×
Ad

ದೇವನಹಳ್ಳಿ ಗೆಲುವು: ಎಷ್ಟು ದಿನದ ಸಂಭ್ರಮ?

Update: 2025-07-17 07:17 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮುಂದೆ ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವುದಕ್ಕೆ ಹೊರತಾದ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ, ಅಧಿಕಾರಕ್ಕೆ ಬರುವ ಮುನ್ನವೇ, ಪ್ರತಿಭಟನಾ ನಿರತ ರೈತರ ಜೊತೆಗೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಗುರುತಿಸಿಕೊಂಡಿದ್ದರು. ಈ ಹಿಂದಿನ ಬಿಜೆಪಿ ಸರಕಾರ ಭೂಸ್ವಾಧೀನಕ್ಕೆ ಸಿದ್ಧತೆ ನಡೆಸಿದಾಗ, ಬೀದಿಗಿಳಿದ ರೈತರ ಜೊತೆಗೆ ಅಂದಿನ ಕಾಂಗ್ರೆಸ್ ನಿಂತಿತ್ತು. ಬಿಜೆಪಿ ಸರಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹೋರಾಟ ನಿರತ ರೈತರ ಪಾಲಿಗೆ ಬೆಳಕಿನ ಕಿರಣ ಕಾಣಿಸಿಕೊಂಡಿತು. ಕಾಂಗ್ರೆಸ್ ಸರಕಾರ ರಚನೆಯಾದಾಕ್ಷಣ ಸ್ವಾಧೀನ ಪ್ರಕ್ರಿಯೆಯನ್ನು ರದ್ದಾಗುತ್ತದೆ ಎಂದು ರೈತರು ಭಾವಿಸಿದ್ದರು. ಆದರೆ, ಸರಕಾರ ರೈತರ ನಿಲುವುಗಳ ಗಟ್ಟಿತನವನ್ನು ಕೊನೆಯವರೆಗೂ ಪರೀಕ್ಷಿಸಿತು. ಪ್ರತಿಭಟನೆ ಒಂದು ಸಾವಿರ ದಿನವನ್ನು ತಲುಪಿದಾಗ ರೈತರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ಭೂಸ್ವಾಧೀನ ಮರು ಪರಿಶೀಲಿಸುವ ಬಗ್ಗೆ ಭರವಸೆಯನ್ನೂ ನೀಡಿದ್ದರು. ಕರ್ನಾಟಕ ಕಂಡ ಸುದೀರ್ಘ ರೈತ ಹೋರಾಟ ಇದು. ಅಧಿಕಾರ ವರ್ಗದ ಯಾವುದೇ ಬೆದರಿಕೆಗಳಿಗೂ ಜಗ್ಗದೆ, ಮಳೆ ಚಳಿಗೆ ಹಿಂಜರಿಯದೆ ಸುಮಾರು ಒಂದು ಸಾವಿರಕ್ಕೂ ಅಧಿಕ ದಿನಗಳ ಕಾಲ ಪ್ರತಿಭಟನೆಯನ್ನು ಜೀವಂತವಿಟ್ಟ ರೈತರ ಛಲಕ್ಕೆ ಇದೀಗ ಗೆಲುವು ಸಿಕ್ಕಿದೆ. ಸರಕಾರದ ಬೆದರಿಕೆಗಾಗಲಿ, ಓಲೈಕೆಗಾಗಲಿ ಹೋರಾಟ ಒಂದಿಷ್ಟು ದುರ್ಬಲಗೊಂಡಿದ್ದರೂ ಇಂದು ರಾಜ್ಯ ಸರಕಾರ ಇಂತಹದೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕಾನೂನು ತೊಡಕನ್ನು ಮುಂದೊಡ್ಡಿ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಚೆಲ್ಲಿದ್ದರು. ಆದರೆ ಯಾವಾಗ ಪ್ರತಿಭಟನೆಯಲ್ಲಿ ರಾಷ್ಟ್ರಮಟ್ಟದ ನಾಯಕರು ಭಾಗವಹಿಸುವ ಸೂಚನೆಗಳು ದೊರಕಿದವೋ ಆಗ, ಹಿಂದಕ್ಕೆ ಹೆಜ್ಜೆಯಿಡುವುದು ಸರಕಾರಕ್ಕೆ ಅನಿವಾರ್ಯವಾಯಿತು. ಕೊನೆಗೂ ಸಿದ್ದರಾಮಯ್ಯ ತಾವು ನೀಡಿದ ಭರವಸೆಗೆ ಬದ್ಧರಾಗಬೇಕಾಯಿತು.

ರೈತರ ಸಂಘಟಿತ ಹೋರಾಟಕ್ಕೆ ಸ್ಪಂದಿಸಿದ ಸರಕಾರವನ್ನು ಅಭಿನಂದಿಸುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ರೈತರ ಬಗ್ಗೆ ಸಣ್ಣದೊಂದು ಆತ್ಮವಿಮರ್ಶೆಯನ್ನು ಹೊಂದಿರುವ ಸರಕಾರವಿದ್ದಾಗ ಮಾತ್ರ ಹೋರಾಟ ಗುರಿ ತಲುಪಲು ಸಾಧ್ಯ. ಬಿಜೆಪಿ ಸರಕಾರವಿದ್ದಾಗ ಈ ಪ್ರತಿಭಟನೆ ಯಾಕೆ ಯಶಸ್ವಿಯಾಗಲಿಲ್ಲ ಎನ್ನುವುದನ್ನು ಈ ದೃಷ್ಟಿಯಿಂದ ನಾವು ನೋಡಬೇಕು. ಭೂಸ್ವಾಧೀನಕ್ಕೆ ಬಿಜೆಪಿ ಸರಕಾರ ನಿರ್ಧರಿಸಿದಾಗ ಅದರ ವಿರುದ್ಧ ರೈತರು ಸಂಘಟಿತವಾದರೂ, ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ನಿಷ್ಕರುಣಿಯಾದರು. ಇತ್ತೀಚಿನ ದಿನಗಳಲ್ಲಿ ಮೋದಿ ನೇತೃತ್ವದ ಸರಕಾರ ಎಲ್ಲ ರೀತಿಯ ಜನಪರ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸುವಲ್ಲಿ ಯಶಸ್ವಿಯಾಗುತ್ತಿದೆ. ಕಾರ್ಪೊರೇಟ್ ಪರವಾಗಿರುವ ನೀತಿಯನ್ನು ಜಾರಿಗೊಳಿಸುವುದಕ್ಕಾಗಿಯೇ ಸರಕಾರಗಳು ಅಸ್ತಿತ್ವದಲ್ಲಿರುವುದು ಎಂದು ಕೇಂದ್ರ ಸರಕಾರ ಭಾವಿಸಿದೆ. ಈ ಹೊತ್ತಿನಲ್ಲಿ, ಈ ನಾಡಿನ ರೈತರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಳದಲ್ಲಿ ಮೃದುವಾಗಿದ್ದುದು ಪ್ರತಿಭಟನೆ ಯಶಸ್ವಿಯಾಗಲು ಕಾರಣವಾಯಿತು. ಇಲ್ಲವಾದರೆ ಇದು ಸರಕಾರ-ರೈತರ ನಡುವಿನ ಹಿಂಸಾತ್ಮಕ ಸಂಘರ್ಷದಲ್ಲಿ ಕೊನೆಯಾಗುತ್ತಿತ್ತು. ವಿರೋಧ ಪಕ್ಷವಂತೂ ರೈತರ ಪರವಾಗಿ ಯಾವುದೇ ಹೇಳಿಕೆಯನ್ನು ಈವರೆಗೆ ನೀಡಿರಲಿಲ್ಲ. ದಲಿತ, ರೈತ, ಕಾರ್ಮಿಕ ಸಂಘಟನೆಗಳು ಈ ಹಿಂದಿನಂತೆ ಈಗ ಬಲಿಷ್ಠವಾಗಿಲ್ಲ. ರೈತರೊಳಗೆ ಭಿನ್ನಮತವನ್ನು ಸೃಷ್ಟಿಸಿ ಪ್ರತಿಭಟನೆಯನ್ನು ದಮನಿಸುವ ಪ್ರಯತ್ನ ಕೂಡ ಈ ನಡುವೆ ನಡೆಯಿತು. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ಒಂದು ಸರಕಾರ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಆಳದಲ್ಲಿ ಅದು ರೈತರ ಕುರಿತಂತೆ ಅಂತಃಕರಣವನ್ನು ಹೊಂದಿರಬೇಕು. ಆದುದರಿಂದ ರೈತರ ಈ ಗೆಲುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಒಂದು ಸಣ್ಣ ಪಾಲು ಇದೆ ಎನ್ನುವುದನ್ನು ಮರೆಯಬಾರದು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ರೈತ ಹೋರಾಟದ ವಿರುದ್ಧ ತುಟಿ ಬಿಚ್ಚಲಿಲ್ಲ. ಅವರು ಕೊನೆಯವರೆಗೂ ಭೂಸ್ವಾಧೀನದ ಪರವಾಗಿದ್ದರು. ಕನಿಷ್ಠ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡುವ ನಿಟ್ಟಿನಲ್ಲಾದರೂ ಪ್ರತಿಭಟನಾಕಾರರ ಜೊತೆಗೆ ಕೈಜೋಡಿಸುತ್ತಾರೆಯೇ ಎಂದರೆ ಅದನ್ನೂ ಮಾಡಲಿಲ್ಲ. ಹಸಿರು, ನೀಲಿ ಮತ್ತು ಕೆಂಪು ಬಣ್ಣಗಳಷ್ಟೇ ಮುಂಚೂಣಿಯಲ್ಲಿದ್ದವು. ಹಿಂದೂಗಳ ಹೆಸರಿನಲ್ಲಿ ಕೇಸರಿ ಬಾವುಟವನ್ನು ಹಾರಿಸುವ ಯಾರೂ ರೈತರ ಅಳಲಿಗೆ ಕಿವಿಯಾಗಲಿಲ್ಲ. ವಕ್ಫ್‌ನಿಂದ ಒತ್ತುವರಿ ನಡೆಯುತ್ತಿದೆ ಎಂದು ರೈತರ ಹೆಸರಿನಲ್ಲಿ ಗದ್ದಲ ಎಬ್ಬಿಸಿದವರಿಗೆ ದೇವನಹಳ್ಳಿ ರೈತರ ಭೂಸ್ವಾಧೀನದ ಪರವಾಗಿ ಧ್ವನಿಯೆತ್ತಬೇಕು ಎಂದು ಅನ್ನಿಸಲೇ ಇಲ್ಲ. ರೈತರ ಕುರಿತಂತೆ ಕೇಸರಿ ಬಾವುಟದ ಅಸಲಿಯತ್ತೂ ಈ ಸಂದರ್ಭದಲ್ಲಿ ಬಟಾ ಬಯಲಾಗಿದೆ.

ಇದೇ ಸಂದರ್ಭದಲ್ಲಿ ಇನ್ನೊಂದು ಮುಖ್ಯ ಅಂಶವನ್ನು ಗಮನಿಸಬೇಕು. ಸರಕಾರ ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದಿದೆಯೇ ಹೊರತು, ಭವಿಷ್ಯದಲ್ಲಿ ಬೇರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದಿಲ್ಲ ಎನ್ನುವ ಭರವಸೆಯನ್ನೇನೂ ನೀಡಿಲ್ಲ. ಸರಕಾರ ರೈತರ ಹಿತ ದೃಷ್ಟಿಗೆ ಪೂರಕವಾದ ಪರ್ಯಾಯ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿಲ್ಲ. ಸದ್ಯದ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ಇಂತಹದೊಂದು ಭರವಸೆಯನ್ನು ಕಾಂಗ್ರೆಸ್ ಸರಕಾರದಿಂದ ನಿರೀಕ್ಷಿಸುವುದು ಕೂಡ ದುಬಾರಿಯಾಗುತ್ತದೆ. ಕನಿಷ್ಠ ಸಮೃದ್ಧ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಸರಕಾರ ಬಹುಸಂಖ್ಯಾತ ಕೃಷಿಕರ ಅಭಿಪ್ರಾಯಕ್ಕೆ ಮನ್ನಣೆಕೊಡಬೇಕು. ಅವರ ಹಿತಾಸಕ್ತಿಗೆ ವಿರುದ್ಧವಾಗಿ ಬಲವಂತದಿಂದ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಎನ್ನುವುದು ನಾಡಿನ ರೈತಪರ ಮನಸ್ಸಿನ ಮೊದಲ ಕನಿಷ್ಠ ಅಪೇಕ್ಷೆಯಾಗಿದೆ. ಇದೇ ಸಂದರ್ಭದಲ್ಲಿ, ಸರಕಾರ ಫಲಭರಿತವಾದ ಕೃಷಿ ಭೂಮಿಯನ್ನು ಸರ್ವಾಧಿಕಾರಿ ಮನೋಭಾವದಿಂದ ವಶಪಡಿಸಲು ಮುಂದಾದಾಗ ನಾಡಿನ ಎಲ್ಲ ರೈತರು ಒಂದಾಗಿ ಪ್ರತಿಭಟನೆ ನಡೆಸಲು ದೇವನಹಳ್ಳಿ ಹೋರಾಟ ಸ್ಫೂರ್ತಿಯಾಗಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇವನ ಹಳ್ಳಿಯ ಕೃಷಿ ಭೂಮಿಯನ್ನು ಸ್ವಯಂ ಮಾರಾಟ ಮಾಡಲು ಸಿದ್ಧವಿರುವ ರೈತರಿಗೆ ಅತ್ಯುತ್ತಮ ಪರಿಹಾರವನ್ನು ನೀಡಿ ಅದನ್ನು ಕೊಂಡುಕೊಳ್ಳಲು ಸಿದ್ಧ ಎಂದು ಸರಕಾರ ಆಮಿಷವನ್ನು ಒಡ್ಡಿದೆ. ಇದು ಎಷ್ಟರಮಟ್ಟಿಗೆ ಸರಿ? ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಯಾಕೆಂದರೆ, ಕೃಷಿ ಭೂಮಿಯನ್ನು ಹೊಂದಿದ ರೈತರು ಅದನ್ನು ಯಶಸ್ವಿಯಾಗಿ ಮುನ್ನಡೆಸಲು ಬೇಕಾದ ವಾತಾವರಣ ಇಂದು ಇಲ್ಲದೇ ಇರುವಾಗ ಅವರ ಅಸಹಾಯಕತೆಯನ್ನು ಕಾರ್ಪೊರೇಟ್ ಶಕ್ತಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತವೆ. ಅತ್ಯುತ್ತಮ ಪರಿಹಾರ ಸಿಗುತ್ತದೆ ಎಂದಾಗ ರೈತರು ಭೂಮಿಯನ್ನು ಸ್ವಯಂ ಒಪ್ಪಿಸಿದರೆ ಆಗ ಯಾರು ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು? ಎನ್ನುವ ಪ್ರಶ್ನೆ ಏಳುತ್ತದೆ. ನಿಜಕ್ಕೂ ಇಂತಹದೊಂದು ಸ್ಥಿತಿ ನಿರ್ಮಾಣವಾದಾಗ ಏನು ಮಾಡಬೇಕು ? ಎನ್ನುವ ದೊಡ್ಡ ಸವಾಲು ಸಂಘಟನೆಗಳ ಮುಂದಿದೆ. ಹೆಚ್ಚಿನ ಪರಿಹಾರಕ್ಕಾಗಿ ರೈತರೇ ಸ್ವಯಂ ತಮ್ಮ ಭೂಮಿಯನ್ನು ನೀಡಲು ಮುಂದಾದರೆ ಆಗ ದೇವನಹಳ್ಳಿಯನ್ನು ಕಾಪಾಡುವವರು ಯಾರು? ಕಾರ್ಪೊರೇಟ್ ಶಕ್ತಿಗಳು ಸೋಲೊಪ್ಪಿಕೊಂಡಿಲ್ಲ. ಒಂದು ತಂತ್ರ ವಿಫಲವಾದಾಗ ಇನ್ನೊಂದು ತಂತ್ರದ ಜೊತೆಗೆ ಅವು ಮತ್ತೆ ಬರುತ್ತವೆ. ಆದುದರಿಂದ, ರೈತ ಹೋರಾಟದ ಈ ವಿಜಯದ ಸಂಭ್ರಮ ದೀರ್ಘ ಕಾಲದ್ದಲ್ಲ ಎನ್ನುವ ವಾಸ್ತವವನ್ನೂ ರೈತ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News