×
Ad

ಅಮಾಯಕರ ಸಾವನ್ನು ಸಂಭ್ರಮಿಸಲು ಹೀಗೊಂದು ಅಮೆರಿಕದ ಔತಣ ಕೂಟ

Update: 2025-06-20 06:24 IST

PC: x.com/Politicx

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತವು ಅಲಿಪ್ತ ನೀತಿಯನ್ನು ಪಾಲಿಸುವ ಸಂದರ್ಭದಲ್ಲೂ ಸೋವಿಯತ್ ರಶ್ಯದೊಂದಿಗೆ ಮಾನಸಿಕವಾಗಿ ಹೆಚ್ಚು ಹತ್ತಿರದಲ್ಲಿತ್ತು. ಭಾರತದ ಬಡತನ, ಅಸಮಾನತೆ, ನಿರುದ್ಯೋಗ ಇತ್ಯಾದಿಗಳನ್ನು ನಿವಾರಿಸುವಲ್ಲಿ ಸೋವಿಯತ್ ರಶ್ಯದ ಸಮತಾವಾದ ಭಾರತದ ಪಾಲಿಗೆ ತುರ್ತು ಅಗತ್ಯವಾಗಿತ್ತು. ರಶ್ಯದೊಂದಿಗೆ ಮೈತ್ರಿಯನ್ನು ಕುದುರಿಸಿಕೊಂಡೂ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಸ್ವಂತಿಕೆಯನ್ನು ಉಳಿಸಿಕೊಂಡಿತ್ತು. ತೃತೀಯ ಜಗತ್ತಿನ ನಾಯಕನಾಗಿ ಭಾರತ ಗುರುತಿಸಿಕೊಂಡಿತ್ತು. ಇಂತಹ ಹೊತ್ತಿನಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಹತ್ತಿರವಾಗಿತ್ತಾದರೂ ಭಾರತವನ್ನು ಎಂದಿಗೂ ಅದು ಲಘುವಾಗಿ ಕಂಡಿರಲಿಲ್ಲ. ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿಯಂತಹ ನಾಯಕರ ನೇತೃತ್ವ ವಿಶ್ವದಲ್ಲಿ ಭಾರತಕ್ಕೆ ವರ್ಚಸ್ಸೊಂದನ್ನು ತಂದುಕೊಟ್ಟಿತ್ತು. ಆದರೆ ಇಂದಿನ ಭಾರತ ಅದಾನಿ, ಅಂಬಾನಿಯ ಮೂಗಿನ ನೇರಕ್ಕೆ ಮುನ್ನಡೆಸಲ್ಪಡುತ್ತಿದೆ. ಅವರ ವ್ಯಾಪಾರ ಒಪ್ಪಂದಗಳು ಭಾರತದ ವಿದೇಶಾಂಗ ನೀತಿಯನ್ನು ನಿಯಂತ್ರಿಸುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಭಾರತದ ವಿದೇಶಾಂಗ ನೀತಿ ಸಂಪೂರ್ಣ ಹಳಿ ತಪ್ಪಿದೆ. ಅಮೆರಿಕವನ್ನು ಮೆಚ್ಚಿಸುವುದರಲ್ಲಿ ಭಾರತದ ಭದ್ರತೆ ಅಡಗಿದೆ ಎಂಬಂತೆ ಮೋದಿ ನೇತೃತ್ವದ ಸರಕಾರ ನೀತಿ ರೂಪಿಸುತ್ತಾ ಬಂದಿದೆ. ಈ ಅಮೆರಿಕ ಕೇಂದ್ರಿತವಾದ ವಿದೇಶಾಂಗ ನೀತಿಯ ಫಲವನ್ನು ಭಾರತ ಈಗ ಅನುಭವಿಸುತ್ತಿದೆ. ಪಹಲ್ಗಾಮ್ ದಾಳಿಯ ದಿನಗಳಿಂದ ಟ್ರಂಪ್ ನೇತೃತ್ವದ ಅಮೆರಿಕ ಭಯೋತ್ಪಾದನೆಯ ಬಗ್ಗೆ ತನ್ನ ಅಸಲಿ ನೀತಿಯನ್ನು ಬಹಿರಂಗಪಡಿಸಿದೆ ಮಾತ್ರವಲ್ಲ, ಪಾಕಿಸ್ತಾನವನ್ನು ಬಹಿರಂಗವಾಗಿಯೇ ಸಮರ್ಥಿಸ ತೊಡಗಿದೆ. ಭಾರತಕ್ಕೆ ಸವಾಲು ಹಾಕುವಂತೆ ಅದು ಭಯೋತ್ಪಾದಕರ ಬೆಂಬಲಿಗರ ಜೊತೆಗೆ ಭೋಜನಕೂಟ ನಡೆಸಿದೆ ಮತ್ತು ಆ ಭೋಜನ ಕೂಟದಲ್ಲಿ ಕುಳಿತೇ ವಿಶ್ವಕ್ಕೆ ಭಯೋತ್ಪಾದನೆಯ ಬಗ್ಗೆ ಉಪದೇಶಗಳನ್ನು ನೀಡುವ ಉದ್ಧಟತನವನ್ನು ಪ್ರದರ್ಶಿಸಿದೆ.

ಭಾರತದ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡುತ್ತಿರುವ ಹೇಳಿಕೆಗಳನ್ನು ನೋಡುತ್ತಿದ್ದರೆ ಒಂದೋ ಅಮೆರಿಕ ಭಯೋತ್ಪಾದನೆಯನ್ನು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಿದೆ ಅಥವಾ ಭಾರತವನ್ನು ಹಗುರವಾಗಿ ತೆಗೆದುಕೊಂಡಿದೆ. ಭಾರತದ ಆಳುವವರ ಕುರಿತಂತೆ ಅದಕ್ಕೆ ಅಸಡ್ಡೆ ಮತ್ತು ಹಗುರ ಅಭಿಪ್ರಾಯವಿರುವಂತಿದೆ. ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ತನ್ನ ಮಧ್ಯಸ್ಥಿಕೆ ಕಾರಣ ಎನ್ನುವುದನ್ನು ಅದು ಪುನರುಚ್ಚರಿಸುತ್ತಿದೆ. ಭಾರತ ಸ್ಪಷ್ಟವಾಗಿ ಅದನ್ನು ನಿರಾಕರಿಸಿದಾಗಲೂ ಟ್ರಂಪ್ ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲ ಎಂದು ಭಾರತ ಹೇಳುತ್ತಲೇ ಬರುತ್ತಿದೆಯಾದರೂ, ಅಮೆರಿಕ ಮಧ್ಯಸ್ಥಿಕೆಗೆ ಆಸಕ್ತಿಯನ್ನು ತೋರಿಸುತ್ತಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯದಲ್ಲೂ ಅದು ಪಾಕಿಸ್ತಾನಕ್ಕೆ ಪೂರಕವಾದ ಹೇಳಿಕೆಗಳನ್ನು ನೀಡುತ್ತಿರುವುದು ಕಳವಳಕಾರಿಯಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಕೈಕೋಳಗಳನ್ನು ತೊಡಿಸಿ ಗಡಿಪಾರು ಮಾಡಿರುವುದನ್ನು ಅಮೆರಿಕ ಬಹಿರಂಗವಾಗಿ ಸಮರ್ಥಿಸಿಕೊಂಡಿದೆ ಮಾತ್ರವಲ್ಲ ‘ಮುಂದೆಯೂ ಹಾಗೆಯೇ ಮಾಡುತ್ತೇವೆ...’ ಎಂಬಂತಹ ಹೇಳಿಕೆ ನೀಡಿ ಭಾರತವನ್ನು ಲೇವಡಿ ಮಾಡಿದೆ. ಪಹಲ್ಗಾಮ್‌ನಲ್ಲಿ 25ಕ್ಕೂ ಅಧಿಕ ಅಮಾಯಕರನ್ನು ಭಯೋತ್ಪಾದಕರು ಕೊಂದು ಹಾಕಿದ ಬಳಿಕವಾದರೂ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಪಾಕಿಸ್ತಾನದ ಕುರಿತಂತೆ ಕಠಿಣ ನಿಲುವು ತಳೆಯುತ್ತದೆ ಎಂದು ಭಾರತ ಭಾವಿಸಿತ್ತು. ಆದರೆ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತದ ಪರವಾಗಿ ಅಮೆರಿಕವಾಗಲಿ, ಇನ್ನಿತರ ದೇಶಗಳಾಗಲಿ ನಿಲ್ಲಲಿಲ್ಲ. ಅಮೆರಿಕ ಜಾಗತಿಕ ಭಯೋತ್ಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೆಲ್ಲ ಅದರ ಜೊತೆಗೆ ಬಲವಾಗಿ ನಿಂತಿದ್ದ ಭಾರತದ ಜೊತೆಗೆ ಭಯೋತ್ಪಾದನಾ ಕಾರ್ಯಾಚರಣೆಯಲ್ಲಿ ಉಳಿದ ದೇಶಗಳು ಯಾಕೆ ಕೈ ಜೋಡಿಸುತ್ತಿಲ್ಲ? ಅಂದರೆ ಭಾರತದ ಭಯೋತ್ಪಾದನಾ ಕಾರ್ಯಾಚರಣೆಯ ಬಗ್ಗೆ ಅವುಗಳಿಗೆ ಅನುಮಾನಗಳಿವೆ ಎಂದು ಅರ್ಥವೆ?

ಈ ಅನುಮಾನಗಳನ್ನು ಪರಿಹರಿಸುವುದಕ್ಕಾಗಿಯೇ ಕೇಂದ್ರ ಸರಕಾರ ಇತರ ದೇಶಗಳಿಗೆ ಸರ್ವಪಕ್ಷ ನಿಯೋಗವೊಂದನ್ನು ಕಳುಹಿಸಿತು. ಆದರೆ ನಿಯೋಗ ‘ಎಂಕು ಪಣಂಬೂರಿಗೆ ಹೋದ’ಂತಾಯಿತು. ಇವರು ಹೋದದ್ದು ಯಾಕೆ? ಅಲ್ಲಿ ಇವರು ಸಾಧಿಸಿದ್ದು ಏನು? ಈವರೆಗೆ ದೇಶಕ್ಕೆ ಅರ್ಥವಾಗಿಲ್ಲ. ಇವರು ವಿದೇಶ ಯಾತ್ರೆಯಲ್ಲಿರುವ ಹೊತ್ತಿಗೇ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನವನ್ನು ನೇಮಕ ಮಾಡಲಾಯಿತು. ತಾಲಿಬಾನ್ ನಿರ್ಬಂಧ ಸಮಿತಿಯ 2025ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೂ ಪಾಕಿಸ್ತಾನವನ್ನೇ ನೇಮಿಸಲಾಗಿದೆ. ಇದು ಭಾರತಕ್ಕೆ ಹಿನ್ನಡೆಯಾಗಿದೆ. ಈ ಹಿನ್ನಡೆಯ ಹೊಣೆಯನ್ನು ಕೇಂದ್ರ ಸರಕಾರ ಹೊತ್ತುಕೊಳ್ಳಬೇಕು. ನಿಯೋಗ ಭಾರತಕ್ಕೆ ಮರಳಿದ ಬೆನ್ನಿಗೇ ಪಾಕ್ ಸೇನಾ ವರಿಷ್ಠ ಆಸಿಮ್ ಮುನೀರ್ ಅವರಿಗೆ ಶ್ವೇತ ಭವನದಲ್ಲಿ ಔತಣಕೂಟವನ್ನು ಅಮೆರಿಕ ಏರ್ಪಡಿಸಿತು. ಈ ಔತಣಕೂಟ ಯಾಕಾಗಿ? ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಅಮಾಯಕರನ್ನು ಕೊಂದು ಹಾಕಿದ್ದಕ್ಕಾಗಿಯೇ? ಅಥವಾ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಸಂದರ್ಭದಲ್ಲಿ ಅಮೆರಿಕದ ಮಾತಿಗೆ ತಲೆಬಾಗಿ ಕದನ ವಿರಾಮ ಘೋಷಿಸಿದ್ದಕ್ಕಾಗಿಯೆ? ಪಾಕಿಸ್ತಾನದ ಇಂದಿನ ಅರಾಜಕ ಸ್ಥಿತಿಗೆ ಅಲ್ಲಿನ ಸೇನಾ ಮುಖ್ಯಸ್ಥರ ಪಾತ್ರ ಬಹುದೊಡ್ಡದು. ಪ್ರಜಾಸತ್ತೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಸೇನಾ ಮುಖ್ಯಸ್ಥರೊಂದಿಗೆ ಭೋಜನ ಕೂಟವನ್ನು ನಡೆಸಿದ ಅಮೆರಿಕದ ನಿಲುವು ಭಾರತವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಅಮೆರಿಕವು ಪಾಕಿಸ್ತಾನದ ಸೇನೆಯ ಜೊತೆಗೆ ಯಾಕೆ ಸಂಬಂಧವನ್ನು ವೃದ್ಧಿಸಲು ಹೊರಟಿದೆ ಎನ್ನುವುದು ಗುಟ್ಟಾಗಿಯೇನು ಇಲ್ಲ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಅದಕ್ಕೆ ಪಾಕಿಸ್ತಾನದ ನೆರವಿನ ಅಗತ್ಯವಿದೆ. ಒಂದೆಡೆ ‘ಇರಾನ್‌ನ್ನು ಭಯೋತ್ಪಾದಕ ದೇಶ’ ಎಂದು ಕರೆಯುತ್ತಾ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಇನ್ನೊಂದು ದೇಶದ ಸೇನಾ ಮುಖ್ಯಸ್ಥನೊಂದಿಗೆ ಭೋಜನಕೂಟ ಹಮ್ಮಿಕೊಳ್ಳುವ ಅಮೆರಿಕದ ಭಯೋತ್ಪಾದನಾ ವಿರುದ್ಧದ ಕಾರ್ಯಾಚರಣೆ ಎಷ್ಟು ಅಪಾಯಕಾರಿಯಾದುದು ಎನ್ನುವುದನ್ನು ಭಾರತ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

ತನ್ನ ಹಿತಾಸಕ್ತಿಗಾಗಿ ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನದ ಸೇನಾ ಮುಖ್ಯಸ್ಥನೊಂದಿಗೆ ಭೋಜನಕೂಟಕ್ಕೆ ಅಮೆರಿಕ ಸಿದ್ಧವಿದೆ ಎಂದಾದರೆ, ಇರಾನ್ ವಿರುದ್ಧದ ಯುದ್ಧದಲ್ಲಿ ಭಾರತವೂ ತನ್ನ ಹಿತಾಸಕ್ತಿಯ ಕಡೆಗೆ ಗಮನ ನೀಡಬೇಕು. ಯಾವ ಕಾರಣಕ್ಕೂ ಅಮೆರಿಕದ ತಾಳಕ್ಕೆ ಕುಣಿಯದೆ, ಇರಾನ್‌ನ ಮೇಲಿನ ಏಕಮುಖ ದಾಳಿಯ ವಿರುದ್ಧ ಮಾತನಾಡುವ ಧೈರ್ಯವನ್ನು ತೋರಬೇಕು. ಇರಾನ್ ಭಾರತದ ಮಿತ್ರ ದೇಶ. ಇರಾನ್ ಕ್ಷೇಮವಾಗಿದ್ದರೆ ಭವಿಷ್ಯದಲ್ಲಿ ತೈಲ ಒಪ್ಪಂದಕ್ಕೆ ಸಂಬಂಧಿಸಿ ಹಲವು ಸಾಧ್ಯತೆಗಳು ತೆರೆದುಕೊಳ್ಳಬಹುದು. ಡಾಲರ್ ಕೇಂದ್ರಿತವಾದ ಆರ್ಥಿಕತೆಯ ನಿಯಂತ್ರಣದಿಂದ ಪಾರಾಗಲು ಇರಾನ್‌ನ ಜೊತೆಗಿನ ಮೈತ್ರಿ ಭಾರತಕ್ಕೆ ಅತ್ಯಗತ್ಯವಾಗಿದೆ. ಇರಾನ್ ವಿರುದ್ಧದ ಯುದ್ಧದಲ್ಲಿ ನಿಜಕ್ಕೂ ‘ಭಯೋತ್ಪಾದಕರು ಯಾರು?’ ಎನ್ನುವುದು ವಿಶ್ವಕ್ಕೆ ಸ್ಪಷ್ಟವಾಗಿದೆ. ಅಮೆರಿಕದ ಅವಿವೇಕಿ ನಿಲುವುಗಳ ವಿರುದ್ಧ ಈಗಾಗಲೇ ವಿಶ್ವ ಒಂದಾಗಿ ಮಾತನಾಡುತ್ತಿದೆ. ಈ ಸಂದರ್ಭದಲ್ಲಿ ಭಾರತ ತನ್ನ ಜಾಗ ಎಲ್ಲಿ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಭಯೋತ್ಪಾದನೆಯ ಕುರಿತಂತೆ ಅಮೆರಿಕದ ಸೋಗಲಾಡಿತನವನ್ನು ಅರ್ಥ ಮಾಡಿಕೊಂಡು, ಭಾರತ ಹೆಜ್ಜೆ ಮುಂದಿಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News