×
Ad

ಸೆಗಣಿಯನ್ನೂ ತಿಂದ, ದಂಡವನ್ನೂ ಕಟ್ಟಿದ!

Update: 2025-10-01 09:05 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಸೆಗಣಿಯನ್ನೂ ತಿಂದ, ದಂಡವನ್ನೂ ಕಟ್ಟಿದ’ ಎನ್ನುವಂತಾಗಿದೆ ಭಾರತದ ಕ್ರಿಕೆಟ್ ಆಟಗಾರರ ಸ್ಥಿತಿ. ಏಶ್ಯ ಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದಕ್ಕೆ ತೀರ್ಮಾನಿಸಿರುವುದೇ ‘ಸೆಗಣಿ ತಿನ್ನುವ ಕೆಲಸ’ವಾಗಿತ್ತು. ಪಾಕಿಸ್ತಾನದ ಕುಮ್ಮಕ್ಕಿನಿಂದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದು ಹಾಕಿದರು. ಇದಾದ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ಅನಿವಾರ್ಯವಾಗಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಬೇಕಾಯಿತು. ಈ ಸಂಘರ್ಷಕ್ಕಾಗಿ ನಮ್ಮ ಸೈನಿಕರು ಸಾಕಷ್ಟು ಬಲಿದಾನಗಳನ್ನು ಮಾಡಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಸೇನೆ ಕಲಿಸಿತಾದರೂ ಈ ಸಂದರ್ಭದಲ್ಲಿ ಭಾರತಕ್ಕೂ ಸಾಕಷ್ಟು ನಷ್ಟಗಳುಂಟಾಗಿವೆ. ಪಾಕಿಸ್ತಾನ ಎಸಗಿದ ದ್ರೋಹಕ್ಕಾಗಿ ಭಾರತ ‘ಸಿಂಧೂ ನದಿ ನೀರು ಒಪ್ಪಂದ’ವನ್ನು ರದ್ದುಗೊಳಿಸಿತು. ‘ನೀರು ಮತ್ತು ರಕ್ತ ಜೊತೆಯಾಗಿ ಹರಿಯುವುದಿಲ್ಲ’ ಎಂದು ಪ್ರಧಾನಿ ಮೋದಿಯವರು ಘೋಷಣೆ ಮಾಡಿದರು. ರಫ್ತು, ಆಮದುಗಳ ಮೇಲೂ ನಿಷೇಧ ಹೇರಲಾಯಿತು. ಈ ನಿಷೇಧ, ರದ್ದುಗಳೆನ್ನುವ ಪರೋಕ್ಷ ಯುದ್ಧದಿಂದ ಉಭಯ ದೇಶದ ವ್ಯಾಪಾರಿಗಳು, ರೈತರು ಈಗಲೂ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕಠಿಣ ನಿಲುವನ್ನು ತಳೆಯುವವರೆಗೆ ಯಾವುದೇ ಸೌಹಾರ್ದ ಸಂಬಂಧಗಳನ್ನು ಮುಂದುವರಿಸಲಾಗುವುದಿಲ್ಲ ಎಂದು ಭಾರತ ಸ್ಪಷ್ಟವಾಗಿ ಘೋಷಿಸಿತ್ತು. ಆದರೆ ಇವುಗಳ ನಡುವೆಯೇ ಪಹಲ್ಗಾಮ್ ರಕ್ತದ ಜೊತೆಗೇ ಭಾರತ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಪಂದ್ಯವನ್ನು ಹಮ್ಮಿಕೊಂಡಿತು.

ರೈತರಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಅನ್ವಯವಾಗುವ ‘ನಿಷೇಧ’ ಕ್ರಿಕೆಟ್‌ಗೆ ಯಾಕೆ ಅನ್ವಯವಾಗುವುದಿಲ್ಲ? ಭಾರತೀಯರ ರಕ್ತದ ಜೊತೆಗೆ ನೀರು ಹರಿಸಲು ಸಾಧ್ಯವಿಲ್ಲವಾದರೆ, ಕ್ರಿಕೆಟ್ ಆಡಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ದೇಶಾದ್ಯಂತ ಜನರು ಕೇಳ ತೊಡಗಿದರು. ಆಪರೇಷನ್ ಸಿಂಧೂರದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ವೈಮನಸ್ಯ ತೀವ್ರವಾಗಿರುವುದರಿಂದ, ಉಭಯ ದೇಶಗಳ ನಡುವಿನ ಕ್ರಿಕೆಟ್‌ಗೆ ಯುದ್ಧದ ರೋಚಕತೆ ಬರುತ್ತದೆ ಮತ್ತು ಹೆಚ್ಚು ಹಣವನ್ನು ದೋಚಬಹುದು ಎನ್ನುವ ದುರಾಸೆಗಾಗಿ ಈ ಪಂದ್ಯವನ್ನು ಹಮ್ಮಿಕೊಳ್ಳಲಾಗಿತ್ತು ಎನ್ನುವುದು ಜನರಿಗೂ ಸ್ಪಷ್ಟವಾಗಿತ್ತು. ಮೊದಲ ಬಾರಿಗೆ ಭಾರತೀಯರು ‘ಕ್ರಿಕೆಟ್ ಪಂದ್ಯ’ದ ಕುರಿತಂತೆ ಜಿಗುಪ್ಸೆಯನ್ನು ವ್ಯಕ್ತಪಡಿಸಿದರು. ಸರಕಾರ ತನ್ನ ಮಾನ ಉಳಿಸಿಕೊಳ್ಳುವುದಕ್ಕಾಗಿ ‘ಕ್ರೀಡಾ ಸ್ಫೂರ್ತಿ’ಯನ್ನು ಸಮರ್ಥನೆಯಾಗಿ ಬಳಸಿಕೊಂಡಿತು. ‘ಕ್ರಿಕೆಟ್ ಎಂಬುದು ಒಂದು ಭಾವನಾತ್ಮಕತೆಯಾಗಿದೆ. ಅದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ’ ಎಂದ ಸರಕಾರ, ಆಪರೇಷನ್ ಸಿಂಧೂರ ಮತ್ತು ಕ್ರಿಕೆಟ್ ಎರಡೂ ಬೇರೆ ಬೇರೆಯಾದುದು ಎಂದು ಹೇಳಿಕೊಂಡಿತು. ಇದೀಗ ನೋಡಿದರೆ, ಕ್ರೀಡಾ ಸ್ಫೂರ್ತಿಗೂ ಈ ಏಶ್ಯ ಕಪ್ ಟೂರ್ನಿಯ ಫೈನಲ್ ಕಳಂಕ ತಂದಿದೆ. ರಾಜಕೀಯದ ಜೊತೆಗೆ ಕ್ರೀಡೆಯನ್ನು ಬೆರೆಸಬಾರದು ಎಂದು ಸಮರ್ಥನೆ ನೀಡಿ ಕ್ರಿಕೆಟ್ ಪಂದ್ಯವನ್ನು ಆಡಿಸಿದವರೇ ಇದೀಗ, ತಮ್ಮ ಮುಖ ಉಳಿಸಿಕೊಳ್ಳಲು ಹೊಸ ವರಸೆಯನ್ನು ಪ್ರದರ್ಶಿಸಿದ್ದಾರೆ. ಆರಂಭದಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಕೈಕುಲುಕಿಲ್ಲ ಎನ್ನುವುದನ್ನೇ ತಮ್ಮ ದೇಶಪ್ರೇಮದ ಹೆಗ್ಗಳಿಕೆಯೆಂದು ಬಿಂಬಿಸಿಕೊಂಡ ಬಿಸಿಸಿಐ ಇದೀಗ, ಪಾಕಿಸ್ತಾನದ ಸಚಿವ ಮುಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿ ಪಾಕಿಸ್ತಾನದೊಂದಿಗೆ ಆಡಿದ ಪಾಪಪ್ರಜ್ಞೆಯಿಂದ ಮುಕ್ತವಾಗಲು ಪ್ರಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ಈ ಪಂದ್ಯದಿಂದ ಗಳಿಸಿದ ಕೋಟ್ಯಂತರ ರೂಪಾಯಿಯನ್ನು ಬಿಸಿಸಿಐ ನಿರಾಕರಿಸುತ್ತದೆಯೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯೂ ಈವರೆಗೆ ಬಂದಿಲ್ಲ.

ಪಂದ್ಯದ ನೇತೃತ್ವವನ್ನು ವಹಿಸಿರುವುದೇ ಏಶ್ಯನ್ ಕ್ರಿಕೆಟ್ ಕೌನ್ಸಿಲ್. ಇದರ ಅಧ್ಯಕ್ಷ ಪಾಕಿಸ್ತಾನದ ಸಚಿವ ಮುಹ್ಸಿನ್ ನಖ್ವಿ ಅವರು. ಇಷ್ಟು ಗೊತ್ತಿದ್ದೂ ಟೀಮ್ ಇಂಡಿಯಾ ಏಶ್ಯನ್ ಕಪ್ ಟೂರ್ನಿಯಲ್ಲಿ ಭಾಗವಹಿಸಿರುವುದು ಯಾಕೆ? ಮುಹ್ಸಿನ್ ನಖ್ವಿ ಅಧ್ಯಕ್ಷರಾಗಿರುವವರೆಗೆ ತಾನು ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರೆ ಆ ಘೋಷಣೆಯನ್ನು ಭಾರತೀಯರು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದರು ಮಾತ್ರವಲ್ಲ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ಪ್ರಾಣ ತೆತ್ತ ಅಷ್ಟೂ ಜನರಿಗೆ ಮಾಡಿದ ಅರ್ಥಪೂರ್ಣ ಶ್ರದ್ಧಾಂಜಲಿ ಇದಾಗಿರುತ್ತಿತ್ತು. ಆಪರೇಶನ್ ಸಿಂಧೂರದಲ್ಲಿ ಭಾಗವಹಿಸಿದ್ದ ಸೈನಿಕರಿಗೂ ಟೀಮ್ ಇಂಡಿಯಾ ಗೌರವ ಸಲ್ಲಿಸಿದಂತಾಗುತ್ತಿತ್ತು. ಆದರೆ ಟೂರ್ನಿಯಲ್ಲಿ ಭಾಗವಹಿಸುವ ಮೂಲಕ, ದೇಶಕ್ಕಿಂತ ಹಣವೇ ಮುಖ್ಯ ಎನ್ನುವುದನ್ನು ಸರಕಾರ ನಿರ್ಧರಿಸಿತು. ವಿಪರ್ಯಾಸವೆಂದರೆ, ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷ ಈ ದೇಶದ ಗೃಹ ಸಚಿವ ಅಮಿತ್ ಶಾರ ಪುತ್ರ ಜಯ್ ಶಾ. ಪಾಕಿಸ್ತಾನದೊಂದಿಗೆ ಆಟವಾಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇವರಿಗೂ ಇತ್ತು. ಆದರೆ ಹಣದ ಮುಂದೆ ದೇಶದ ಜನರ ಭಾವನೆಗಳು ನಗಣ್ಯವಾಯಿತು. ‘ಕ್ರೀಡಾ ಸ್ಫೂರ್ತಿ’ಯ ಹೆಸರಿನಲ್ಲಿ ಟೂರ್ನಿಯನ್ನು ಸರಕಾರವೂ ಸಮರ್ಥಿಸಿಕೊಂಡಿತು. ಸರಿ, ಕ್ರಿಕೆಟ್‌ನಲ್ಲಿ ರಾಜಕೀಯ ಬೆರೆಸಬಾರದು ಎಂದ ಮೇಲೆ, ಕ್ರೀಡಾಳುಗಳು ಪರಸ್ಪರ ಕೈಕುಲುಕಲು ಹಿಂಜರಿದದ್ದು ಯಾಕೆ? ಒಂದೆಡೆ ಜಯ್ ಶಾ ಮತ್ತು ಪಾಕಿಸ್ತಾನದ ಕ್ರೀಡಾ ಮುಖ್ಯಸ್ಥರು ಜೊತೆಯಾಗಿ ಕುಳಿತುಕೊಂಡು ಕ್ರೀಡೆಯನ್ನು ವೀಕ್ಷಿಸಿದರು. ಒಟ್ಟಿಗೆ ಟೀ ಕುಡಿದರು. ಪಾಕಿಸ್ತಾನ ಮತ್ತು ಭಾರತದ ಮುಖ್ಯಸ್ಥರು ಪರಸ್ಪರ ಕೈಕುಲುಕಿದ ಮೇಲೆ, ಕ್ರೀಡಾಳುಗಳಿಗೆ ಕೈಕುಲುಕಲು ಇರುವ ಸಮಸ್ಯೆಯೇನು?

ಫೈನಲ್‌ನಲ್ಲಿ ಭಾರತೀಯ ಆಟಗಾರರನ್ನು ಮುಂದಿಟ್ಟುಕೊಂಡು ನಮ್ಮ ರಾಜಕೀಯ ನಾಯಕರು ಹೋದ ಮಾನವನ್ನು ಗಳಿಸಿಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಆಪರೇಶನ್ ಸಿಂಧೂರಕ್ಕೂ ಅವಮಾನ ಮಾಡಿದವರು, ಇದೀಗ ಕ್ರಿಕೆಟ್‌ನ ಹಿರಿಮೆಗೂ ಧಕ್ಕೆ ತಂದರು. ಈಗಾಗಲೇ ಭಾರತೀಯ ಕ್ರಿಕೆಟ್ ಆಟಗಾರರ ವರ್ತನೆಯ ಬಗ್ಗೆ ಭಾರತದ ಹಿರಿಯ ಆಟಗಾರರು ತಮ್ಮ ಖೇದವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನೊಳಗೆ ರಾಜಕೀಯವನ್ನು ತರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಕ್ಕೂ ಪಾಕಿಸ್ತಾನ ಆಟಗಾರರು ವಿಶ್ವದರ್ಜೆಯಲ್ಲಿ ಆಟವಾಡುವ ಮಟ್ಟಕ್ಕೆ ಪ್ರತಿಭೆ ಹೊಂದಿರಲಿಲ್ಲ. ಫಲಿತಾಂಶ ಏನಿರಬಹುದು ಎನ್ನುವುದು ಎಲ್ಲರಿಗೂ ಗೊತ್ತೇ ಇತ್ತು. ಈ ನಿರೀಕ್ಷಿತ ಗೆಲುವನ್ನು ‘ರೋಚಕ’ಗೊಳಿಸುವ, ದೇಶಪ್ರೇಮದ ಬಣ್ಣವನ್ನು ಮೆತ್ತಿ ಅದನ್ನು ‘ವ್ಯಾಪಾರ’ಕ್ಕಿಡುವ ಅತ್ಯಂತ ಕೀಳು ಕೃತ್ಯ ಈ ಫೈನಲ್‌ನಲ್ಲಿ ನಡೆಯಿತು. ಈ ಮೂಲಕ ಪೆಹಲ್ಗಾಮ್‌ನಲ್ಲಿ ಹತರಾದ ಅಮಾಯಕರ, ಆಪರೇಶನ್ ಸಿಂದೂರಕ್ಕಾಗಿ ಬಲಿದಾನಗೈದ ಸೈನಿಕರನ್ನು ಅವರು ಮಾರಾಟಕ್ಕಿಟ್ಟಿದ್ದಾರೆ. ಇದು ಭಾರತಕ್ಕೂ ಶೋಭೆಯಲ್ಲ, ಕ್ರಿಕೆಟ್‌ಗೂ ಶೋಭೆಯಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News