ರಾಷ್ಟ್ರಧ್ವಜವನ್ನೇ ಒಪ್ಪದವರು ರಾಷ್ಟ್ರಗೀತೆಯನ್ನು ಒಪ್ಪಲು ಸಾಧ್ಯವೆ?
‘ದೇಶಾದ್ಯಂತ ಆರೆಸ್ಸೆಸ್ ಸಂಘಟನೆಯ ದೇಶವಿರೋಧಿ ಚಟುವಟಿಕೆಗಳು’ ಚರ್ಚೆಯಾಗುತ್ತಿದ್ದು, ಈ ಸಂಘಟನೆಯನ್ನು ಯಾಕೆ ನಿಷೇಧಿಸಬಾರದು? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಕರ್ನಾಟಕದಲ್ಲಂತೂ ಸಾರ್ವಜನಿಕ ಸ್ಥಳಗಳನ್ನು ಆರೆಸ್ಸೆಸ್ ದುರುಪಯೋಗ ಪಡಿಸುತ್ತಿರುವುದರ ವಿರುದ್ಧ ಸರಕಾರ ಆದೇಶವನ್ನು ಹೊರಡಿಸಿದೆ. ಈ ಆದೇಶಕ್ಕೆ ಸಂಬಂಧಿಸಿದ ವಿಚಾರಣೆ ಇದೀಗ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ‘ಆರೆಸ್ಸೆಸನ್ನು ಯಾಕೆ ನಿಷೇಧಿಸಬೇಕು?’ ಎನ್ನುವುದಕ್ಕೆ ಬಿಜೆಪಿಯ ಮುಖಂಡ, ಸಂಸದ ವಿಶ್ವೇಶ್ವರ ಕಾಗೇರಿ ಇನ್ನೊಂದು ಕಾರಣವನ್ನು ನೀಡಿದ್ದಾರೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ಕಾಗೇರಿ, ತನ್ನ ಸಂಘಟನೆ ರಾಷ್ಟ್ರಗೀತೆಯ ಬಗ್ಗೆ ಯಾವ ನಿಲುವನ್ನು ಹೊಂದಿದೆ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ‘ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ’ ಕಾರ್ಯಕ್ರಮವೊಂದರಲ್ಲಿ ಅವರು ರಾಷ್ಟ್ರಗೀತೆಯನ್ನು ಅಪಮಾನಿಸಿ ದೇಶದ ಏಕತೆಯನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ. ‘‘ನಮ್ಮ ರಾಷ್ಟ್ರಗೀತೆಯು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚನೆಯಾಗಿರುವುದು’’ ಎನ್ನುವ ಮೂಲಕ ಅವರು ಗೀತೆಯ ಹಿರಿಮೆ, ಘನತೆಗೆ ಧಕ್ಕೆ ತಂದಿರುವುದು ಮಾತ್ರವಲ್ಲ, ಜನಗಣಮನ ಗೀತೆಯ ಬದಲು ‘ವಂದೇಮಾತರಂ’ ಗೀತೆ ರಾಷ್ಟ್ರಗೀತೆಯಾಗಬೇಕಾಗಿತ್ತು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ಕೇವಲ ಕಾಗೇರಿಯ ಅಭಿಪ್ರಾಯ ಮಾತ್ರವಲ್ಲ, ಮಹಾತ್ಮಾಗಾಂಧೀಜಿಯನ್ನು ಕೊಂದ ಆರೋಪವನ್ನು ಹೊಂದಿರುವ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ನ ನಾಯಕರೂ ಹಿಂದೆ ಇಂತಹದೇ ಹೇಳಿಕೆಯನ್ನು ನೀಡಿದ್ದರು.
ಜನಗಣ ಮನ ರಾಷ್ಟ್ರಗೀತೆಯ ಕುರಿತಂತೆ ಆರೆಸ್ಸೆಸ್ ಮತ್ತು ಸಂಘಪರಿವಾರದ ಆಕ್ಷೇಪ ಇಂದು ನಿನ್ನೆಯದಲ್ಲ. ಈ ಗೀತೆಯು ಬ್ರಿಟಿಷರನ್ನು ಓಲೈಸುವುದಕ್ಕೆ ಬರೆದಿರುವುದು ಎಂಬ ತಪ್ಪು ಮಾಹಿತಿಗಳನ್ನು ದೇಶಾದ್ಯಂತ ಹರಡಿರುವುದು ಮತ್ತು ಹರಡುತ್ತಿರುವುದು ಇದೇ ಸಂಘಟನೆಯ ನಾಯಕರು. ವಂದೇಮಾತರಂ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕಾಗಿತ್ತು ಎನ್ನುವುದು ಇವರ ಒಳ ಹಂಬಲಿಕೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇಮಾತರಂ ಹಾಡನ್ನು ಬಳಸಲಾಗಿದೆ. ಆದುದರಿಂದ, ಈ ಗೀತೆಯನ್ನೇ ರಾಷ್ಟ್ರಗೀತೆಯನ್ನಾಗಿಸಬೇಕು ಎನ್ನುವುದು ಇವರ ವಾದವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವಿಲ್ಲದ ಆರೆಸ್ಸೆಸ್ ನಾಯಕರು ‘ವಂದೇ ಮಾತರಂ’ ಹಾಡಿನ ಬಗ್ಗೆ ಯಾಕೆ ಇಷ್ಟು ಪ್ರೀತಿ ಸುರಿಸುತ್ತಿದ್ದಾರೆ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಬಂಕಿಮ ಚಂದ್ರ ಚಟರ್ಜಿ ವಂದೇಮಾತರಂ ಹಾಡನ್ನು ಬರೆದಾಗ ಅದಕ್ಕೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ಯಾವ ಸಂಬಂಧವೂ ಇರಲಿಲ್ಲ. ‘ಆನಂದ ಮಠ’ ಎನ್ನುವ ಅವರ ಕಾದಂಬರಿಯಲ್ಲಿ ಕೆಲವು ಉಗ್ರವಾದಿ ಸನ್ಯಾಸಿಗಳು ಮುಸ್ಲಿಮ್ ದೊರೆಗಳ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ದುರ್ಗಾದೇವಿಯ ಆರಾಧನೆಯ ಭಾಗವಾಗಿ ಬಳಸಿದ ಹಾಡು ಇದು. ಒಂದು ಕಾಲ್ಪನಿಕ ಕಾದಂಬರಿಯಲ್ಲಿ ಬಳಕೆಯಾದ ಹಾಡು ಇದಾದರೂ, ಇದರ ಮೊದಲ ಸಾಲು ‘ವಂದೇ ಮಾತರಂ’ನ್ನು ಹಲವು ಸ್ವಾತಂತ್ರ್ಯ ಹೋರಾಟಗಾರರು ಘೋಷಣೆಯ ಸಂದರ್ಭದಲ್ಲಿ ಬಳಸಿಕೊಂಡರು. ಸ್ವಾತಂತ್ರ್ಯ ಹೋರಾಟದಲ್ಲಿ ಬರೇ ವಂದೇ ಮಾತರಂ ಘೋಷಣೆ ಮಾತ್ರ ಬಳಕೆಯಾಗಿರುವುದಲ್ಲ. ಭಗತ್ ಸಿಂಗ್ ಮತ್ತು ಅವರ ಸಹವರ್ತಿಗಳು ತಮ್ಮ ‘ಇಂಕ್ವಿಲಾಬ್ ಜಿಂದಾಬಾದ್’ ಎನ್ನುವ ಘೋಷಣೆಯನ್ನು ಬಳಸಿದ್ದರು ಮಾತ್ರವಲ್ಲ, ಈ ಘೋಷಣೆಯ ಜೊತೆಗೇ ನೇಣುಗಂಬ ಏರಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕೇರಳ ಸೇರಿದಂತೆ ದೇಶದ ಸಾವಿರಾರು ಮುಸ್ಲಿಮರು ‘ಅಲ್ಲಾಹು ಅಕ್ಬರ್’ ಘೋಷಣೆಯೊಂದಿಗೆ ಪ್ರಾಣಾರ್ಪಣೆ ಮಾಡಿದ್ದರು. ಸುಭಾಶ್‌ಚಂದ್ರ ಬೋಸರ ಸೇನೆಯ ಘೋಷಣೆ ‘ಜೈ ಹಿಂದ್’ ಎಂದಾಗಿತ್ತು. ಅಲ್ಲಾಮಾ ಇಕ್ಬಾಲ್ ಬರೆದ ‘ಸಾರೆ ಜಹಾಂಸೆ ಅಚ್ಛಾ’ ಕೂಡ ದೇಶಾದ್ಯಂತ ಏಕತೆಯ ಪರಿಮಳವನ್ನು ಬೀರಿತ್ತು. ಆದರೆ ಆರೆಸ್ಸೆಸ್‌ಗೆ ಮತ್ತು ಅದರ ಮುಖಂಡರಿಗೆ ‘ವಂದೇ ಮಾತರಂ’ ಗೀತೆ ಬೇಕಾಗಿರುವುದು ಈ ದೇಶವನ್ನು ಒಂದಾಗಿ ಬೆಸೆಯುವುದಕ್ಕಲ್ಲ. ಚಟರ್ಜಿ ಅವರ ಕಾಲ್ಪನಿಕ ಕಾದಂಬರಿಯಲ್ಲಿ ಈ ಗೀತೆ ಮುಸ್ಲಿಮರ ವಿರುದ್ಧದ ಹೋರಾಟದ ಭಾಗವಾಗಿ ಬಳಕೆಯಾಗಿರುವುದರಿಂದ ಅವರಿಗೆ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವುದಕ್ಕೆ ‘ವಂದೇ ಮಾತರಂ’ ಬೇಕಾಗಿದೆ. ವಾಸ್ತವದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟಕ್ಕೂ ಈ ಗೀತೆಗೂ ಯಾವ ಸಂಬಂಧವೂ ಇಲ್ಲ.
‘ಜನಗಣಮನ’ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಸಲು ಹಲವು ಕಾರಣಗಳಿವೆ. ಇದನ್ನು ಬರೆದವರು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರ ನಾಥ ಟಾಗೋರ್. ಸುಧಾರಣಾವಾದಿಯಾಗಿರುವ ಟಾಗೋರ್ ಚಿಂತನೆ ಬ್ರಹ್ಮಸಮಾಜದ ತತ್ವದೊಂದಿಗೆ ಬೆಸೆದುಕೊಂಡಿತ್ತು. ಭಾರತದ ಕಂದಾಚಾರ, ಪುರೋಹಿತ ಶಾಹಿ ವ್ಯವಸ್ಥೆ, ಜಾತೀಯತೆಯ ವಿರುದ್ಧ ಈ ಸಮಾಜ ಆಗಲೇ ಧ್ವನಿಯೆತ್ತಿತ್ತು. ಡಿಸೆಂಬರ್ 27, 1911ರಲ್ಲಿ ಕೋಲ್ಕತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಠಾಗೋರ್ ಜನಗಣ ಹಾಡನ್ನು ಮೊದಲಬಾರಿಗೆ ಪ್ರಸ್ತುತ ಪಡಿಸಿದರು. ಬಳಿಕ, ಬ್ರಹ್ಮಸಮಾಜದ ಜರ್ನಲ್ ತತ್ವ ಬೋಧಿನಿ ಪತ್ರಿಕೆಯಲ್ಲಿ ಇದು ಪ್ರಕಟವಾಯಿತು. ಇದು ಬ್ರಿಟಿಷರನ್ನು ಓಲೈಸಲು ಬರೆದಿರುವ ಹಾಡು ಎಂದು ಆಗ ಕೆಲವು ಬಲಪಂಥೀಯ ನಾಯಕರು ಆರೋಪಿಸಿದಾಗ, ಟಾಗೋರ್ ಸಾರಾಸಗಟಾಗಿ ನಿರಾಕರಿಸಿದ್ದರು. ನಿಜಕ್ಕೂ ಇದು ಬ್ರಿಟಿಷರನ್ನು ಓಲೈಸಲು ಬರೆದ ಪದ್ಯವೇ ಆಗಿದ್ದರೆ, ಬ್ರಿಟಿಷರ ವಿರುದ್ಧ ಸೇನೆಯನ್ನು ಕಟ್ಟಿದ್ದ ಸುಭಾಶ್ ಚಂದ್ರ ಬೋಸರು ಬಳಸಲು ಸಾಧ್ಯವೆ? 1941ರಲ್ಲಿ ಸುಭಾಶ್‌ಚಂದ್ರ ಬೋಸರು ತಮ್ಮ ರಾಷ್ಟ್ರೀಯ ಸೇನೆಯ ಗೀತೆಯಾಗಿ ಜನಗಣಮನವನ್ನು ಆಯ್ಕೆ ಮಾಡಿದ್ದರು. ಜನಗಣ ಬರೆದ ರವೀಂದ್ರನಾಥ ಟಾಗೋರರು ‘ಜಲಿಯನ್ ವಾಲಾಬಾಗ್’ ಹತ್ಯಾಕಾಂಡ ನಡೆದಾಗ ಅದನ್ನು ತೀವ್ರವಾಗಿ ಖಂಡಿಸಿದವರು ಮಾತ್ರವಲ್ಲ, ಬ್ರಿಟಿಷರು ತನಗೆ ನೀಡಿದ ನೈಟ್ ಹುಡ್ ಪದವಿಯನ್ನ್ನೂ ಮರಳಿಸಿದ್ದರು. ಆದರೆ ಕಾಗೇರಿಯವರ ಪಾಲಿಗೆ ಪ್ರಾತಃಸ್ಮರಣೀಯರಾಗಿರುವ ವಿನಾಯಕ ದಾಮೋದರ ಸಾವರ್ಕರ್ ಬ್ರಿಟಷರ ಜೊತೆಗೆ ಕ್ಷಮೆಯಾಚನೆ ಮಾಡಿದ್ದರು ಮಾತ್ರವಲ್ಲ, ಬ್ರಿಟಿಷರು ನೀಡಿದ 50 ರೂಪಾಯಿ ಮಾಸಾಶನವನ್ನು ಯಾವ ಲಜ್ಜೆಯೂ ಇಲ್ಲದೆ ಸ್ವೀಕರಿಸಿದವರು.
ಆರೆಸ್ಸೆಸ್ ರಾಷ್ಟ್ರಗೀತೆಯ ಜೊತೆಗೆ ಮಾತ್ರವಲ್ಲ, ರಾಷ್ಟ್ರಧ್ವಜದ ಜೊತೆಗೂ ಅಸಮ್ಮತಿಯನ್ನು ಹೊಂದಿದೆ. ತಮ್ಮದೇ ಮುಖ್ಯ ಕಚೇರಿಯಲ್ಲಿ ಇತ್ತೀಚಿನವರೆಗೂ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. 2001, ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು ನಾಗಪುರದಲ್ಲಿರುವ ಮುಖ್ಯ ಕಚೇರಿಗೆ ನುಗ್ಗಿ ಬಲವಂತವಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ಈ ಯುವಕರ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ ಆರೆಸ್ಸೆಸ್ ಸುಮಾರು 12 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡಿಸಿತು. ಸಂಘಪರಿವಾರದ ಭಾಗವಾಗಿರುವ ಹಿಂದೂ ಸೇನೆ ಎನ್ನುವ ಸಂಘಟನೆ 2019ರಲ್ಲಿ ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರ 118ನೇ ಪುಣ್ಯತಿಥಿಯನ್ನು ಆಚರಿಸಿ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ‘ಬಿಡಿ ಬಿಡಿಯಾಗಿದ್ದ ದೇಶವನ್ನು ಒಂದಾಗಿಸಿದ ಕಾರಣಕ್ಕಾಗಿ ನಾವು ವಿಕ್ಟೋರಿಯಾ ಅವರನ್ನು ಸ್ಮರಿಸಿದ್ದೇವೆ’ ಎಂದು ಈ ಹಿಂದೂ ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜೀತ್ ಯಾದವ್ ಮಾಧ್ಯಮಗಳಲ್ಲಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂದೂ ಮಹಾ ಸಭಾವಾಗಲಿ, ಆರೆಸ್ಸೆಸ್ ಆಗಲಿ ಭಾಗವಹಿಸದೇ ಯಾಕೆ ಗುಟ್ಟಾಗಿ ಬ್ರಿಟಿಷರ ಪರವಾಗಿ ನಿಂತಿತ್ತು ಎನ್ನುವುದಕ್ಕೆ ಅವರ ಹೇಳಿಕೆಯಲ್ಲೇ ಉತ್ತರವಿದೆ. ಇಂತಹ ಸಂಘಟನೆಗಳ ತತ್ವ, ಸಿದ್ಧಾಂತದ ಮೂಲಕ ರಾಜಕೀಯ ನಾಯಕರಾಗಿ ಬೆಳೆದು ಬಂದಿರುವ ಕಾಗೇರಿಗೆ, ರಾಷ್ಟ್ರಗೀತೆಯಲ್ಲಿ ರಾಷ್ಟ್ರದ್ರೋಹದ ಅಂಶಗಳು ಕಾಣುತ್ತಿರುವುದು ಸಹಜವೇ ಆಗಿದೆ.