×
Ad

ಸಹಕಾರ ಸಚಿವರ ಪಾಲಿಗೆ ಅಸಹಕಾರ ತೋರಿದ ನಾಲಿಗೆ

Update: 2025-08-14 07:23 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಹಳೆ ಬೇರು-ಹೊಸ ಚಿಗುರು ಮರ ಸೊಬಗು’ ಎನ್ನುವ ಮಾತಿದೆ. ಯಾವುದೇ ರಾಜಕೀಯ ಪಕ್ಷಕ್ಕೆೆ ಅಲ್ಲಿರುವ ಹಿರಿಯ ನಾಯಕರು ಅದರ ನಿಜವಾದ ತಾಯಿ ಬೇರುಗಳಾಗಿರುತ್ತಾರೆ. ತಮ್ಮ ರಾಜಕೀಯ ಬದುಕಿನಿಂದ ಗಳಿಸಿರುವ ಅಪಾರ ಅನುಭವದಿಂದ ಪಕ್ಷಕ್ಕೆ ಅವರು ಮಾರ್ಗದರ್ಶನ ನೀಡುತ್ತಾರೆ, ಸಂಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಂತು ಪಕ್ಷವನ್ನು ಮುನ್ನಡೆಸುತ್ತಾರೆ. ಆದರೆ ಕಾಂಗ್ರೆಸ್‌ನ ಪಾಲಿಗೆ ಇದು ತಿರುವುಮುರುವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅತ್ಯುನ್ನತ ಸ್ಥಾನಗಳನ್ನು ಪಡೆದು ಅಧಿಕಾರವನ್ನು ಅನುಭವಿಸಿದ ಹಿರಿಯರು, ಇಂದು ಕಾಂಗ್ರೆಸ್ ಪಾಲಿಗೆ ಸಮಸ್ಯೆಗಳಾಗುತ್ತಿದ್ದಾರೆ. ಇಂದು ಕಾಂಗ್ರೆಸ್‌ಗೆ ಅತಿ ಹೆಚ್ಚು ಮುಜುಗರಗಳನ್ನು ಸೃಷ್ಟಿಸುತ್ತಿರುವವರು ಕಾಂಗ್ರೆಸ್‌ನೊಳಗಿರುವ ಹಿರಿಯ ಮುತ್ಸದ್ದಿಗಳೇ ಆಗಿದ್ದಾರೆ. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಅಧಿಕಾರವನ್ನು ಅನುಭವಿಸಿದ ಹಿರಿಯ ಮುತ್ಸದ್ದಿ ಎಸ್. ಎಂ. ಕೃಷ್ಣ ತಮ್ಮ ರಾಜಕೀಯ ಮುಸ್ಸಂಜೆಯ ಹೊತ್ತಿನಲ್ಲಿ ‘ಕಾಂಗ್ರೆಸ್ ನನ್ನನ್ನು ನಿರ್ಲಕ್ಷಿಸುತ್ತಿದೆ’ ಎನ್ನುವ ನೆಪ ತೆಗೆದು ಬಿಜೆಪಿಗೆ ಪಕ್ಷಾಂತರವಾದರು. ಇಳಿ ವಯಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ತನ್ನ ಅಳಿದುಳಿದ ರಾಜಕೀಯ ಬದುಕನ್ನು ಮುಗಿಸಿದರು. ಬಿಜೆಪಿಯಲ್ಲಾದರೂ ಅವರಿಗೆ ಸೂಕ್ತ ಮರ್ಯಾದೆ ಸಿಕ್ಕಿತೇ ಎಂದರೆ ಅದೂ ಇಲ್ಲ. ಪ್ರಣವ್‌ಮುಖರ್ಜಿ, ಗುಲಾಂ ನಬಿ ಆಝಾದ್‌ನಂತಹವರು ಕಾಂಗ್ರೆಸನ್ನು ಬಾಳೆಯೆಲೆಯಂತೆ ಬಳಸಿ ಎಸೆದರು. ಇತ್ತೀಚೆಗೆ ಇವರ ಸಾಲಿಗೆ ಶಶಿ ತರೂರ್ ಕೂಡ ಸೇರ್ಪಡೆಯಾಗಿದ್ದಾರೆ. ಬಹುಶಃ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಮಾತನಾಡುತ್ತಿರುವುದು ರಾಹುಲ್ ಗಾಂಧಿ ಮಾತ್ರವೇನೋ. ಭಾರತ್ ಜೋಡೊ ಸೇರಿದಂತೆ ಇವರು ಭಾರತಾದ್ಯಂತ ರ್ಯಾಲಿಗಳನ್ನು ಹಮ್ಮಿಕೊಂಡು ಕಾಂಗ್ರೆಸ್‌ಗೆ ಮರು ಜೀವ ನೀಡುವ ಪ್ರಯತ್ನ ನಡೆಸಿದರು. ಹಿರಿಯರೆಂದು ಕರೆಸಿಕೊಂಡವರು ಕಾಂಗ್ರೆಸನ್ನು ಹಿಂದಕ್ಕೆ ಜಗ್ಗಲು ಪ್ರಯತ್ನಿಸುತ್ತಿರುವಾಗ ರಾಹುಲ್ ತನ್ನ ಶಕ್ತಿ ಮೀರಿ ಅದನ್ನು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ.

ಸದ್ಯಕ್ಕೆ ರಾಹುಲ್ ಗಾಂಧಿಯ ಏಕಮೇವ ಪ್ರಯತ್ನದಿಂದ ‘ಮತಗಳ್ಳತನ’ ದೇಶಾದ್ಯಂತ ಚರ್ಚೆಯಲ್ಲಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತಗಳ್ಳತನವನ್ನು ಹೊರಗೆಳೆದ ರಾಹುಲ್ ಗಾಂಧಿ, ಇದೀಗ ಬಿಹಾರದಲ್ಲಿ ಮತ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ಭಾರೀ ಅಕ್ರಮಗಳು ಮತ್ತು ಇದರಲ್ಲಿ ಚುನಾವಣಾ ಆಯೋಗದ ಪಾಲುದಾರಿಕೆಯ ಬಗ್ಗೆ ಗಮನ ಸೆಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ನಡೆದ ಭಾರೀ ಅಕ್ರಮಗಳನ್ನು ಅವರು ಬೆಳಕಿಗೆ ತಂದರು. ಇಂದು ದೇಶ ಈ ಮತಗಳ್ಳತನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಈ ಸಮಯದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಎಲ್ಲ ಭಿನ್ನಮತಗಳನ್ನು ಮರೆತು ರಾಹುಲ್ ಗಾಂಧಿ ಜೊತೆಗೆ ಗಟ್ಟಿಯಾಗಿ ನಿಲ್ಲಬೇಕಾಗಿದೆ. ಆದರೆ ಸಹಕಾರ ಸಚಿವ ರಾಜಣ್ಣ ಈ ವಿಷಯದಲ್ಲೂ ತನ್ನ ಅಸಹಕಾರವನ್ನು ವ್ಯಕ್ತಪಡಿಸಿದರು. ಅವರು ನೀಡಿದ ಅನಗತ್ಯ ಹೇಳಿಕೆಯನ್ನೇ ಬಳಸಿಕೊಂಡು ಬಿಜೆಪಿಯು ಕಾಂಗ್ರೆಸ್ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ತನ್ನ ಹೇಳಿಕೆಗೆ ರಾಜಣ್ಣ ಅವರು ಸಚಿವ ಸ್ಥಾನವನ್ನೇ ಬಲಿ ಕೊಡಬೇಕಾದ ಸ್ಥಿತಿ ನಿರ್ಮಾಣವಾಯಿತು. ರಾಜಣ್ಣ ಅವರ ಮಾತಿನ ಉದ್ದೇಶ ಬೇರೆಯಿದ್ದರೂ, ಅದು ಈ ಸಂದರ್ಭದಲ್ಲಿ ಬೀರಬಹುದಾದ ವ್ಯತಿರಿಕ್ತ ಪರಿಣಾಮದ ಬಗ್ಗೆ ಅವರಿಗೆ ಅರಿವಿರಲೇ ಬೇಕಾಗಿತ್ತು. ಇಂದು ಚುನಾವಣಾ ಆಯೋಗವನ್ನು ಬಳಸಿಕೊಂಡು ಪ್ರಜಾಸತ್ತೆಯನ್ನೇ ಬುಡಮೇಲು ಮಾಡುವಂತಹ ಪ್ರಯತ್ನವೊಂದು ನಡೆಯುತ್ತಿರುವಾಗ, ರಾಹುಲ್ ಗಾಂಧಿಯ ಹೋರಾಟಕ್ಕೆ ಧ್ವನಿಯಾಗುವುದು ರಾಜ್ಯದ ಸಚಿವರಾಗಿ ಅವರ ಕರ್ತವ್ಯವೂ ಆಗಿತ್ತು. ಆದರೆ, ರಾಜ್ಯದ ಒಳಗಿನ ಭಿನ್ನಮತ, ಅಸಮಾಧಾನಕ್ಕೆ ಈ ಸಂದರ್ಭವನ್ನು ಅವರು ಬಳಸಿಕೊಳ್ಳಲು ಹೊರಟು, ತಾವೇ ತೋಡಿದ ಹೊಂಡಕ್ಕೆ ಬಿದ್ದಿದ್ದು, ಇದೀಗ ಮೇಲೆತ್ತಲು ಬಿಜೆಪಿಯ ನಾಯಕರು ಅವರೆಡೆಗೆ ಕೈ ಚಾಚುವ ಸ್ಥಿತಿ ನಿರ್ಮಾಣವಾಗಿದೆ.

ಸಚಿವ ಸ್ಥಾನದಿಂದ ರಾಜಣ್ಣ ಅವರ ವಜಾದ ಕುರಿತಂತೆ ಉಭಯ ಸದನಗಳಲ್ಲಿ ಬಿಸಿ ಚರ್ಚೆಗಳು ನಡೆದಿವೆ. ರಾಜಣ್ಣ ಅವರ ಪದಚ್ಯುತಿಗೆ ಕಾರಣವನ್ನು ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿಯ ಆರೋಪಗಳಿಗೆ ಪ್ರತಿಯಾಗಿ ರಾಜಣ್ಣ ಅವರ ಹೇಳಿಕೆಯನ್ನು ಗುರಾಣಿಯಾಗಿ ಬಳಸಿದ್ದಾರೆ. ತಮ್ಮ ರಾಜ್ಯಾಧ್ಯಕ್ಷರ ವಿರುದ್ಧ ಹೇಳಿಕೆಗಳನ್ನು ನೀಡಿದರು ಎನ್ನುವ ಕಾರಣಕ್ಕಾಗಿ ಇತ್ತೀಚೆಗಷ್ಟೇ ತಮ್ಮದೇ ಪಕ್ಷದ ಯತ್ನಾಳ್ ಸೇರಿದಂತೆ ಕೆಲವು ನಾಯಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದ ಬಿಜೆಪಿ ನಾಯಕರೇ ಇದೀಗ ರಾಜಣ್ಣ ಅವರ ಪದಚ್ಯುತಿಯನ್ನು ಪ್ರಶ್ನಿಸುವುದು ಹಾಸ್ಯಾಸ್ಪದವಾಗಿದೆ. ‘ಸತ್ಯ ಹೇಳಿದ್ದಕ್ಕಾಗಿ ರಾಜಣ್ಣ ಅವರನ್ನು ಬಲಿ ಪಶು ಮಾಡಲಾಗಿದೆ’ ಎಂದು ಬಿಜೆಪಿ ನಾಯಕರು ಅಲವತ್ತುಕೊಂಡಿದ್ದಾರೆ. ಆದರೆ, ಸತ್ಯ ಹೇಳಿದವರಿಗೆ ಬಿಜೆಪಿಯಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿದೆ. ಸತ್ಯ ಹೇಳಿದ ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಇವರನ್ನೆಲ್ಲ ಕೇಂದ್ರ ಸರಕಾರ ಯಾವ ಸ್ಥಿತಿಗೆ ತಂದಿಟ್ಟಿದೆ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಆದುದರಿಂದ, ರಾಜಣ್ಣ ಅವರಿಗೆ ಬಿಜೆಪಿಯು ಸುರಿಸುತ್ತಿರುವ ಮೊಸಳೆ ಕಣ್ಣೀರು ನಂಬುವುದಕ್ಕೆ ಅರ್ಹವಾದದ್ದು ಅಲ್ಲ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಗಳು ಎದ್ದಿವೆ. ರಾಜಣ್ಣ ಅವರ ಮಾತಿನ ಉದ್ದೇಶ ಹೈಕಮಾಂಡ್ ಆರೋಪಗಳನ್ನು ಪ್ರಶ್ನಿಸುವುದು ಆಗಿರಲಿಲ್ಲ ಎನ್ನುವುದು ಇನ್ನೊಂದು ವಾದ. ಚುನಾವಣಾ ಆಯೋಗ ಮತಗಳ್ಳತನದಲ್ಲಿ ಶಾಮೀಲಾಗಿರುವ ಕುರಿತಂತೆ ದೇಶಾದ್ಯಂತ ಚಳವಳಿಯೊಂದನ್ನು ರಾಹುಲ್‌ಗಾಂಧಿ ರೂಪಿಸುತ್ತಿರುವಾಗ, ಕರ್ನಾಟಕದಲ್ಲಿ ಕೇಳಿ ಬಂದಿರುವ ಆರೋಪಗಳ ಬಗ್ಗೆ ರಾಜಣ್ಣ ಅವರ ಉಡಾಫೆ ಮಾತನ್ನು ‘ಆಂತರಿಕ ಪ್ರಜಾಪ್ರಭುತ್ವ’ದ ಹೆಸರಿನಲ್ಲಿ ಹೈಕಮಾಂಡ್ ಸಹಿಸಬೇಕು ಎಂದು ನಿರೀಕ್ಷಿಸುವುದು, ಹಸಿದ ಬಿಜೆಪಿಗೆ ಆಹಾರ ಒದಗಿಸಿಕೊಟ್ಟ ರಾಜಣ್ಣ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದೆಲ್ಲ ಉಪದೇಶ ನೀಡುವುದು ಸಮಯಸಾಧಕತನವಾಗುತ್ತದೆ. ಆಗಾಗ ಬಿಜೆಪಿಯ ಕಡೆಗೆ ಕಣ್ಣು ಮಿಟುಕಿಸುತ್ತಿರುವ ರಾಜಣ್ಣ ಅವರ ಇತ್ತೀಚಿನ ನಡೆಗಳ ಬಗ್ಗೆ ಪಕ್ಷದೊಳಗೇ ತಕರಾರುಗಳಿವೆ. ಪಕ್ಷದೊಳಗಿನ ಭಿನ್ನಮತಕ್ಕೆ ಸಂಬಂಧಿಸಿ ಈ ಹಿಂದೆ ರಾಜಣ್ಣ ಅವರು ಹಲವು ಬಾರಿ ಧ್ವನಿಯೆತ್ತಿದಾಗ ಪಕ್ಷ ಅವರನ್ನು ಸಹಿಸಿಕೊಂಡಿತ್ತು. ಈ ಬಾರಿ ಅವರು ‘ಚುನಾವಣಾ ಅಕ್ರಮಗಳು ನಡೆಯುತ್ತಿರುವಾಗ ರಾಜ್ಯ ಸರಕಾರ ಏನು ಮಾಡುತ್ತಿತ್ತು?’ ಎಂದು ಕೇಳಿದ್ದಾರೆ. ಮೇಲ್ನೋಟಕ್ಕೆ ಅದು ರಾಜ್ಯದ ಕಾಂಗ್ರೆಸ್‌ನ ನಾಯಕರನ್ನು ಗುರಿಯಾಗಿರಿಸಿಕೊಂಡಿದ್ದರೂ, ಬಾಣ ನೇರವಾಗಿ ಹೈಕಮಾಂಡನ್ನು ಇರಿದುಕೊಂಡು ಹೋಗಿದೆ. ಇಷ್ಟಕ್ಕೂ ರಾಜ್ಯದಲ್ಲಿ ಯಾವ ಸರಕಾರವಿದ್ದರೂ ಚುನಾವಣಾ ಆಯೋಗವನ್ನು ಬಳಸಿಕೊಂಡು ಅಕ್ರಮಗಳನ್ನು ನಡೆಸುವುದು ಕೇಂದ್ರಕ್ಕೆ ಕಷ್ಟವೇನೂ ಇಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಬಿಹಾರ ನಮ್ಮ ಮುಂದಿದೆ. ಬಿಹಾರದಲ್ಲಿ ನಡೆಯುತ್ತಿರುವ ಅಕ್ರಮಗಳ ಭಯಾನಕ ರೂಪವನ್ನು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಬಹಿರಂಗ ಪಡಿಸಲಾಗಿದೆ. ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಇದ್ದದ್ದೇ. ಅದನ್ನು ಯಾವ ಸಮಯ, ಸಂದರ್ಭದಲ್ಲಿ ಹೊರಗೆಡಹಬೇಕು ಎನ್ನುವ ವಿವೇಕ ರಾಜಣ್ಣ ಅವರಂತಹ ಹಿರಿಯ ನಾಯಕರಿಗೆ ಇರಬೇಕಾಗಿತ್ತು. ರಾಹುಲ್‌ಗಾಂಧಿ ಆರೋಪಕ್ಕೆ ನೀಡಿದ ತನ್ನ ಪ್ರತಿಕ್ರಿಯೆಯನ್ನು ಬಿಜೆಪಿ ಬಳಸಿಕೊಳ್ಳಲಿದೆ ಎನ್ನುವ ಪ್ರಜ್ಞೆ ರಾಜಣ್ಣ ಅವರಿಗೆ ಇರಲಿಲ್ಲವೆ? ಅಥವಾ ಬಿಜೆಪಿಗೆ ಸಹಾಯವಾಗಲಿ ಎಂದೇ ಅವರು ಹೇಳಿಕೆ ನೀಡಿದರೆ? ಅದೇನೇ ಇರಲಿ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಇನ್ನೋರ್ವ ಸಚಿವರು ತಮ್ಮ ಬೇಜವಾಬ್ದಾರಿಗೆ ಸ್ಥಾನವನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಖೇದಕರ. ಆದರೆ ಅದಕ್ಕಾಗಿ ಅವರು ತಮ್ಮ ನಾಲಗೆಯನ್ನೇ ದೂಷಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News