್ಲಿ ಲೇಹ್‌ನಿಂದ ದಿಲ್ಲಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ರ್ಯಾಲಿಗೂ ಕೇಂದ್ರ ಸರಕಾರ ಸ್ಪಂದಿಸಿರಲಿಲ್ಲ.

ಸೋನಮ್ ವಾಂಗ್ಚುಕ್ ಎಂದಾಗ ನೆನಪಾಗುವುದು ‘ತ್ರೀ ಈಡಿಯಟ್ಸ್’. ಸೋನಮ್ ವಾಂಗ್ಚುಕ್ ಬದುಕನ್ನು ಆಧರಿಸಿ ಆಮಿರ್ ಖಾನ್ ‘ತ್ರೀ ಈಡಿಯಟ್ಸ್’ ಸಿನೆಮಾ ಮಾಡಿದ್ದರು. ಮೂಲತಃ ಇಂಜಿನಿಯರ್ ಆಗಿರುವ ಸೋನಮ್ ವಾಂಗ್ಚುಕ್ ಉದ್ಯಮ, ಸಂಶೋಧನೆ, ಲಡಾಖ್ ಪರಿಸರ ಮತ್ತು ಬುಡಕಟ್ಟು ಜನರ ಕುರಿತಂತೆ ವಹಿಸಿರುವ ಕಾಳಜಿಗಾಗಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದವರು. ತಂತ್ರಜ್ಞಾನ, ಉದ್ಯಮ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ವಿಸ್ತರಿಸಿದವರು. ಲಡಾಖ್‌ನ ಆತ್ಮಸಾಕ್ಷಿಯಂತೆ ಬದುಕುತ್ತಿರುವವರು. ಲಡಾಖ್‌ನ ಹೃದಯ ಬಡಿತವನ್ನು ಅರಿತವರು. ಜಮ್ಮು-ಕಾಶ್ಮೀರದ ಮೇಲಿನ 370ನೇ ವಿಧಿಯನ್ನು ರದ್ದುಗೊಳಿಸಿ ಅದರ ವಿಶೇಷ ಸ್ಥಾನಮಾನವನ್ನು ಹಿಂದೆಗೆದಾಗ ಇವರು ಆ ನಿರ್ಧಾರವನ್ನು ಬೆಂಬಲಿಸಿದ್ದರು. ಮೋದಿ ಸರಕಾರ ಚೀನಾದ ವಸ್ತುಗಳಿಗೆ ಬಹಿಷ್ಕಾರದ ಕರೆಯನ್ನು ನೀಡಿದಾಗ ವಾಂಗ್ಚುಕ್ ಆ ಚಳವಳಿಯ ಜೊತೆಗೆ ನಿಂತರು ಮಾತ್ರವಲ್ಲ, ಚೀನಾದ ವಸ್ತುವನ್ನು ಬಹಿಷ್ಕರಿಸುವ ಆಂದೋಲನದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಜಮ್ಮು-ಕಾಶ್ಮೀರದಿಂದ ಲಡಾಖ್‌ನ್ನು ಬೇರ್ಪಡಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸಿದಾಗ ಮುಂದೆ ಲಡಾಖ್‌ಗೆ ಒಳಿತಿನ ದಿನಗಳು ಬರಲಿವೆ ಎಂದು ನಂಬಿದವರಲ್ಲಿ ಈ ಸೋನಮ್ ವಾಂಗ್ಚುಕ್ ಕೂಡ ಒಬ್ಬರು. ಯಾಕೆಂದರೆ ಜಮ್ಮು-ಕಾಶ್ಮೀರದ ಭಾಗವಾಗಿದ್ದಾಗ ಲಡಾಖ್ ಜನರಿಗೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆಯಿತ್ತು. ಕಾಶ್ಮೀರದಿಂದ ಬೇರ್ಪಟ್ಟಾಗ ಸಹಜವಾಗಿಯೇ ಇನ್ನು ನಮ್ಮ ಅಭಿವೃದ್ಧಿಯನ್ನು ನಾವೇ ನಿರ್ಧರಿಸಬಹುದು ಎಂದು ಭಾವಿಸಿದ್ದರು. ಕೇಂದ್ರ ಸರಕಾರ ತನ್ನ ಅಗತ್ಯ ಸಂದರ್ಭದಲ್ಲಿ ಈ ಸೋನಮ್ ವಾಂಗ್ಚುಕ್ ಅವರನ್ನು ಸರ್ವ ರೀತಿಯಲ್ಲಿ ಬಳಸಿಕೊಂಡಿತ್ತು.

ಜಮ್ಮು-ಕಾಶ್ಮೀರದಿಂದ ಬೇರ್ಪಡಿಸಿದ್ದು ಲಡಾಖ್‌ನ್ನು ಉಳಿಸುವುದಕ್ಕಾಗಿಯಲ್ಲ, ಕಾರ್ಪೊರೇಟ್ ದಣಿಗಳಿಗೆ ಬಲಿಕೊಡುವುದಕ್ಕೆ ಎನ್ನುವುದು ತಿಳಿಯುವಷ್ಟರಲ್ಲಿ ತಡವಾಗಿತ್ತು. ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಲಡಾಖ್‌ನಲ್ಲಿ ಕೈಗಾರಿಕೋದ್ಯಮಿಗಳ ಸಣ್ಣ ಹಸ್ತಕ್ಷೇಪವೂ ಭಾರೀ ದುಷ್ಪರಿಣಾಮಗಳನ್ನು ಬೀರಬಹುದು. ಇದನ್ನು ಲಡಾಖ್ ಜನರು ಈಗಾಗಲೇ ಅನುಭವಿಸುತ್ತಿದ್ದಾರೆ. ತುಸು ಏರುಪೇರಾದರೆ ಹಿಮಾಲಯ ಕರಗತೊಡಗುತ್ತದೆ. ನೆರೆ ಅವರ ಬದುಕನ್ನು ಕೊಚ್ಚಿಕೊಂಡು ಹೋಗುತ್ತದೆ. ಇರುವ ಸೀಮಿತ ಕುಡಿಯುವ ನೀರನ್ನು ಪ್ರವಾಸೋದ್ಯಮ, ಕೈಗಾರಿಕೆ ಎಂದು ಉದ್ಯಮಿಗಳು ಕಸಿದುಕೊಳ್ಳತೊಡಗಿದ್ದಾರೆ. ಪ್ರವಾಸೋದ್ಯಮದ ಹೆಸರಿನಲ್ಲಿ ಲಡಾಖ್ ಪರಿಸರದ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ ಕೇಂದ್ರಾಡಳಿತ ಪ್ರದೇಶವಾದ ದಿನದಿಂದ ಇಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಶೇ. 25ಕ್ಕಿಂತಲೂ ಅಧಿಕ ನಿರುದ್ಯೋಗಿಗಳು ಇಲ್ಲಿದ್ದಾರೆ. ಗಣಿ ಕಂಪೆನಿಗಳು ಗಣಿಗಾರಿಕೆಗಳಿಗೆ ಭೂಮಿಯನ್ನು ಖರೀದಿಸುತ್ತಿರುವುದು ಕೂಡ ಇಲ್ಲಿಯ ಜನರನ್ನು ಆತಂಕಕ್ಕೆ ತಳ್ಳಿದೆ. ಈ ಕಾರಣದಿಂದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಆರ್ಟಿಕಲ್ 244(2)ನ್ನು ಲಡಾಖ್‌ಗೂ ಅನ್ವಯಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ. ಈಶಾನ್ಯ ಭಾರತದಲ್ಲಿರುವಂತೆಯೇ ಲಡಾಖ್‌ನಲ್ಲೂ ಬುಡಕಟ್ಟು ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆರನೇ ಶೆಡ್ಯೂಲ್‌ನ್ನು ಜಾರಿಗೊಳಿಸಿದರೆ, ಇಲ್ಲಿನ ಭೂಪ್ರದೇಶಗಳನ್ನು ಹೊರಗಿನ ಜನರು ಕೊಂಡುಕೊಳ್ಳುವುದು ಕಷ್ಟವಾಗುವುದರಿಂದ, ಗಣಿಗಾರಿಕೆಗಳಂತಹ ಪರಿಸರ ವಿರೋಧಿ ಉದ್ಯಮಗಳು ಕಾಲಿಡುವುದನ್ನು ತಡೆಯಬಹುದು. ಇದು ಸೋನಮ್ ವಾಂಗ್ಚುಕ್ ಸೇರಿದಂತೆ ಲಡಾಖ್ ಜನರ ಕಳಕಳಿಯಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಅದನ್ನು ಪೂರ್ಣಪ್ರಮಾಣದಲ್ಲಿ ಭಾರತಕ್ಕೆ ಸೇರಿಸಿದ್ದೇನೆ ಎಂದು ಮೋದಿ ಹೇಳುತ್ತಿರುವುದು ನಿಜವೇ ಆಗಿದ್ದರೆ ಲಡಾಖ್ ಜನರ ಜೊತೆಗೆ ಯಾಕೆ ಅವರು ಅನ್ಯರಂತೆ ವರ್ತಿಸುತ್ತಿದ್ದಾರೆ? ಅವರ ಬೇಡಿಕೆಗಳಿಗೆ ಸ್ಪಂದಿಸದೆ, ಅವರನ್ನು ಶತ್ರುಗಳಂತೆ ಯಾಕೆ ನಡೆಸಿಕೊಳ್ಳುತ್ತಿದ್ದಾರೆ?

ಲಡಾಖ್‌ನ್ನು ಉದ್ಯಮಿಗಳ, ಸೇನೆಯ ಸೂತ್ರಕ್ಕೆ ಒಪ್ಪಿಸುವ ಭರದಲ್ಲಿ ಕೇಂದ್ರ ಸರಕಾರ ನಿಜಕ್ಕೂ ಬೆಂಕಿಯ ಜೊತೆಗೆ ಚೆಲ್ಲಾಟವಾಡುತ್ತಿದೆ. ಒಂದೆಡೆ ಲಡಾಖ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೆರೆಯ ಚೀನಾ, ಪಾಕಿಸ್ತಾನ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿವೆೆ. ಲಡಾಖ್‌ನಲ್ಲಿ ಹಸ್ತಕ್ಷೇಪ ನಡೆಸಲು ಚೀನಾ ತುದಿಗಾಲಲ್ಲಿ ನಿಂತಿದೆ. ಇದೀಗ ತನ್ನದೇ ನೆಲದ ಜನರ ಜೊತೆಗೆ ಸರಕಾರ ನಡೆಸುತ್ತಿರುವ ದೌರ್ಜನ್ಯ ಈ ಹಸ್ತಕ್ಷೇಪಕ್ಕೆ ಕುಮ್ಮಕ್ಕು ನೀಡಿದಂತಾಗಬಹುದು. ನಿಧಾನಕ್ಕೆ ಕಣಿವೆಯ ಈ ಆಕ್ರೋಶ ಜಮು-್ಮಕಾಶ್ಮೀರದಾದ್ಯಂತ ವಿಸ್ತರಿಸುವ ಸಾಧ್ಯತೆಗಳಿವೆ. ಕಾಶ್ಮೀರದಲ್ಲಿರುವ ಉಗ್ರವಾದಿಗಳು ಇದನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುವ ಅಪಾಯವಿದೆ. ಹಾಗೆಯೇ, ಈ ಪ್ರದೇಶದಲ್ಲಿ ಸರಕಾರ ನಡೆಸಿರುವ ಬೇಕಾಬಿಟ್ಟಿ ಹಸ್ತಕ್ಷೇಪ ಹಿಮಾಲಯದ ತಪ್ಪಲಿನ ಪರಿಸರದ ಮೇಲೆ ಭಾರೀ ಪರಿಣಾಮಗಳನ್ನು ಬೀರಬಹುದು. ಇಂದು ಲಡಾಖ್‌ನ ನಿಜವಾದ ಹಕ್ಕುದಾರರು ಶಾಂತಿಯುತವಾಗಿ, ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ದಮನಿಸಿ ಅವರನ್ನು ಉಗ್ರವಾದಿಗಳನ್ನಾಗಿಸಲು ಸರಕಾರವೇ ಪ್ರಯತ್ನಿಸುತ್ತಿರುವುದು ಕಳವಳಕಾರಿ. ವಾಂಗ್ಚುಕ್‌ನನ್ನು ಬಂಧಿಸುವ ಮೂಲಕ ಲಡಾಖ್‌ನ ಹೆಪ್ಪುಗಟ್ಟಿದ ಆಕ್ರೋಶವನ್ನು ತಣ್ಣಗಾಗಿಸುವುದು ಕಷ್ಟ. ಸರಕಾರದ ಸರ್ವಾಧಿಕಾರದ ಬಿಸಿಗೆ ಅದು ಕರಗತೊಡಗಿದರೆ, ಪ್ರವಾಹವಾಗಿ ಉಕ್ಕಿ ಹರಿಯಬಹುದು. ಅದಕ್ಕೆ ಮೊದಲು ಎಚ್ಚೆತ್ತು ಸರಕಾರ ವಾಂಗ್ಚುಕ್‌ರನ್ನು ಬಿಡುಗಡೆ ಮಾಡಬೇಕು ಮಾತ್ರವಲ್ಲ, ಅವರ ಬೇಡಿಕೆಗಳಿಗೆ ಕಿವಿಯಾಗಿ ಲಡಾಖ್ ಭಾರತದ ಅವಿಭಾಜ್ಯ ಅಂಗವೆನ್ನುವುದನ್ನು ಅವರಿಗೆ ಮನವರಿಕೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News